Header Ads
Breaking News

ಬುದ್ಧಿಮಾಂದ್ಯರಿಗೆ ಪ್ರೀತಿಯ ತಾಣವಾಗಿದೆ ಪುತ್ತೂರಿನ ಬನ್ನೂರು ಗ್ರಾಮದಲ್ಲಿರುವ ವಸತಿ ನಿಲಯ

ಪುತ್ತೂರು; ಅದೊಂದು ಬಾಡಿಗೆ ಮನೆ. ಅಲ್ಲಿ5 ವರ್ಷಗಳ ಹಿಂದೆ ಮದುವೆಯಾದ ಯುವಕ ದಂಪತಿಗಳು. ಅವರಿಗೊಂದು ಪುಟ್ಟ ಮಗು. ಇಷ್ಟೇ ಆಗಿದ್ದರೆ ಇದೊಂದು ಸುದ್ದಿಯೇ ಅಲ್ಲ. ಈ ಮನೆಯಲ್ಲಿ ಬೇರೆ 15 ಮಂದಿ ಮಕ್ಕಳಿದ್ದಾರೆ. ಅವರು 18ರಿಂದ 52 ವರ್ಷದ ಬುದ್ಧಿಮಾಂದ್ಯ ಮಕ್ಕಳು…!ಪುತ್ತೂರು ನಗರದ ಬನ್ನೂರು ಗ್ರಾಮದ ಬಲಮುರಿ ಗಣಪನ ದೇವಳದ ಸಮೀಪ ಇರುವ ಪ್ರಜ್ಞಾ ಬುದ್ದಿಮಾಂದ್ಯ ಮಕ್ಕಳ ವಸತಿ ನಿಲಯವೇ ಈ ಮಕ್ಕಳಿರುವ ಬಾಡಿಗೆ ಮನೆ. ೩೭ ಹರೆಯದ ಅಣ್ಣಪ್ಪ ಹಾಗೂ ಇವರ ಪತ್ನಿ ಜ್ಯೋತಿ ಈ ಮಕ್ಕಳ ಲಾಲನೆ ಪಾಲನೆ ಮಾಡುತ್ತಿರುವ ದಂಪತಿಗಳು.ತಮಗೇನು ಬೇಕು. ನಾವೇನು ಮಾಡಬೇಕು. ಹೇಗಿರಬೇಕು ಎಂಬ ಯಾವ ವಿಚಾರವೂ ಗೊತ್ತಿಲ್ಲದ ಈ ಬುದ್ಧಿಮಾಂದ್ಯರ ಬದುಕಿನಲ್ಲಿ ಸ್ಪಂದನ ಟ್ರಸ್ಟ್ ಹೆಸರಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ’ಪ್ರವೇಶ’ ಮಾಡಿದವರು ಮಡಿಕೇರಿ ಮೂಲದ ಅಣ್ಣಪ್ಪ. ಇವರ ಸಹಧರ್ಮಿಣಿಯಾಗಿ ಪ್ರಸ್ತುತ ಬುದ್ಧಿಮಾಂದ್ಯ ಮಕ್ಕಳ ಬದುಕಿನಲ್ಲಿ ಸಹಚಾರಣಿಯಾಗಿರುವ ಸುಳ್ಯ ಪದವು ಮೂಲದ ಜ್ಯೋತಿ. ತನ್ನ ದೊಡ್ಡಪ್ಪನ ಮಗನನ್ನು ಬುದ್ಧಿಮಾಂದ್ಯ ಸ್ಥಿತಿಯಲ್ಲಿ ನೋಡಿ ಹುಟ್ಟಿಕೊಂಡ ಚಿಂತನೆ ಇದು. ಪ್ರಸ್ತುತ ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಯ 15 ಮಂದಿ ಇವರ ಆರೈಕೆಯಲ್ಲಿದ್ದಾರೆ. ತಿಂಗಳಿಗೆ ಸುಮಾರು ರೂ.25ಸಾವಿರ ವೆಚ್ಚ ಮಾಡಲೇಬೇಕು. ಕೆಲವರು ತಮ್ಮ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಇವರಿಗೆ ಒಂದಷ್ಟು ಹಣ ಕೊಡ್ತಾರೆ. ಪುತ್ತೂರು ಮಹಾಲಿಂಗೇಶ್ವರ ದೇವಳದಿಂದ ಮಧ್ಯಾಹ್ನದ ಊಟನೂ ಸಿಗುತ್ತದೆ. ಹಾಗಿದ್ದರೂ ಈ ಬುದ್ಧಿಮಾಂದ್ಯ ಮಕ್ಕಳಿಗೆ ಸಮರ್ಪಕವಾದ ವ್ಯವಸ್ಥೆಗೆ ಇನ್ನೂ ನೆರವು ಬೇಕು.ಈಗ ಈ ಬುದ್ಧಿಮಾಂದ್ಯರ ವಸತಿ ನಡೆಯುತ್ತಿರುವ ಮನೆಗೆ ತಿಂಗಳಿಗೆ ರೂ.7500 ಬಾಡಿಗೆ ನೀಡಬೇಕು. ಇವರಿಗೆ ಒಂದಷ್ಟು ಚಟುವಟಿಕೆ ಮಾಡಿದರೆ ಅವರು ಉಲ್ಲಾಸದಿಂದ ಇರುತ್ತಾರೆ. ಮನೆ ಮತ್ತು ಅದರ ಮುಂದೆ ಸ್ವಲ್ಪ ಜಾಗ ಸಿಕ್ಕರೆ ಗಿಡ ನೆಡುವುದು. ಅದಕ್ಕೆ ನೀರು ಹಾಕುವುದು ಮುಂತಾದ ಕೆಲಸ ಮಾಡಲು ಅನುಕೂಲ ಎನ್ನುವುದು ಅಣ್ಣಪ್ಪ ಅವರ ಯೋಚನೆ. ಸದಾ ಬೆಂಬಲವಾಗಿ ನಿಂತಿರುವ ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ ನ ಅಧ್ಯಕ್ಷೆ ನಯನಾ ರೈ ಅವರ ಸಹಕಾರವನ್ನು ಇಬ್ಬರೂ ನೆನಪಿಸಿಕೊಳ್ಳುತ್ತಾರೆ.ತಿಂಗಳಿಗೊಮ್ಮೆ ಇವರ ಆರೋಗ್ಯ ನೋಡಿಕೊಳ್ಳಲು ಬರುವ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಜಗದೀಶ್ ಅವರ ಪ್ರಕಾರ ಇದೊಂದು ಅತ್ಯಂತ ಕಷ್ಟದಾಯಕವಾಗಿರುವ ಅದ್ಭುತ ಸೇವೆ. ಬುದ್ಧಿಮಾಂದ್ಯರನ್ನು ಮುಖ್ಯವಾಹಿನಿಗೆ ತರುವ ಈ ಕಾಯಕಕ್ಕೆ ಯಾರಿಂದಲೂ ಬೆಲೆ ಕಟ್ಟಲಾಗದು. ಮನೆಯವರಿಗೂ ಬೇಡವಾದ ಇವರನ್ನು ಪ್ರೀತಿಯಿಂದ ಜೋಪಾನ ಮಾಡುವ ಅಣ್ಣಪ್ಪ ದಂಪತಿಗಳ ಕಾರ್ಯ ಅತ್ಯಂತ ಶ್ಲಾಘನೀಯ.ಪ್ರಸ್ತುತ ಬಾಡಿಗೆ ಮನೆಯಲ್ಲಿರುವ ಈ ಪ್ರಜ್ಞಾ ಬುದ್ಧಿಮಾಂದ್ಯರ ಕೇಂದ್ರಕ್ಕೆ ಸ್ವಂತ ಕಟ್ಟಡ, ಬುದ್ಧಿಮಾಂದ್ಯರ ಚಟುವಟಿಕೆಗಳಿಗೆ ಸ್ವಲ್ಪ ವಿಶಾಲವಾದ ಸ್ಥಳ, ಇವರ ಖರ್ಚು ವೆಚ್ಚಗಳಿಗಾಗಿ ದಾನಿಗಳ ನೆರವು, ಸರಕಾರದಿಂದ ಮೂಲಭೂತ ಸೌಲಭ್ಯ ಇಷ್ಟು ದೊರೆತರೆ ಈ ಬುದ್ಧಿಮಾಂದ್ಯರ ಬದುಕನ್ನು ಸಹನೀಯವಾಗಿಸಬಹುದಾಗಿದೆ. ಈ ಬುದ್ಧಿಮಾಂದ್ಯ ಮಕ್ಕಳನ್ನು ಒಡಹುಟ್ಟಿದವರಂತೆ ಪೋಷಿಸುತ್ತಿರುವ ಅಣ್ಣಪ್ಪ ದಂಪತಿಗಳಿಗೆ ನೆರವು ನೀಡಲು ದಾನಿಗಳು ಇದನ್ನು ಬಳಸಿಕೊಳ್ಳಬಹುದು.

ಕರ್ನಾಟಕ ಬ್ಯಾಂಕ್
ಪುತ್ತೂರು ಶಾಖೆ
ಖಾತೆ ನಂಬ್ರ.6042000100054,
ಐಎಫ್‌ಸಿ ಕೋಡ್ 0000604
ದೂರವಾಣಿ 9164774533

18ರಿಂದ25 ವರ್ಷಗಳ ಈ ಮಕ್ಕಳನ್ನು ಸಾಕುವ ಸೇವೆ ಮಾಡುತ್ತಿರುವ ಈ ದಂಪತಿಗಳು ಈ ಮಕ್ಕಳನ್ನು ಸಾಕುವ ಮನೆಯಲ್ಲಿ ಇಬ್ಬರು ಮಕ್ಕಳನ್ನೇ ಸಾಕಲು ಕಷ್ಟಪಡುವ ಮಂದಿಗಳ ನಡುವೆ ೧೫ ಮಂದಿ ಬುದ್ಧಿಮಾಂದ್ಯರನ್ನು ಸಾಕುವ ಕಾರ್ಯ ಅತ್ಯಂತ ಶ್ಲಾಘನೀಯ.

Related posts

Leave a Reply