Header Ads
Header Ads
Breaking News

ಬಿ.ಸಿ ರೋಡ್‌ನಲ್ಲಿ ನಡೆದ ತಾ.ಪಂ. ಸಭೆ:ಸರ್ವೀಸ್ ರಸ್ತೆಯಲ್ಲಿ ಬಸ್‌ಗಳ ಸಂಚಾರ ಸ್ಥಗಿತಕ್ಕೆ ಆಕ್ರೋಶ

ಬಂಟ್ವಾಳ: ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸುಗಳ ಸಂಚಾರವನ್ನು ಪೊಲೀಸರು ಏಕಾಏಕಿ ಸ್ಥಗಿತ ಗೊಳಿಸಿದ ಕಾರಣ ಸಾರ್ವಜನಿಕ ವಲಯದಲ್ಲಿ ಪರ- ವಿರೋಧ ಚರ್ಚೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವಿಕ್ರಂ ವಿ.ಆಮ್ಟೆ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು.

ಸಾರ್ವಜನಿಕರು, ಪೊಲೀಸರು, ರಿಕ್ಷಾಚಾಲಕರು, ಆರ್‌ಟಿಓ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದು ಬಿ.ಸಿ.ರೋಡಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗದೇ ಇದ್ದರೂ ಕೂಡ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾದ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಎಡಿಷನಲ್ ಎಸ್ಪಿ ಭರವಸೆ ನೀಡಿದರು.ಬಂಟ್ವಾಳ ಟ್ರಾಫಿಕ್ ಎಸೈ ಮಂಜುನಾಥ್ ವಿಷಯ ಪ್ರಸ್ತಾಪಿಸಿ ಸರ್ವಿಸ್ ರಸ್ತೆ ಅಗಲ ಕಿರಿದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ, ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಹಾಗೂ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಸಾಮಾಜಿಕ ಹೋರಾಟಗಾರ ಪ್ರಭಾಕರ ದೈವಗುಡ್ಡೆ ಮಾತನಾಡಿ ಸರ್ವಿಸ್ ರಸ್ತೆಯನ್ನು ಬಿಟ್ಟು ಮೇಲ್ಸೆತುವೆಯ ಮೇಲಿಂದ ಬಸ್ಸುಗಳು ಸಂಚರಿಸಿದರೆ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಇದರ ಬದಲು ಸರ್ವಿಸ್ ರಸ್ತೆಯಲ್ಲಿ ಬಸ್ಸುಗಳು ಗಂಟೆಗಟ್ಟಲೆ ನಿಲ್ಲುವ ಬದಲು ಪ್ರಯಾಣಿಕರನ್ನು ಹತ್ತಿ ಇಳಿಸಲು ಮಾತ್ರ ಅವಕಾಶ ಕೊಡಬೇಕು ಮತ್ತು ಪೊಳಲಿ, ಕಟೀಲು ಭಾಗಗಳಿಗೆ ಹೋಗುವ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಟಿಕಾಣಿ ಹೂಡವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ ಬಿ.ಸಿ.ರೋಡಿನಲ್ಲಿ ಫ್ಲೈ ಓವರ್ ದೊಡ್ಡ ಸಮಸ್ಯೆ. ಸರಿಯಾದ ಪುಟ್‌ಪಾತ್ ಇಲ್ಲದೆ ಇರುವುದರಿಂದ ಜನರಿಗೆ ನಡೆದಾಡಲು ತೊಂದರೆ. ಪಟುಪಾತ್ ಅತಿಕ್ರಮಣ ಮಾಡಿಕೊಂಡು ಕಟ್ಟಡಗಳು, ಅವುಗಳಿಗೆ ಅಳವಡಿಸಿದ ಶೀಟ್‌ಗಳು ಇವೆ. ಅದನ್ನು ತೆರವುಗೊಳಿಸಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದರು. ಬಂಟ್ವಾಳ ಉಪವಿಭಾಗದ ಎಎಸ್ಪಿ ಸೈದುಲ್ ಅಡಾವತ್ ಮಾತನಾಡಿ ಮುಖ್ಯ ಸಮಸ್ಯೆಗೆ ಪರಿಹಾರ ಕಂಡಿಕೊಳ್ಳುವಾಗ ಕೆಲವರಿಗೆ ತೊಂದರೆ ಉಂಟಾಗುತ್ತದೆ. ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಬಳಿಯೇ ಬಸ್ಸುಗಳ ನಿಲುಗಡೆಗೆ ಅವಕಾಶ ನೀಡಿದ್ದಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ತನ್ನ ನಿಲುವು ವ್ಯಕ್ತಪಡಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆದಿದ್ದು ಈ ಎಲ್ಲಾ ಸಲಹೆಗಳ ಆಧಾರದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಪರಿಹಾರ ಕಂಡು ಕೊಳ್ಳುವುದಾಗಿ ಎಡಿಷನಲ್ ಎಸ್ಪಿ ತಿಳಿಸಿದರು.
ವೇದಿಕೆಯಲ್ಲಿ ಎಎಸ್ಪಿ ಸೈದುಲ್ ಅಡಾವತ್, ವೃತ್ತ ನಿರೀಕ್ಷಕ ಶರಣ್ ಗೌಡ ಹಾಜರಿದ್ದರು. ಬಂಟ್ವಾಳ ಗ್ರಾಮಾಂತರ ಎಸೈ ಪ್ರಸನ್ನ ಹಾಜರಿದ್ದರು.

Related posts

Leave a Reply

Your email address will not be published. Required fields are marked *