Header Ads
Breaking News

ಬಿಜೆಪಿ ಸದಸ್ಯರಿಗೆ ಜನರ ಕಾಳಜಿ ಇಲ್ಲ ಎಂದು ಅವರ ವರ್ತನೆಯಿಂದ ಸಾಬೀತಾಗುತ್ತಿದೆ : ಎಂ. ವೆಂಕಪ್ಪ ಗೌಡ ಹೇಳಿಕೆ

ಸುಳ್ಯ ನಗರ ಪಂಚಾಯತ್‌ನಲ್ಲಿ ಕಾಂಗ್ರೆಸ್‌ನ 4 ಮಂದಿ ಮಾತ್ರ ಆರಿಸಿ ಬಂದಿದ್ದರೂ ಫಲಿತಾಂಶದ ಮರುದಿನದಿಂದಲೇ ನಮ್ಮ ಜವಾಬ್ದಾರಿ ಅರಿತುಕೊಂಡು ಕೆಲಸ ಆರಂಭಿಸಿದ್ದೇವೆ. ಆದರೆ ಬಿಜೆಪಿ ಸದಸ್ಯರಿಗೆ ಜನರ ಕಾಳಜಿ ಇಲ್ಲ ಎಂದು ಅವರ ವರ್ತನೆಯಿಂದ ಸಾಬೀತಾಗುತ್ತಿದೆ ಎಂದು ನಗರ ಪಂಚಾಯತ್ ಸದಸ್ಯ, ಕಾಂಗ್ರೆಸ್ ನಾಯಕ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಅವರು, ಈ ಬಾರಿ ನಗರ ಪಂಚಾಯತ್ ಅಧಿಕಾರವನ್ನು ನಾವು ಹಿಡಿದರೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವ ಯೋಚನೆ ಹೊಂದಿದ್ದೆವು. ಕುಡಿಯುವ ನೀರು, ವೆಂಟೆಡ್ ಡ್ಯಾಂ ನಿರ್ಮಾಣ, ಒಳಚರಂಡಿ, ತ್ಯಾಜ್ಯ ವಿಲೇವಾರಿ, 110 ಕೆವಿ ಸಬ್‌ಸ್ಟೇಷನ್ ಮೊದಲಾದ ಯೋಜನೆಗಳ ಕಡೆ ನಮ್ಮ ಗಮನವಿತ್ತು. ಆದರೆ ಚುನಾವನೆಯಲ್ಲಿ ನಮಗೆ ಸೋಲಾಯಿತು. ನಾವು ೪ ಮಂದಿ ಮಾತ್ರ ಗೆಲುವು ಸಾಧಸಿದ್ದೇವೆ. ಆದರೂ ನಮ್ಮ ಜವಾಬ್ದಾರಿ ಅರಿತು ನಾವು ಮರುದಿನದಿಂದಲೇ ನಮ್ಮ ವಾರ್ಡ್‌ಗಳಲ್ಲಿ ಕೆಲಸ ಆರಂಭಿಸಿದ್ದೇವೆ. ಫಲಿತಾಂಶದ ಬಳಿಕ ಸಚಿವ ಯು.ಟಿ.ಖಾದರ್ ಸುಳ್ಯಕ್ಕೆ ಬಂದಾಗ ಅವರ ಗಮನಕ್ಕೆ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ತಂದಿದ್ದೇವೆ. ಆದರೆ ಈ ವೇಳೆ ಒಬ್ಬನೇ ಒಬ್ಬ ಬಿಜೆಪಿ ಸದಸ್ಯ ಉಪಸ್ಥಿತರಿರಲಿಲ್ಲ. ಇದು ಅವರಿಗೆ ಜನರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ. ಕಾಂಗ್ರೆಸ್‌ನವರು ಗೆದ್ದರೆ ಜನಪ್ರತಿನಿಧಿಗಳಾಗುತ್ತಾರೆ, ಬಿಜೆಪಿಯವರು ಗೆದ್ದರೆ ಪಕ್ಷದ ಪ್ರತಿನಿಧಿಗಳಾಗುತ್ತಾರೆ ಎಂದು ಹೇಳಿದರು.
ನಮ್ಮ ಸಂಖ್ಯೆ ಕಡಿಮೆ ಇದ್ದರೂ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ನ.ಪಂ.ನೊಂದಿಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದ ಅವರು ಗೆಲ್ಲುವ ತನಕ ನಾವು ಕಾಂಗ್ರೆಸ್. ಗೆದ್ದ ನಂತರ ನಾವು ಪಕ್ಷ ನೋಡುವುದಿಲ್ಲ. ಯಾವ ಪಕ್ಷದವರು ಬಂದರೂ ಕೆಲಸ ಮಾಡಿಕೊಡುತ್ತೇವೆ. ಬೇರೆ ವಾರ್ಡ್‌ನವರು ಬಂದರೂ ಸ್ಪಂದಿಸುತ್ತೇವೆ. ಒಂದು ವೇಳೆ ಬಿಜೆಪಿ ಸದಸ್ಯರು ಕೆಲಸ ಮಾಡುತ್ತಿಲ್ಲವಾದರೆ ನಮ್ಮ ಗಮನಕ್ಕೆ ತಂದರೆ ನಾವು ಕೆಲಸ ಮಾಡಿಕೊಡುತ್ತೇವೆ. ಬಿಜೆಪಿಯವರು ಕೂಡಾ ಇದೇ ರೀತಿಯ ಸ್ಪಂದನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ಹೇಳಿದರು. ನ.ಪಂ. ಸದಸ್ಯರಾದ ಬಾಲಕೃಷ್ಣ ಭಟ್, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *