Breaking News

ಬೆಂಗಳೂರಿನಲ್ಲಿ ಸುನಿಲ್ ಚೆಟ್ರಿ ಕಾಲ್ಚಳಕ, ಎ‌ಎಫ್‌ಸಿ ಅರ್ಹತಾ ಫುಟ್ಬಾಲ್‌ನಲ್ಲಿ ಭಾರತಕ್ಕೆ ಗೆಲುವು

ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳನ್ನು ಸುನಿಲ್ ಚೆಟ್ರಿ ನಿರಾಸೆಗೊಳಿಸಲಿಲ್ಲ. ಮಿಂಚಿನ ಬಳ್ಳಿಯಷ್ಟೇ ಚುರುಕಾಗಿ ಆಡಿದ ಚೆಟ್ರಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡವು ೧-೦ ಗೋಲಿನಿಂದ ಎ‌ಎಫ್ಸಿ ಕಪ್ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಿರ್ಗಿಸ್ತಾನ ಎದುರು ಜಯಿಸಿತು.
ಅದರೊಂದಿಗೆ ಒಟ್ಟು ಆರು ಪಾಯಿಂಟ್ಗಳನ್ನು ಗಳಿಸಿದ ಭಾರತ ತಂಡವು ‘ಎ’ ಗುಂಪಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಮೊದಲ ಪಂದ್ಯದಲ್ಲಿ ಮ್ಯಾನ್ಮಾರ್ ಎದುರು ಭಾರತ ತಂಡವು ಜಯಿಸಿತ್ತು. ಇದು ಸತತ ಎರಡನೇ ಜಯ. ಆದರೆ ಕಿರ್ಗಿಸ್ತಾನ ತಂಡವು ಸುಲಭವಾಗಿ ಶರಣಾಗಲಿಲ್ಲ. ಪಂದ್ಯದ ಆರಂಭದಿಂದಲೂ ಕಠಿಣ ಪೈಪೋಟಿ ಒಡ್ಡಿತು. ಆದರೆ ೬೯ನೇ ನಿಮಿಷದಲ್ಲಿ ಚೆಟ್ರಿ ತಮ್ಮ ಕಾಲ್ಚಳಕ ತೋರಿಸಿದರು. ಕಿರ್ಗಿಸ್ತಾನದ ರಕ್ಷಣಾ?ಕೋಟೆಯನ್ನು ವಂಚಿಸಿದ ಜೆಜೆ ಲಾಲ್ಪೆಕ್ಲುವಾಗ ಚೆಂಡನ್ನು ಗೋಲು ವೃತ್ತದೊಳಗೆ ತರುವಲ್ಲಿ ಯಶ ಸಾಧಿಸಿದರು. ಗೋಲುಪೆಟ್ಟಿಗೆಯ ಬಲ ಮೂಲೆಯಿಂದ ನಾಲ್ಕು ಅಡಿಗಳಷ್ಟು ದೂರದಲ್ಲಿದ್ದ ಚೆಟ್ರಿ ಅವರಿಗೆ ಜೆಜೆ ಪಾಸ್ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ ನಡೆದ ಚುಟುಕು ಪಾಸ್ ಕಿರ್ಗಿಸ್ತಾನ ರಕ್ಷಣಾ ಪಡೆಯ ಅಂದಾಜಿಗೆ ಸಿಗಲಿಲ್ಲ. ಗೋಲ್ಕೀಪರ್ ಪಾವೆಲ್ ಮಥಾಯಿಶ್ ಅವರು ಬಲಕ್ಕೆ ಹೊರಳಿ ಡೈವ್ ಮಾಡುವಷ್ಟರಲ್ಲಿ ಚೆಟ್ರಿ ತಮ್ಮ ಕೆಲಸ ಮುಗಿಸಿದ್ದರು. ಚೆಂಡು ಗೋಲುಪೆಟ್ಟಿಗೆಯ ಒಳಗಿನ ಪರದೆಗೆ ಮುತ್ತಿಕ್ಕಿತ್ತು.
ಕ್ರೀಡಾಂಗಣದಲ್ಲಿ ಗ್ಯಾಲರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರು ಕೇಕೆ ಹಾಕಿದರು. ಚೆಟ್ರಿ ಕುರಿತ ಜಯಘೋಷಗಳು ಮುಳುಗಿದವು. ತ್ರಿವರ್ಣ ಧ್ವಜಗಳು ನಲಿದವು. ಅಂಗಳದ ಗಡಿಯ ಹೊರಗೆ ಠಳಾಯಿಸುತ್ತಿದ್ದ ನೀಲಿ ಸೂಟುಧಾರಿ, ಕೋಚ್ ಸ್ಟೀಫನ್ ಕಾನ್ಸಟೆಂಟೈನ್ ಕೂಡ ಸಂಭ್ರಮಿಸಿದರು. ಪಂದ್ಯದ ಮೊದಲ ೧೫ ನಿಮಿಷಗಳಲ್ಲಿ ಪ್ರವಾಸಿ ತಂಡವು ಆಕ್ರಮಣಕಾರಿ ಆಟವಾಡಿತು. ಆದರೆ ಈ ಹಂತದಲ್ಲಿ ಆತಿಥೇಯ ತಂಡದ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ತಡೆಗೋಡೆಯಾದರು. ಕಿರ್ಗಿಸ್ತಾನದ ಸ್ಟ್ರೈಕರ್ ಮುರ್ಜೆವ್ ಮತ್ತು ವಿಟಾಲ್ ಲಕ್ಷ್ ಅವರ ಆಕ್ರಮಣವನ್ನು ಮೆಟ್ಟಿ ನಿಂತರು. ತಮ್ಮ ತಂಡವನ್ನು ಅಪಾಯದಿಂದ ಪಾರು ಮಾಡಿದರು. ೩೧ನೇ ನಿಮಿಷ ಮತ್ತು ೪೪ನೇ ನಿಮಿಷಗಳಲ್ಲಿಯೂ ಭಾರತದ ಪ್ರಯತ್ನಗಳನ್ನು ಪಾವೆಲ್ ವಿಫಲಗೊಳಿಸಿದರು. ಇಂಜುರಿ ಅವಧಿಯಲ್ಲಿಯೂ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಅದರೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ವಿರಾಮದನಂತರ ಆಟ ಮತ್ತಷ್ಟು ಬಿಸಿಯೇರಿತು. ಪ್ರೇಕ್ಷಕರ ಅಬ್ಬರವೂ ಮುಗಿಲುಮುಟ್ಟಿತು. ೩೨ ವರ್ಷ ವಯಸ್ಸಿನ ಸುನಿಲ್ ಚೆಟ್ರಿ ತಮ್ಮ ಅಭಿಮಾನಿಗಳಿಗೆ ಗೆಲುವಿನ ಕಾಣಿಕೆ ನೀಡಿದರು.

Related posts

Leave a Reply