Header Ads
Breaking News

ಬಿಸಿಲ ಝಳಕ್ಕೆ ಬತ್ತುತ್ತಿರುವ ಕೊಳವೆ ಬಾವಿಗಳು: ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ

ಮಂಜೇಶ್ವರ; ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ಝಲಕ್ಕೆ ಬಾವಿಗಳ ಜೊತೆಯಾಗಿ ಕೊಳವೆ ಬಾವಿಗಳು ಕೂಡಾ ಬತ್ತುತ್ತಿರುವುದು ಜನರಲ್ಲಿ ಆತಂಕವನ್ನು ಮೂಡಿಸಿದೆ.
ಮಳೆ ಸುರಿಯಲು ಇನ್ನೂ ಎರಡು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸೆಕೆಗಾಲದ ಮಳೆ ಕೂಡಾ ಇಲ್ಲವಾಗಿರುವುದು ನೀರಿನ ಸಮಸ್ಯೆಗೆ ಇನ್ನೊಂದು ಕಾರಣವಾಗಿದೆ. ಮಂಜೇಶ್ವರ ಗ್ರಾ. ಪಂ. ನ ತೂಮಿನಾಡು ಕಾಲನಿಯಲ್ಲಿ ಸ್ಥಾಪಿಸಲಾಗಿರುವ ನಾಲ್ಕು ಕೊಳವೆ ಬಾವಿಗಳಿಗೆ ಅಳವಡಿಸಲಾದ ಮೋಟಾರುಗಳ ಪೈಕಿ ಮೂರು ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತಿದ್ದರೂ ಒಂದನ್ನು ಬದಲಿಗಾಗಿ ಮೀಸಲಿಡಲಾಗಿದೆ.
ಆದರೆ ಮೂರು ಕೊಳವೆ ಬಾವಿಗಳಲ್ಲೂ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲನಿವಾಸಿಗಳಿಗೆ ನಿರೀಕ್ಷಿಸಿದಷ್ಟು ನೀರು ಲಭಿಸುವುದಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ತೂಮಿನಾಡು ಪಂಪ್ ಶೆಡ್ ನಿಂದ ಬೆಳಿಗ್ಗೆ 5.45 ಕ್ಕೆ ನೀರು ಸರಬರಾಜು ಆರಂಭಿಸಿ ಆರು ಲೈನ್ ಗಳಿಗೆ ನೀರನ್ನು ಎರಡು ತಾಸುಗಳಂತೆ ಬಿಡಲಾಗುತಿದ್ದರೂ ಸುಮಾರು ಒಂದು ಸಾವಿರಕ್ಕಿಂತಲೂ ಮಿಕ್ಕ ಕುಟುಂಬಗಳಿರುವ ಈ ಪ್ರದೇಶದ ಎಲ್ಲ ಜನರಿಗೂ ಸರಿಯಾದ ರೀತಿಯಲ್ಲಿ ನೀರು ಲಭಿಸುತ್ತಿಲ್ಲ.
ಉತ್ತಮವಾದ ನೀರು ಲಭಿಸುವ ತೂಮಿನಾಡು ಅಲ್ ಫತಾಃ ಜುಮಾ ಮಸೀದಿ ಪರಿಸರದಲ್ಲಿ ಕೊಳವೆ ಬಾವಿ ತೋಡಲು ಶಿಲಾನ್ಯಾಸ ನಡೆದು ವರ್ಷಗಳೇ ಕಳೆದರೂ ಈ ತನಕ ಅದನ್ನು ಪೂರ್ತೀಕರಿಸಲಿಲ್ಲ. ಫಂಡ್ ಲಭಿಸದ ಕಾರಣ ಅದಕ್ಕೆ ಹಿನ್ನಡೆ ಬಂದಿರುವುದಾಗಿ ಕೇರಳ ನೀರು ಸರಬರಾಜು ಇಲಾಖೆಯವರ ಹೇಳಿಕೆ. ಈ ಪ್ರದೇಶಕ್ಕೆ ಇನ್ನೂ ಎರಡು ಕೊಳವೆ ಬಾವಿಗಳು ಲಭಿಸಿದರೆ ಮಾತ್ರ ಕಾಲನಿವಾಸಿಗಳ ಸಮಸ್ಯೆಗೊಂದು ಪರಿಹಾರವನ್ನು ಕಾಣಲು ಸಾಧ್ಯವೆಂಬುದು ಊರವರ ಹೇಳಿಕೆ.
ತಲಪಾಡಿ ಭಾಗದಿಂದ ಕುಂಜತ್ತೂರು, ಉದ್ಯಾವರ ಭಾಗಗಳಿಗೆ ಸರಬರಾಜಾಗುತ್ತಿರುವ ನೀರು ಕೂಡಾ ನಿರ್ಧಿಷ್ಟ ಸ್ಥಳಕ್ಕೆ ತಲುಪದೆ ಅರ್ಧದಲ್ಲೇ ಮೊಟಕುಗೊಳ್ಳುತಿದ್ದೆಯೆಂಬ ಆರೋಪ ಕೂಡಾ ಕೇಳಿ ಬರುತ್ತಿದೆ. ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರಿನ ಸಮಸ್ಯೆಗೊಂದು ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *