Header Ads
Breaking News

ಬೆದ್ರಾಳ ಸೇತುವೆ ಬಳಿ ರಾಶಿ ರಾಶಿ ತ್ಯಾಜ್ಯ; ಪರಿಸರವಿಡೀ ದುರ್ವಾಸನೆ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಹೊಳೆಯಲ್ಲಿ ತ್ಯಾಜ್ಯಗಳು ತುಂಬಿ ಕೊಳೆಯುತ್ತಿದೆ. ಇಲ್ಲಿಂದ ಬೀರುವ ದುರ್ವಾಸನೆ ಪರಿಸರದ ಮಂದಿಯ ನೆಮ್ಮದಿ ಕೆಡಿಸಿದೆ. ಈ ಹಿಂದೆ ತ್ಯಾಜ್ಯ ಸಮಸ್ಯೆಯ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಎಚ್ಚೆತ್ತುಕೊಳ್ಳದೇ ಇರುವುದು ವಿಪರ್ಯಾಸವೇ ಸರಿ.

ಸುಬ್ರಹ್ಮಣ್ಯ ಮಂಜೇಶ್ವರ ಅಂತರ್ ರಾಜ್ಯ ರಸ್ತೆಯ ಬೆದ್ರಾಳ ಸೇತುವೆ ಬಳಿ ಈ ಅವ್ಯವಸ್ಥೆ ಮನೆ ಮಾಡಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಹೊಳೆ ನೀರಿನಲ್ಲಿ ಮಾಂಸ ತ್ಯಾಜ್ಯ, ತರಕಾರಿ ತ್ಯಾಜ್ಯ, ಕೊಳೆತ ಕೋಳಿ ಮೊಟ್ಟೆ, ಬಳಕೆ ಮಾಡಿದ ಪ್ಲಾಸ್ಟಿಕ್ ಬಟ್ಟಲುಗಳು, ನಿರುಪಯುಕ್ತ ಆಹಾರ ಪದಾರ್ಥಗಳು ಕೊಳೆತು ನಾರುತ್ತಿದ್ದು,ಇಲ್ಲಿಂದ ಬೀರುವ ದುರ್ವಾಸನೆ ಇಡೀ ಪರಿಸರವನ್ನು ವ್ಯಾಪ್ತಿಸಿದೆ. ಈ ಪರಿಸರರದಲ್ಲಿ ಹಲವು ಮನೆಗಳಿದ್ದು, ಇಲ್ಲಿಂದ ಬೀರುವ ದುರ್ವಾಸನೆ ಸಹಿಸಿಕೊಂಡು ಬದುಕಬೇಕಾದ ಅನಿವಾರ್ಯ ಸ್ಥಿತಿ ಅವರದ್ದಾಗಿದೆ.

ಇದೇ ವೇಳೆ ಸ್ಥಳೀಯರಾದ ಸೀತಾರಾಮ ಗೌಡ ನರಿಮೊಗ್ರು ಮಾತನಾಡಿ, ಬೆದ್ರಾಳ ಸೇತುವೆ ಬಳಿ ಕೋಳಿತ್ಯಾಜ್ಯ, ಹಂದಿ ತ್ಯಾಜ್ಯಗಳನ್ನು ತಂದು ಎಸೆಯಲಾಗುತ್ತಿದ್ದು, ನಗರಸಭೆಯವರು ಸೂಕ್ತ ಕ್ರಮಕೈಗೊಳ್ಳದಿದ್ದರೆ ಇಲ್ಲಿನ ಭಾಗ ಮಿನಿ ಚಾರ್ಮಾಡಿ ಆಗುವುದು ಖಂಡಿತ. ಈಗಾಗಲೇ ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಇಲ್ಲವೇ ರಾತ್ರಿ ವೇಳೆ ಕಾವಲು ವ್ಯವಸ್ಥೆ ಮಾಡಲು ನಗರಸಭೆ ಕ್ರಮಕೈಗೊಳ್ಳಬೇಕು ಎಂದರು.

ಬೆದ್ರಾಳ ಹೊಳೆಯಲ್ಲಿ ಈಗ ನೀರಿನ ಪ್ರಮಾಣ ಕಡಿಮೆಯಾಗಿದೆ. ಚೀಲಗಳಲ್ಲಿ ತುಂಬಿ ಎಸೆಯಲಾಗುವ ಕೋಳಿತ್ಯಾಜ್ಯ ಸೇರಿದಂತೆ ಇತರ ತ್ಯಾಜ್ಯಗಳು ಸ್ಪಲ್ಪ ಪ್ರಮಾಣದಲ್ಲಿರುವ ನೀರಿನಲ್ಲಿ ಕೊಚ್ಚಿಕೊಂಡು ಹೋಗದೆ, ಆ ಭಾಗದಲ್ಲಿಯೇ ತುಂಬಿಕೊಂಡು ಕೊಳೆತು ನಾರುತ್ತಿದೆ. ಹೊಳೆಯಲ್ಲಿ ನೀರೇ ಗೋಚರಿಸದಷ್ಟು ಪ್ರಮಾಣದಲ್ಲಿ ತ್ಯಾಜ್ಯಗಳು ತುಂಬಿಕೊಂಡಿದ್ದು, ಹೊಳೆಯ ಇಕ್ಕೆಲ ಭಾಗಗಳು ಈಗ ಕೃತಕ ಡಂಪಿಂಗ್ ಯಾರ್ಡ್
ಆಗಿ ಮಾರ್ಪಟ್ಟಿದೆ. ವಾಹನಗಳಲ್ಲಿ ತೆರಳುವ ಸಾರ್ವಜನಿಕರು ಕೂಡ ತಮ್ಮ ಮನೆಯ ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿಕೊಂಡು ಬಂದು ಇಲ್ಲಿಗೆ ಎಸೆಯುತ್ತಿದ್ದು, ಇದರಿಂದಾಗಿ ಹೊಳೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯರಾಶಿ ಬಿದ್ದು, ಹೊಳೆಯ ನೀರು ಮಾತ್ರವಲ್ಲದೆ ಇಡೀ ಪರಿಸರವೇ ಮಲೀನವಾಗುವಂತಾಗಿದೆ.

ಪುತ್ತೂರು ನಗರಸಭೆಯ ಸ್ಥಳೀಯ ವಾರ್ಡ್ ಸದಸ್ಯೆ ಮಮತಾ ರಂಜನ್ ಮಾತನಾಡಿ, ನಗರಸಭೆಯ ಜನಪ್ರತಿನಿಧಿಗಳಿಗೆ ಅಧಿಕಾರ ಹಸ್ತಾಂತರವಾಗದ ಕಾರಣ ನಮಗೆ ಈಗ ಕ್ರಮಕೈಗೊಳ್ಳಲು ಆಗುತ್ತಿಲ್ಲ, ಮುಂದೆ ಸೇತುವೆ ಬಳಿ ಸಿಸಿ ಕ್ಯಾಮರಾ ಅಳವಡಿಸುವ ಇಲ್ಲವೇ ಆ ಭಾಗದಲ್ಲಿ ನೆಟ್ ಅಳವಡಿಸುವ ಮೂಲಕ ತ್ಯಾಜ್ಯ ಎಸೆಯುವುದನ್ನು ತಡೆಯುವ ಕುರಿತು ಶಾಸಕರಲ್ಲಿ ಹಾಗೂ ನಗರಸಭೆಯ ಆಯುಕ್ತರಲ್ಲಿ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಕೋಳಿ ಇನ್ನಿತರ ತ್ಯಾಜ್ಯಗಳಿಂದಾಗಿ ಇಲ್ಲಿನ ಜನರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಲೂ ಸಿದ್ಧ ಎಂದು ಹೇಳಿದರು.

ಪುತ್ತೂರಿನ ಬೆದ್ರಾಳ ಹೊಳೆಗೆ ಕಿಡಿಗೇಡಿಗಳು ತ್ಯಾಜ್ಯ ತಂದು ಸುರಿಯುತ್ತಿರುವ ಬಗ್ಗೆ ಈ ಹಿಂದೆಯೂ ಸುದ್ದಿ ಪ್ರಸಾರಗೊಂಡಿತ್ತು. ಮಾತ್ರವಲ್ಲದೆ ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡಿಲ್ಲ ಇಂದು ಸ್ಥಳೀಯ ವಾರ್ಡ್ ಸದಸ್ಯೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶಾಸಕರಲ್ಲಿ ಹಾಗೂ ನಗರಸಭೆಯ ಆಯುಕ್ತರಲ್ಲಿ ಮಾತನಾಡಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಒಟ್ಟಾರೆಯಾಗಿ ತ್ಯಾಜ್ಯ ಸಮಸ್ಯೆಗೆ ಪುತ್ತೂರು ನಗರಸಭೆ ಮುಕ್ತಿ ನೀಡಬೇಕಾಗಿದೆ.

Related posts

Leave a Reply

Your email address will not be published. Required fields are marked *