Breaking News

ಬಿಜೆಪಿಯಲ್ಲೀಗ ಜಾತಿ ಲೆಕ್ಕಾಚಾರ

ಮಂಗಳೂರು: ವಿಧಾನಸಭೆ ಚುನಾವಣೆ ಸಮಿಪಿಸುತ್ತಿದ್ದಂತೆಯೇ ದಿನಕ್ಕೊಂದು ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ದ.ಕ. ಜಿಲ್ಲೆಯ ಬಿಜೆಪಿ ವಿಷಯಕ್ಕೆ ಬರುವುದಾದರೆ ರಾಜ್ಯ ಮತ್ತು ರಾಷ್ಟ್ರ ನಾಯಕರು ಈಗಾಗಲೇ ಒಂದು ಸುತ್ತಿನ ಸಮೀಕ್ಷೆ ನಡೆಸಿ ಮುಂದಿನ ಅಭ್ಯರ್ಥಿ ಯಾರಾದರೆ ಒಳ್ಳೆಯದು ಎಂಬ ಮಾಹಿತಿ ಪಡೆದಿದ್ದಾರೆ. ಇದರ ಹೊರತಾಗಿಯೂ ಸ್ಥಳೀಯವಾಗಿ ಸಂಭವನೀಯ ಅಭ್ಯರ್ಥಿಗಳು ಮತ್ತು ಸಾಧ್ಯತೆಯ ಚರ್ಚೆಗಳು ನಡೆಯುತ್ತಲೇ ಇವೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಗಳಾಗಬಯಸುವ ನಾಲ್ಕರಿಂದ ಐದು ಮಂದಿ ಪ್ರಭಾವಿ ಆಕಾಂಕ್ಷಿಗಳಿದ್ದಾರೆ. ಕೆಲವರದ್ದು ಹಣದ ಪ್ರಭಾವವಾದರೆ ಮತ್ತೆ ಕೆಲವರದ್ದು ಜಾತಿಯ ಪ್ರಭಾವ. ಮತ್ತೊಂದಿಷ್ಟು ಮಂದಿಯದ್ದು ತಾವು ಮಾಡಿದ ಕೆಲಸ ಮತ್ತು ಪಕ್ಷದ ಕಾರ್ಯಕರ್ತರೊಟ್ಟಿಗಿನ ಒಡನಾಟವೇ ಬಂಡವಾಳ. ಇವೆಲ್ಲಕ್ಕೂ ಮೀರಿದ್ದು ಪ್ರಭಾವಿ ನಾಯಕರೊಂದಿಗಿನಿ ಒಡನಾಟದ ಪ್ರಭಾವ.
ಬಿಜೆಪಿಯಲ್ಲಿ ಈ ಹಿಂದೆ ಜಾತಿ ಲೆಕ್ಕಾಚಾರಕ್ಕಿಂತ ಸಂಘಟನೆ ಮತ್ತು ಸೇವೆಯು ಆಧ್ಯತೆ ಪಡೆಯುತ್ತಿತ್ತು. ಆದರೆ ಈ ಬಾರಿ ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ಲಕ್ಷಣಗಳು ಕಾಣುತ್ತಿವೆ. ಈಗಿನ ಜಾತಿ ಲೆಕ್ಕಾಚಾರವನ್ನೇ ಪರಿಗಣಿಸುವುದಾದರೆ ಇಬ್ಬರು ಬಿಲ್ಲವರು ಮತ್ತು ಮೂವರು ಬಂಟ ಅಭ್ಯರ್ಥಿಗಳು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಸಾಧ್ಯತೆ ಮಾತುಗಳು ಕೇಳಿ ಬರುತ್ತಿವೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಲ್ಲವರಿಗೆ ಪ್ರಾತಿನಿಧ್ಯವೇ ಇರಲಿಲ್ಲ. ಬಂಟರಾಗಿ ರಾಜೇಶ್ ನಾಯ್ಕ ಬಂಟ್ವಾಳದಲ್ಲಿ ಸ್ಪರ್ಧಿಸಿದ್ದರು. ಬಂಟ್ವಾಳದಲ್ಲಿ ಮುಂದಿನ ಚುನಾವಣೆಗೆ ರಾಜೇಶ್ ನಾಯ್ಕ್ ಹೆಸರು ಇದೆ. ಇದರೊಂದಿಗೆ ನಾಗರಾಜ ಶೆಟ್ಟರ ಪ್ರಯತ್ನವೂ ಮುಂದುವರಿದಿದೆ. ನಾಗರಾಜ್ ಶೆಟ್ಟರು ಸುರತ್ಕಲ್‌ನತ್ತಲೂ ಕಣ್ಣು ನೆಟ್ಟಿರುವ ವರದಿಗಳು ಬರುತ್ತಿವೆ. ಇದರ ಹೊರತಾಗಿ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿದ್ದವರು ಚಂದ್ರಹಾಸ ಉಳ್ಳಾಲ ಆ ಬಾರಿಯ ಹೆಸರು ಸಂತೋಷ ರೈ ಬೋಳಿಯಾರು ಮತ್ತೋರ್ವ ಮಹಿಳೆಯ ಹೆಸರೂ ಕೂಡ ಚಾಲ್ತಿಯಲ್ಲಿದೆ. ಬಂಟರ ಸ್ಪರ್ಧಿಸುವ ಮತ್ತೊಂದು ಕ್ಷೇತ್ರ ಪುತ್ತೂರು ಅಥವಾ ಬೆಳ್ತಂಗಡಿ ಆಗುವ ಸಾಧ್ಯತೆ ಇದೆ. ಬೆಳ್ತಂಗಡಿಯಲ್ಲಿ ಬಂಟರಾದರೆ ಪೂತ್ತೂರಿನಲ್ಲಿ ಇಲ್ಲ. ಪೂತ್ತೂರಿನಲ್ಲಿ ಗೌಡರಾದರೆ ಬೆಳ್ತಂಗಡಿಯಲ್ಲಿ ಇಲ್ಲ ಎಂಬ ಲೆಕ್ಕಾಚಾರದ ಮಾತುಗಳು ನಡೆಯುತ್ತಿವೆ. ಬೆಳ್ತಂಗಡಿಯಲ್ಲಿ ರಂಜನ್ ಗೌಡ ಮತ್ತು ಹರೀಶ್ ಪೂಂಜಾರ ಹೆಸರಿದ್ದರೆ, ಪೂತ್ತೂರಿನಲ್ಲಿ ಸಂಜೀವ ಮಂಠಂದೂರು ಮತ್ತು ಅಶೋಕ್ ರೈ ಹೆಸರಿದೆ.
ಇನ್ನೂ ಬಿಲ್ಲವರ ವಿಷಯಕ್ಕೆ ಬರುವುದಾದರೆ ಮುಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಉಮಾನಾಥ್ ಕೊಟ್ಯಾನ್ ಹೆಸರು ಆಲ್ ಮೋಸ್ಟ್ ಫೈನಲ್ ಆದಂತೆಯೇ. ಸಂಘಪರವಾರದ ಕಟ್ಟಾ ಅನುಯಾಯಿ ಎನಿಸುವ ಸತ್ಯಜಿತ್ ಸುರತ್ಕಲ್ ಅವರ ಹೆಸರು ಎರಡು ಮೂರು ಕ್ಷೇತ್ರಗಳಲ್ಲಿ ಓಡಾಡುತ್ತಿದೆ. ಅವರ ಮೊದಲ ಆಯ್ಕೆ ಸುರತ್ಕಲ್ ಯಾನೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ. ಎರಡನೆ ಆಯ್ಕೆ ಮುಲ್ಕಿ ಮೂಡಬಿದ್ರೆ ಕ್ಷೇತ್ರ. ಆದರೆ ಅವರ ಹೆಸರೀಗ ಉಳ್ಳಾಲ ಯಾನೆ ಮಂಗಳೂರು ದಕ್ಷಿಣದಲ್ಲೂ ಓಡಾಡುತ್ತಿದೆ.

Related posts

Leave a Reply