Header Ads
Header Ads
Header Ads
Breaking News

ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಪ್ರಕರಣ ಪುತ್ತೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಗ್ರಹ

 

ಪುತ್ತೂರು: ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪಿ‌ಎಫ್‌ಐ, ಎಸ್‌ಡಿಪಿ‌ಐ ಮತ್ತು ಕೆ‌ಎಫ್‌ಡಿ ಸಂಘಟನೆಗಳು ನೇರವಾಗಿ ಭಾಗಿಯಾಗಿರುವುದು ರುಜುವಾತಾದ ಕಾರಣ ಈ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ರಾಜ್ಯ ಬಿಜೆಪಿ ಯುವ ಮೊರ್ಚಾ ಆಗ್ರಹಿಸಿದೆ.

ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷ ಹಾಗೂ ಪುತ್ತೂರು ತಾಲೂಕು ಪಂಚಾಯಿತಿ ಸದಸ್ಯರೂ ಆದ ಶಿವರಂಜನ್ ಎಂ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಈ ಮೂರು ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯ ಜತೆ ಸಂಪರ್ಕದಲ್ಲಿವೆ. ನಿಷೇಧಿತ ಸಿಮಿ ಸಂಘಟನೆಯ ಪದಾಧಿಕಾರಿಗಳೇ ಈ ಸಂಘಟನೆಯಲ್ಲೂ ಇರುವುದು ಸಾಬೀತಾಗಿದೆ. ಇದು ಕಾನೂನನ್ನು ಅಣಕ ಮಾಡಿದಂತೆ ಆಗಿದೆ. ಈ ಸಂಘಟನೆಗಳು ಹಲವು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಕೇರಳ, ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಕೂಡ ತನ್ನ ಜಾಲವನ್ನು ಹರಡಿಕೊಂಡಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಹಿಂದೂಗಳ ಕೊಲೆ, ಹಲ್ಲೆ, ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುವುದು, ಶಾಂತಿ ಸೌಹಾರ್ದತೆಗೆ ಭಂಗ ತರುವಂಥ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿವೆ ಎಂದವರು ನುಡಿದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೆಪ್ಟೆಂಬರ್ ಏಳರಂದು ರಾಜ್ಯದ ಐದು ಕಡೆಗಳಿಂದ ಬರುವ ಬೈಕ್ ರ್‍ಯಾಲಿಯು ಮಂಗಳೂರಿನಲ್ಲಿ ಸಮಾಪನಗೊಳ್ಳಲಿದೆ. ಇದರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ೧೦೦೦ ಬೈಕ್‌ಗಳು ಹಾಗೂ ಸುಮಾರು ೩೦೦೦ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶಿವರಂಜನ್ ತಿಳಿಸಿದರು. ಹುಬ್ಬಳ್ಳಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರುಗಳಿಂದ ಬೈಕ್ ರ್‍ಯಾಲಿಗಳು ಮಂಗಳೂರಿಗೆ ಬರಲಿವೆ. ಮೈಸೂರಿನಿಂದ ಬರುವ ರ್‍ಯಾಲಿಯಲ್ಲಿ ಸಂಸದ ಪ್ರತಾಪಸಿಂಹ ನಾಯಕ್ ಅವರು ಅಲ್ಲಿನ ಕಾರ್ಯಕರ್ತರ ಜತೆ ಬೈಕ್‌ನಲ್ಲೇ ಬರಲಿದ್ದಾರೆ. ಪುತ್ತೂರಿನ ಕಾರ್ಯಕರ್ತರು ಮೈಸೂರಿನ ತಂಡದೊಂದಿಗೆ ಸೇರಿಕೊಂಡು ಮಂಗಳೂರಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ನಗರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೀಶ್ ಬಡೆಕ್ಕಿಲ, ಪ್ರಧಾನ ಕಾರ್ಯದರ್ಶಿ ಯುವರಾಜ್, ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷ ಸುನಿಲ್ ದಡ್ಡು, ಪ್ರಧಾನ ಕಾರ್ಯದರ್ಶಿ ಸಂತೋಷ್ ರೈ ಕೈಕಾರ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply