Header Ads
Breaking News

ಬಿ.ಸಿ ರೋಡ್ ಸುಂದರೀಕರಣ ಯೋಜನೆಗೆ ಚಾಲನೆ

ಬಂಟ್ವಾಳ: ಬಹುನಿರೀಕ್ಷಿತ ಬಿ.ಸಿ.ರೋಡು ನಗರ ಸುಂದರೀಕರಣ ಯೋಜನೆಗೆ ಸೋಮವಾರ ಚಾಲನೆ ಸಿಕ್ಕಿದೆ. ಬಿ.ಸಿ.ರೋಡಿನ ಮೇಲ್ಸೆತುವೆಯ ಅಡಿ ಭಾಗದಲ್ಲಿ ನಗರ ಸುಂದರೀಕರಣ ಯೋಜನೆಯ ಆರಂಭಿಕ ಹಂತದ ಕಾಮಗಾರಿ ಆರಂಭಗೊಂಡಿದೆ. ಬಿ.ಸಿ.ರೋಡಿನ ಸನ್ಮಾನ್ ಹೊಟೇಲ್‍ನ ಮುಂಭಾಗ ಮೇಲ್ಸೆತುವೆಯ ಅಡಿಭಾಗವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸುವ ಕಾರ್ಯ ನಡೆದಿದ್ದು, ಮಂಗಳೂರಿನ ಮೊಗೆರೋಡಿ ಕನ್‍ಸ್ಟ್ರಕ್ಷನ್ ಮೂಲಕ ಶೌಚಾಲಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

ಅವ್ಯವಸ್ಥೆಗಳ ಆಗರವಾಗಿದ್ದ ಬಂಟ್ವಾಳ ತಾಲೂಕು ಕೇಂದ್ರ ಸ್ಥಾನ ಬಿ.ಸಿ.ರೋಡನ್ನು ಸುಂದರಗೊಳಿಸ ಬೇಕೆನ್ನುವುದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಅವರ ಬಹುದಿನಗಳ ಕನಸು. ಈ ನಿಟ್ಟಿನಲ್ಲಿ ಉತ್ತಮ ವಿನ್ಯಾಸದ ನಗರವನ್ನಾಗಿ ರೂಪಿಸಬೇಕೆನ್ನುವ ಉದ್ದೇಶದಿಂದ ಆರಂಭಗೊಂಡಿರುವ ಯೋಜನೆ ಇದು.

ಮೊದಲ ಹಂತದ ಕಾಮಗಾರಿಯಾಗಿ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಪುರುಷರು ಹಾಗೂ ಮಹಿಳೆಯರಿಗೆ ತಲಾ ಎರಡರಂತೆ ಒಟ್ಟು 4 ಶೌಚಾಲಯ ಇಲ್ಲಿ ನಿರ್ಮಾಣಗೊಳ್ಳಲಿದೆ. ಪುರುಷರಿಗೆ 6 ಹಾಗೂ ಮಹಿಳೆಯರಿಗೆ 4 ಸೇರಿದಂತೆ ಒಟ್ಟು 10 ಮೂತ್ರಾಲಯ ನಿರ್ಮಾಣಗೊಳ್ಳಲಿದೆ. ವಿಕಲ ಚೇತನರಿಗೂ ಅನುಕೂಲವಾಗುವ 1 ಶೌಚಾಲಯವೂ ನಿರ್ಮಾಣಗೊಳ್ಳಲಿದೆ. ಬಳಿಕ ಮೇಲ್ಸೆತುವೆಯಡಿ ಭಾಗದಲ್ಲಿ ಇಂಟರ್‍ಲಾಕ್ ಅಳವಡಿಸುವ ಕೆಲಸ, ಪೈಂಟಿಂಗ್, ಗಾರ್ಡನ್, ಪಾರ್ಕಿಂಗ್, ಕಾಮಗಾರಿಗಳು ಜೊತೆಯಾಗಿ ನಡೆಯಲಿದೆ.

ಬಿ.ಸಿ.ರೋಡು ನಗರ ಸುಂದರೀಕರಣ ಯೋಜನೆಯಡಿ ಮುಖ್ಯರಸ್ತೆಯಿಂದ ಕೈಕುಂಜೆ ಸಂಪರ್ಕ ರಸ್ತೆಯ ಹಳೆ ರಂಗಮಂದಿರದವರೆಗಿನ ರಸ್ತೆಯನ್ನು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲು ತೀರ್ಮಾನಿಸಲಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಲಿದೆ. ರಸ್ತೆ ವಿಭಾಜಕ, ಬೀದಿ ದೀಪಗಳಿರುವ ಆಕರ್ಷಕ ರಸ್ತೆಯಾಗಿ ಮೂಡಿ ಬರಲಿದೆ. ಕೆಎಸ್‍ಆರ್‍ಟಿಸಿ ಬಸ್ಸು ನಿಲ್ದಾಣದ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವೃತ್ತ ನಿರ್ಮಾಣಗೊಳ್ಳಲಿದ್ದು ಈ ಬಗ್ಗೆ ಕೆಎಸ್‍ಆರ್‍ಟಿಸಿ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾ. ಹೆದ್ದಾರಿ ಇಲಾಖೆಯ ಅನುಮತಿ ಸಿಕ್ಕ ಕೂಡಲೇ ವೃತ್ತ ನಿರ್ಮಾಣದ ಕಾರ್ಯ ಆರಂಭಗೊಳ್ಳಲಿದೆ. ಮುಂದಿನ ಹಂತಲ್ಲಿ ಬಸ್ ಬೇ, ಸಿಸಿ ಕ್ಯಾಮರ ಅಳವಡಿಕೆ, ದ್ವಿಚಕ್ರ ವಾಹನಗಳಿಗ್ ಪಾರ್ಕಿಂಗ್, ಸರ್ವಿಸ್ ರಸ್ತೆಯಲ್ಲಿ ಪುಟ್‍ಪಾತ್ ಮೊದಲಾದ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.

Related posts

Leave a Reply

Your email address will not be published. Required fields are marked *