Header Ads
Header Ads
Breaking News

ಬಿ.ಸಿ ರೋಡ್‌ನಲ್ಲಿ ಕರಾವಳಿ ಕಲೋತ್ಸವ : ಚಿಣ್ಣರಲೋಕ ಮೋಕೆದ ಕಲಾವಿದೆರ್ ಆಶ್ರಯದಲ್ಲಿ ಕಾರ್ಯಕ್ರಮ

ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ವರ್ಣರಂಜಿತ ಕರಾವಳಿ ಕಲೋತ್ಸವ ಶುಕ್ರವಾರ ಸಂಜೆ ಆರಂಭಗೊಂಡಿತು.

ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಲ್ಲಿ ಜಾನಪದ ದಿಬ್ಬಣಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶ್ರೀ ಶಾರದಾ ಆರ್ಟ್ಸ್ ಜಾನಪದ ಗೊಂಬೆ ಬಳಗ ಮೊಗರ್ನಾಡುವಿನ ಕೀಲುಕುದುರೆ, ಗೊಂಬೆ ಬಳಗ, ಬಣ್ಣದ ಕೊಡೆಗಳು, ಮಂಡ್ಯದ ಶ್ರೀ ಶಾರದಾಂಬಾ ಜನ್ಮಭೂಮಿ ಜಾನಪದ ಕಲಾತಂಡದಿಂದ ಪೂಜಾಕುಣಿತ, ಚಿಕ್ಕಮಗಳೂರು ಕರಾಡೆ ಬ್ರದರ್ಸ್ ಡೊಳ್ಳು ಯುವಕರ ಸಂಘದಿಂದ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಬಸವಶ್ರೀ ಮಹಿಳಾ ವೀರಗಾಸೆ ಕಲಾತಂಡದಿಂದ ಮಹಿಳಾ ವೀರಗಾಸೆ, ಮೊಗರ್ನಾಡು ಶ್ರೀ ಶಾರದಾ ಚೆಂಡೆ ಬಳಗದಿಂದ ಚೆಂಡೆ ಮೇಳ, ಮಂಗಳೂರುಬರ್ಕೆ ಶ್ರೀ ಗೋಕರ್ಣನಾಥೇಸ್ವರ ನಾಸಿಕ್ ಬ್ಯಾಂಡ್ ತಂಡದಿಂದ ನಾಸಿಕ್ ಬ್ಯಾಂಡ್, ಮೊಗರ್ನಾಡು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸದಸ್ಯರಿಂದ ಸ್ವಾಗತ ಕಲಶ, ದಿನೇಶ್ ಸಜಿಪ ಮತ್ತು ತಂಡದಿಂದ ಕೊಂಬು ಕಹಳೆ, ಶ್ರೀ ಶಾರದಾ ನಾಸಿಕ್ ಬ್ಯಾಂಡ್ ತಂಡದ ನಾಸಿಕ್ ಬ್ಯಾಂಡ್ ಮತ್ತು ನವೋದಯ ಸ್ವಸಹಾಯ ಗುಂಪು ಬಂಟ್ವಾಳದಿಂದ ಸ್ವಾಗತಛತ್ರಿ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಅತಿಥಿಗಳು ತೆರೆದಜೀಪಿನಲ್ಲಿ ಸಾಗಿದರು.

ಕರಾವಳಿ ಕಲೋತ್ಸವವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಅವರು ಮಾತನಾಡಿ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡರೆ, ಮನುಷ್ಯನ ಜೀವನ ಸುಖ, ನೆಮ್ಮದಿಯಿಂದ ಇರಲು ಸಾಧ್ಯ. ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಪ್ರತಿವರ್ಷವೂ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು. ಇದೇ ವೇಳೆ ಅವರು ಹಿರಿಯ ರಂಗಕರ್ಮಿ ಮಂಜು ವಿಟ್ಲ ಅವರನ್ನು ಕರಾವಳಿ ಸೌರಭ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಸ್ತುಪ್ರದರ್ಶನ ಮಳಿಗೆ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್‌ನ್ನು ವಿಧಾನಪರಿಷತ್ತು ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಚಿಣ್ಣರ ಪ್ರಶಸ್ತಿಯನ್ನು ಭಾಗ್ಯಶ್ರೀ ಅವರಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕಲೋತ್ಸವದ ಅಧ್ಯಕ್ಷ ಸುದರ್ಶನ ಜೈನ್, ಚಿಣ್ಣರ ಲೋಕದ ಸ್ಥಾಪಕ ಮೋಹನದಾಸ ಕೊಟ್ಟಾರಿ, ಗೌರವಾಧ್ಯಕ್ಷ ಪಿ.ಜಯರಾಮ ರೈ, ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಆಡಳಿತ ಪಾಲುದಾರ ಅಶೋಕ್ ಕುಮಾರ್ ಬರಿಮಾರ್, ಚಿಣ್ಣರೋತ್ಸವದ ಅಧ್ಯಕ್ಷ ಮಾ.ಅಭಿಷೇಕ್, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply