Header Ads
Breaking News

’ಬೆಂದ್ರ್‌ತೀರ್ಥ’ದಲ್ಲಿ ’ಚಂಡ್ರ್ ತೀರ್ಥ’ವೂ ಇಲ್ಲ..!: ಅಸಡ್ಡೆಯಿಂದ ’ಅನಾಥ’ವಾದ ಬಿಸಿನೀರ ಬುಗ್ಗೆ!!

ಪುತ್ತೂರು : ದಕ್ಷಿಣ ಭಾರತದ ಏಕೈಕ ಬೆಂದ್ರ್ ತೀರ್ಥ ಎಂದೇ ಖ್ಯಾತಿ ಗಳಿಸಿದ್ದ ಪುತ್ತೂರು ತಾಲೂಕಿನ ಇರ್ದೆಯ ಬಿಸಿ ನೀರಿನ ಚಿಲುಮೆ ಈಗ ಚಂಡ್ರ್‍ತೀರ್ಥವೂ ( ತಣ್ಣೀರು) ಇಲ್ಲದಂತಾಗಿದೆ. ಇದರಿಂದಾಗಿ ಬೆಂದ್ರ್‍ತೀರ್ಥವನ್ನು ಪ್ರವಾಸೋದ್ಯಮ ತಾಣವಾಗಿಸುವ ಕನಸು ‘ಗಗನಕುಸುಮ’ವಾಗಿದೆ.

ಪ್ರವಾಸಿಗರು ಬಂದು ನೋಡುತ್ತಿದ್ದ ಹಾಗೂ ಚರ್ಮ ರೋಗಗಳಿಗೆ ರಾಮಬಾಣ ಎಂದು ನಂಬಿಕೆ ಇದ್ದ ಈ ಬೆಂದ್ರ್ ತೀರ್ಥದ ಗುಂಡಿ ಈಗ ನೀರಿಲ್ಲದೆ ಒಣಗಿ ಹೋಗಿರುವ ಜತೆಗೆ ಅಲ್ಲಿನ ವ್ಯವಸ್ಥೆಗಳಿಗೂ ಗ್ರಹಣ ಹಿಡಿದಿದೆ. ಪುತ್ತೂರು -ಪಾಣಾಜೆ ರಸ್ತೆಯ ಇರ್ದೆಯಿಂದ ಇರ್ದೆ-ಪಲ್ಲತ್ತಡ್ಕ ರಸ್ತೆಯಲ್ಲಿ ಒಂದು ಕಿಮೀ ದೂರ ಕ್ರಮಿಸಿದರೆ `ಬೆಂದ್ರ್ ತೀರ್ಥ’ಪ್ರವಾಸೋದ್ಯಮ ತಾಣ ಸಿಗುತ್ತದೆ. ಈ ಹಿಂದೆ ಬೆಂದ್ರ್‍ತೀರ್ಥ ಗುಂಡಿಯಲ್ಲಿ ವರ್ಷವಿಡೀ ಬಿಸಿನೀರಿನ ಬಗ್ಗೆಗಳು ಪುಟಿದೇಳುತ್ತಿದ್ದವು. ಗಂಟೆಗೆ 1350ರಿಂದ 4600 ಲೀಟರ್‍ನಷ್ಟು ಬಿಸಿ ನೀರು ಚಿಮ್ಮುತಿತ್ತು. ನೀರಿನ ಉಷ್ಣಾಂಶ 99 ರಿಂದ 106 ಡಿಗ್ರಿ ಫಾರನ್ ಹೀಟ್ ಇರುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಇಲ್ಲಿ ಬೇಸಿಗೆ ಕಾಲದಲ್ಲಿ ನೀರೇ ಇಲ್ಲದೆ ಬೆಂದ್ರ್‍ತೀರ್ಥ ಗುಂಡಿ ಬರಿದಾಗುತ್ತಿದೆ. ಮಳೆಗಾಲದಲ್ಲಿ ನೀರು ಇದ್ದರೂ ಈ ಹಿಂದಿನಂತೆ `ಬೆಂದ್ರ್’ ತೀರ್ಥವಾಗಿಲ್ಲ.
ಗಂಧಕದ ವಾಸನೆಯಿಂದ ಕೂಡಿದ್ದ ಬೆಂದ್ರ್‍ತೀರ್ಥದ ಈ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಕೆಲವೊಂದು ರೋಗಗಳು ವಾಸಿಯಾಗುತ್ತದೆ ಎಂಬ ಪ್ರಚಾರವಿತ್ತು. ಹಾಗಾಗಿಯೇ ಹೆಚ್ಚಿನ ಮಂದಿ ಬೆಂದ್ರ್ ತೀರ್ಥಕ್ಕೆ ಭೇಟಿ ನೀಡಿ ಬಿಸಿನೀರ ಸ್ನಾನ ಮಾಡುತ್ತಿದ್ದರು. ದೂರದ ಊರುಗಳಿಂದಲೂ ಬಹಳಷ್ಟು ಮಂದಿ ಪ್ರವಾಸಿಗರಾಗಿ ಬಂದು ಬೆಂದ್ರ್‍ತೀರ್ಥದ ಬಿಸಿನೀರಿನ ಖುಷಿ ಅನುಭವಿಸುತ್ತಿದ್ದರು. ಆದರೆ ಇದು ಕೇವಲ ನೆನಪಾಗಿ ಉಳಿದಿದೆ.

ಈ `ಬೆಂದ್ರ್‍ತೀರ್ಥ’ ತಾಣವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಈ ಹಿಂದೆಯೇ ನಡೆದಿತ್ತು. ಬೆಂದ್ರ್‍ತೀರ್ಥ ಅಭಿವೃದ್ಧಿ ಟ್ರಸ್ಟ್ ರಚಿಸಿಕೊಂಡು ಅಲ್ಲಿನ ಪ್ರಮುಖರು ಅಭಿವೃದ್ಧಿಯ ಪ್ರಯತ್ನ ನಡೆಸಿದ್ದರು. ಇದರ ಫಲವಾಗಿ `ಬೆಂದ್ರ್‍ತೀರ್ಥ’ ತಾಣದ ಆಕರ್ಷಣೆ ಹೆಚ್ಚಿತ್ತು.
ಬಿಸಿನೀರಿನ ಬುಗ್ಗೆಗಳು ಚಿಮ್ಮತ್ತಿದ್ದ ಗುಂಡಿಯ ಎದುರು ಭಾಗದಲ್ಲಿ ಮೆಟ್ಟಿಲುಗಳ ನಿರ್ಮಾಣದೊಂದಿಗೆ ವೀಕ್ಷಕರಿಗೆ ಅನುಕೂಲವಾಗುವಂತೆ ಸುಂದರ ಆವರಣ ನಿರ್ಮಿಸಿ ಬೆಂದ್ರ್ ತೀರ್ಥ ಗುಂಡಿಯನ್ನು ಅಭಿವೃದ್ಧಿ ಪಡಿಸಲಾಗಿತ್ತು. ಪ್ರವಾಸಿಗರಾಗಿ ಬಂದು ಬೆಂದ್ರ್‍ತೀರ್ಥದಲ್ಲಿ ಸ್ನಾನ ಮಾಡುವ ಮಂದಿಯ ವಸ್ತ್ರ ಬದಲಾವಣೆಯ ಅನುಕೂಲಕ್ಕಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸಿಬ್ಬಂದಿ ಕೊಠಡಿಯಲ್ಲಿ ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯುವ ವ್ಯವಸ್ಥೆಯೂ ಇತ್ತು. ಆದರೆ ಇವೆಲ್ಲವೂ ಈಗ ಪಳೆಯುಳಿಕೆಗಳಾಗಿ ಉಳಿದಿದೆ.

ಬೆಂದ್ರ್ ತೀರ್ಥದ ಆವರಣದ ಗೋಡೆಯಿಂದ 15 ಮೀಟರ್‍ನಷ್ಟು ಅಂತರದಲ್ಲಿಯೇ ಖಾಸಗಿ ವ್ಯಕ್ತಿಯೊಬ್ಬರು ಕೊಳವೆಬಾವಿ ಕೊರೆದು, ನೀರನ್ನು ತೋಟಕ್ಕೆ ಬಳಸುತ್ತಿರುವುದರಿಂದ ಬೆಂದ್ರ್‍ತೀರ್ಥ ಗುಂಡಿಯಲ್ಲಿ ಪುಟಿಯುವ ಬಿಸಿನೀರಿನ ಬುಗ್ಗೆಗಳು ಮಾಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಬೆಂದ್ರ್‍ತೀರ್ಥದ ನೀರು ಕೊಳವೆಬಾವಿ ಸೇರುತ್ತಿರುವುದರಿಂದ ಬೇಸಿಗೆ ಕಾಲದಲ್ಲಿ ಬರೀ `ಗುಂಡಿ’ ಮಾತ್ರ ಉಳಿದುಕೊಳ್ಳುತ್ತಿದ್ದು, ಬೆಂದ್ರ್ ತೀರ್ಥ ಪ್ರವಾಸೋದ್ಯಮ ಹೆಸರಿಗಷ್ಟೇ ಉಳಿದುಕೊಂಡಿದೆ.
ಬೆಂದ್ರ್‍ತೀರ್ಥದಲ್ಲಿ ಚಿಮ್ಮುವ ಬಸಿನೀರ ಬುಗ್ಗೆಗಳು ಮಳೆಗಾಲದಲ್ಲಿ ಪ್ರಾಕೃತಿಕವಾಗಿ ತಣ್ಣಗಾಗುತ್ತಿದ್ದು, ಮಳೆಗಾಲ ಮುಗಿದ ತಕ್ಷಣ ಪಕ್ಕದ ಸೀರೆ ನದಿಗೆ ಅಡ್ಡವಾಗಿ ನಿರ್ಮಿಸಲಾದ ಕಿಂಡಿಅಣೆಕಟ್ಟಿನಲ್ಲಿ ಶೇಖರಣೆಯಾಗುವ ನೀರು ಬೆಂದ್ರ್‍ತೀರ್ಥ ಗುಂಡಿ ಸೇರಿಕೊಳ್ಳುತ್ತಿದೆ. ಒಟ್ಟಾರೆಯಾಗಿ ಇಲ್ಲಿನ ವ್ಯವಸ್ಥೆಗಳೇ ಒಂದು ಉತ್ತಮ ಪ್ರವಾಸೋದ್ಯಮ ತಾಣವಾಗಿ ಬೆಳೆಯಬೇಕಾಗಿದ್ದ ಆಕರ್ಷಣೀಯ ತಾಣವನ್ನು ಹಾಳು ಮಾಡಿವೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶಕುಂತಳಾ ಶೆಟ್ಟಿ ಅವರು ಶಾಸಕಿಯಾಗಿದ್ದ ಸಂದರ್ಭದಲ್ಲಿ ಬೆಂದ್ರ್ ತೀರ್ಥವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅತಿಥಿ ಭವನವೊಂದನ್ನು ನಿರ್ಮಿಸಲಾಗಿದೆ. ಬೆಂದ್ರ್‍ತೀರ್ಥಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಈ ವ್ಯವಸ್ಥೆಯನ್ನು ರೂ.15 ಲಕ್ಷ ವೆಚ್ಚದಲ್ಲಿ ಮಾಡಲಾಗಿದೆ.

ಆದರೆ ಇರುವ ವ್ಯವಸ್ಥೆಯನ್ನು ಉಳಿಸಿಕೊಂಡು ಅಭಿವೃದ್ಧಿ ಪಡಿಸುವ ಚಿಂತನೆ-ಆಸಕ್ತಿ ಯಾರು ವಹಿಸದ ಕಾರಣ ಸದ್ಯದ ಸ್ಥಿತಿಯಲ್ಲಿ ಬೆಂದ್ರ್‍ತೀರ್ಥ ಪ್ರವಾಸೋದ್ಯಮ ತಾಣವಾಗಿ ಉಳಿದಿಲ್ಲ. ಈಗ ಅಲ್ಲಿಗೆ ಬರುವವರು ಕೂಡ ಯಾರೂ ಇಲ್ಲ. ಬಂದರೂ ಅಲ್ಲಿ ಏನೂ ಉಳಿದಿಲ್ಲ…!

Related posts

Leave a Reply

Your email address will not be published. Required fields are marked *