
ವಿಟ್ಲ: ಭಾರತೀಯ ಜನತಾ ಪಾರ್ಟಿ ಪುಣಚ ಗ್ರಾಮ ಸಮಿತಿಯಿಂದ ಪುಣಚ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ, ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅಭಿನಂದನೆ ಸಲ್ಲಿಸಿ, ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಭ್ರಷ್ಟಾಚಾರ ಮುಕ್ತ ಆಡಳಿತ ಬಿಜೆಪಿ ಬೆಂಬಲಿತ ಸದಸ್ಯರಿಂದ ಮಾತ್ರ ಸಾಧ್ಯವಿದೆ. ಅವರ ಆಡಳಿತದಲ್ಲಿ ದಕ್ಷ, ಪಾರದರ್ಶಕ ಆಡಳಿತವನ್ನು ಮತದಾರರು ನಿರೀಕ್ಷಿಸಬಹುದು ಎಂದು ಹೇಳಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ದೇಶದಿಂದ ನಕಲಿ ಗಾಂಧಿಯನ್ನು ಜನರು ತಿರಸ್ಕಾರಿಸಿದ್ದಾರೆ. ಪ್ರಧಾನಿ ಮೋದಿ ವಿಶ್ವದಲ್ಲಿಯೇ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅವಧಿ ಮುಗಿದ ಸರಕಿನಂತಾಗಿದ್ದು, ಜನ ಬೆಂಬಲ ಇಲ್ಲವಾಗಿದೆ ಎಂದು ಹೇಳಿದರು.
ಪುಣಚ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 20 ಸ್ಥಾನದಲ್ಲಿ 18 ಸ್ಥಾನದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಬೆಂಬಲಿತ ಸದಸ್ಯರನ್ನು ಶಾಸಕರು ಶಾಲು ಹೊಂದಿಸಿ, ಸನ್ಮಾನಿಸಿದರು. ಸಭಾ ಕಾರ್ಯಕ್ರಮದ ಮೊದಲು ಪುಣಚ ಗ್ರಾಮದ ಮುಖ್ಯ ರಸ್ತೆಯಲ್ಲಿ ರ್ಯಾಲಿ ನಡೆಯಿತು.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೊಡಂದೂರು, ತಾಲೂಕು ಪಂಚಾಯತ್ ಸದಸ್ಯೆ ಕವಿತಾ ಸುಬ್ಬನಾಯ್ಕ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ ವಿಟ್ಲ, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು.