Header Ads
Breaking News

ಬಿ.ಸಿ.ರೋಡು- ಪುಂಜಾಲಕಟ್ಟೆ ಸಂಪರ್ಕದ ಹೆದ್ದಾರಿ ರಸ್ತೆ ನಿರ್ಮಾಣ : ಮಳೆಗಾಲ ಮುಂಚಿತವಾಗಿ ರಸ್ತೆ ಪೂರ್ಣಗೊಳ್ಳುವ ಸಾಧ್ಯತೆ

ಬಿ.ಸಿ.ರೋಡಿನಿಂದ ಧರ್ಮಸ್ಥಳ ಸಂಪರ್ಕದ ರಸ್ತೆ ಮಧ್ಯೆ ಪುಂಜಾಲಕಟ್ಟೆಯವರೆಗೆ ಅಲ್ಲಲ್ಲಿ ಕಾಣಸಿಗುವ ಸೂಚನಾಫಲಕಗಳಿವು. ಬಿ.ಸಿ.ರೋಡು- ಪುಂಜಾಲಕಟ್ಟೆ ಸಂಪರ್ಕದ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ವೇಗ ಪಡೆದುಕೊಂಡಿದೆ. ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆಯವರಗಿನ ಹಳೆಯ ಚಿತ್ರಣವೇ ಬದಲಾಗಿದ್ದು ಅಭಿವೃದ್ದಿ ಕಾಮಗಾರಿಗಾಗಿ ರಸ್ತೆ ಪಕ್ಕದ ಮರಗಳು ನೆರಕ್ಕುರುಳಿವೆ, ಗುಡ್ಡಗಳು ನೆಲಸಮವಾಗಿದೆ. ಇಳಿಜಾರು ಹಾಗೂ ಗುಂಡಿ ಪ್ರದೇಶದಲ್ಲಿ ಮಣ್ಣು ತುಂಬುವುದು, ಡಾಮಾರೀಕರಣ, ಕಿರು ಸೇತುವೆ ನಿರ್ಮಾಣ, ಮೊದಲಾದ ಕಾರ್ಯಗಳು ನಡೆಯುತ್ತಿದ್ದು ಮಳೆಗಾಲದ ಮುಂಚೆ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ಬಿ.ಸಿ.ರೋಡಿನಿಂದ ಪುಂಜಾಲಕಟೆಯವರೆಗೆ ಸಾಗುವಾಗ ಸಾಕಷ್ಟು ತಿರುವು ಮುರುವು ರಸ್ತೆಗಳು ವಾಹನ ಚಾಲಕರನ್ನು ಎದುರುಗೊಳ್ಳುತ್ತಿತ್ತು. ಈ ತಿರುವು ರಸ್ತೆಗಳಿಂದಾಗಿಯೇ ಆಗಾಗ ಸಣ್ಣಪುಟ್ಟ ಅಪಘಾತಗಳು ಈ ರಸ್ತೆಯಲ್ಲಿ ನಡೆಯುತ್ತಿದ್ದುದ್ದು ಸಾಮಾನ್ಯ. ಧರ್ಮಸ್ಥಳ, ಚಿಕ್ಕಮಗಳೂರಿಗೆ ಹೋಗುವಂತಹ ಪ್ರವಾಸಿಗಳಿಗೂ ತಿರುವು ರಸ್ತೆಗಳಿದಾಗಿ ಪ್ರಯಾಣ ಕಷ್ಟವಾಗುತ್ತಿತ್ತು. ಸರಾಗ ಪ್ರಯಾಣಕ್ಕೆ ಅಡ್ಡಿ ಉಂಟು ಮಾಡುತ್ತಿದ್ದ ಈ ರಸ್ತೆಗಳಿಂದ ಪ್ರಯಾಣಿಕರಿಗೆ ಮುಕ್ತಿ ಸಿಗಲಿದೆ. ಬಂಟ್ವಾಳದಿಂದ ವಗ್ಗದವರೆಗೆ 15 ಕಿಂತ ಹೆಚ್ಚು ತಿರುವುಗಳನ್ನು ನೇರಗೊಳಿಸಲಾಗುತ್ತಿದೆ. ಈ ಸಂದರ್ಭ ಏರು ಪ್ರದೇಶ, ಕಲ್ಲುಗಳಿಂದ ಕೂಡಿದ ಗುಡ್ಡೆಗಳ ಕಲ್ಲು, ಮಣ್ಣು ತೆಗೆದು ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ. ಈ ಸಂದರ್ಭ ಗುಡ್ಡದ ಮೇಲೆ ವಾಲಿ ನಿಂತಿದ್ದ ಮರಗಳೆಲ್ಲವೂ ಧರಶಾಹಿಯಾಗಿದೆ. ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲಿ ಸಮನಾಂತರವಾಗಿ ಅಲವಡಿಸುವ ಕಾರ್ಯ ನಡೆಯುತ್ತಿದೆ. ತಿರುವುಗಳನ್ನು ನೇರವಾಗಿಸುವ ಸಂದರ್ಭ ಕೆಲವಡೆ ಮನೆಗಳಿದ್ದು ಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ. ಹಂಚಿಕಟ್ಟೆಯಿಂದ ವಗ್ಗದವರೆಗೆ ರಸ್ತೆಯ ಒಂದು ಪಾಶ್ರ್ವದಲ್ಲಿ ಕಡಿದಾದ ಇಳಿಜಾರು ಹಾಗೂ ಕಿರು ನದಿ ಇರುವುದರಿಂದ ಕೊಡ್ಯಮಲೆ ಅರಣ್ಯ ಪ್ರದೇಶದ ಬಳಿ ಗುಡ್ಡವನ್ನು ಸಮತಟ್ಟುಗೊಳಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಪುಂಜಾಲಕಟ್ಟೆಯಿಂದ ಬಾಂಬಿಲ ಮಸೀದಿವರೆಗೆ ಭಾಗಶ: ಕಾಮಗಾರಿ ಪೂರ್ತಿಗೊಂಡಿದ್ದು ಬಾಂಬಿಲ ಮಸೀದಿಯಿಂದ ಬಾಂಬಿಲ ಸೇತುವೆವರೆಗೆ ಪೇಟೆ ವಿಸ್ತರಣೆಯಾಗಬೇಕಿದೆ. ಬಾಂಬಿಲ ಪೇಟೆ ರಸ್ತೆ ಬದಿ ಮನೆಗಳ ತೆರವು ಇನ್ನಷ್ಟೇ ಆಗಬೇಕಿದೆ. ಮೂರ್ಜೆ ಬಳಿ ತಿರುವು ಜಾಗ ಸ್ವಾಧೀನವಾಗದೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ವಗ್ಗ ಪೇಟೆ ಅಗಲೀಕರಣ
ಕಾವಳಪಡೂರು ಗ್ರಾಮದ ವಗ್ಗ ಸಣ್ಣ ಜಂಕ್ಷನ್. ವ್ಯಾಪಾರಿ ಮಳಿಗೆಗೆಳು, ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಶಾಖೆಗಳಿರುವ ವಗ್ಗದ ಮೂಲಕವೇ ಭೂ ಕೈಲಾಸ ಕಾರಿಂಜೇಶ್ವರ ದೇವಸ್ಥಾನಕ್ಕೂ ಹೋಗಬೇಕು. ಕಿಷ್ಕಿಂದೆಯಂತಿದ್ದ ವಗ್ಗ ಪ್ರಮುಖ ಪಟ್ಟಣವಾಗಿ ಅಭಿವೃದ್ದಿಗೊಳ್ಳುತ್ತಿದ್ದರೂ ಇಕ್ಕಟಾದ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಜನರು ತೊಂದರೆ ಪಡುವ ಸ್ಥಿತಿ ಇತ್ತು. ಇದೀಗ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ರಸ್ತೆ ಪಕ್ಕ ಇದ್ದ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಗೊಳಿಸಿರುವುದರಿಂದ ವಗ್ಗದ ನೋಟವೇ ಬದಲಾಗಿದೆ.
ಧೂಳಿನ ಅವಾಂತರ:
ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಊರಿಡೀ ಧೂಳು ತುಂಬಿಕೊಂಡಿದೆ. ಈ ರಸ್ತೆಯ ಮೂಲಕ ಚಲಿಸುವ ಎಲ್ಲಾ ವಾಹನಗಳು ಧೂಳು ಹೊತ್ತು ಸಾಗಿದರೆ ರಸ್ತೆ ಪಕ್ಕದ ಅಂಗಡಿಗಳು, ಮಳೆಗೆಗಳು, ಮನೆಗಳೆಲ್ಲಾ ಧೂಳು ಆವರಿಸಿಕೊಂಡು ಬಣ್ಣ ಬದಲಿಸಿದೆ. ಈ ರಸ್ತೆಯ ಮೂಲಕ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಧೂಳೇ ಆಹಾರ. ತಾನು ಧರಿಸಿದ ಬಟ್ಟೆಯ ಬಣ್ಣ ಯಾವುದೆನ್ನುವ ಗೊಂದಲಕ್ಕೆ ಕಾರಣವಾಗುತ್ತಿದೆ ಈ ಧೂಳಿನ ಗೋಳು.
4 ದೊಡ್ಡ ಸೇತುವೆ, 65 ಕಿರು ಸೇತುವೆ:
ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆಯವರೆಗೆ 4 ದೊಡ್ಡ ಸೇತುವೆ ಹಾಗೂ 65 ಕಿರು ಸೇತುವೆ ನಿರ್ಮಾಣಗೊಳ್ಳಲಿದೆ. ಮಣ್ಣಿಹಳ್ಳದ ಬಳಿ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದರೆ, ಆಲಂಪುರಿ ಬಳಿ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. 65 ಸಣ್ಣ ಸೇತುವೆಗಳು ನಿರ್ಮಾಣಗೊಳ್ಳಲಿದ್ದು ಬಹುತೇಕ ಪೂರ್ಣಗೊಂಡಿದೆ.

Related posts

Leave a Reply

Your email address will not be published. Required fields are marked *