Header Ads
Breaking News

ಬೆದ್ರಾಳ ಹೊಳೆಗೆ ನಿರುಪಯುಕ್ತ ತ್ಯಾಜ್ಯ ಎಸೆಯುತ್ತಿರುವ ಕಿಡಿಗೇಡಿಗಳು : ಗ್ರಾಮಸ್ಥರ ಆಕ್ರೋಶ-ಕ್ರಮಕ್ಕೆ ಆಗ್ರಹ

ಪುತ್ತೂರು : ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಎಂಬಲ್ಲಿರುವ ನಂದಿಕೇಶ್ವರ ಭಜನಾ ಮಂದಿರ, ನಾಗರಾಜ ಮತ್ತು ರಕ್ತೇಶ್ವರಿ ಕಟ್ಟೆ ಹಾಗೂ ಮಹಾಲಿಂಗೇಶ್ವರ ದೇವರ ಕಟ್ಟೆ ಇರುವ ಪವಿತ್ರ ಕ್ಷೇತ್ರದ ಪಕ್ಕದಲ್ಲಿ ಹರಿದು ಹೋಗುತ್ತಿರುವ ಬೆದ್ರಾಳ ಹೊಳೆಯ ಬದಿಗೆ ಹಸಿ ಮೀನು ಹಾಗೂ ಕೋಳಿ ತ್ಯಾಜ್ಯಗಳನ್ನು ತಂದು ಎಸೆಯಲಾಗಿತ್ತಿದ್ದು, ಈ ಕೃತ್ಯದ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆದ್ರಾಳ ಪರಿಸರದಲ್ಲಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಬದಿಯಲ್ಲಿ ಹರಿದು ಹೋಗುತ್ತಿರುವ ಬೆದ್ರಾಳ ಹೊಳೆಗೆ ನಿರುಪಯುಕ್ತ ಕೊಳೆತ ಮೊಟ್ಟೆ, ಮಾಂಸ,ತರಕಾರಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು, ಸತ್ತ ಪ್ರಾಣಿಗಳನ್ನು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಕೊಂಡು ಬಂದು ಎಸೆಯುವ ಕೃತ್ಯ ನಿರಂತರವಾಗಿ ನಡೆಯುತ್ತಾ ಬಂದಿದ್ದು, ಇದರಿಂದಾಗಿ ಈ ಪರಿಸರದಲ್ಲಿ ಹೊಳೆಯ ನೀರು ಸಂಪೂರ್ಣ ಮಲೀನಗೊಂಡಿದೆ.

ಈ ಮಲೀನ ನೀರು ಹರಿದು ಹೋಗುತ್ತಿರುವ ಬೆದ್ರಾಳ ಹೊಳೆಯ ಬದಿಯಲ್ಲಿ, ಬೆದ್ರಾಳ ಪೇಟೆಯಿಂದ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬೆದ್ರಾಳ ಸೇತುವೆಯ ಬಳಿ ನಾಗರಾಜ ಸನ್ನೀಧಿ, ಕಾರಣಿಕದ ರಕ್ತೇಶ್ವರಿ ಸನ್ನಿಧಿ, ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾಲಿಂಗೇಶ್ವರ ದೇವರ ಕಟ್ಟೆ ಹಾಗೂ ನಂದಿಕೇಶ್ವರ ಭಜನಾ ಮಂದಿರವಿದೆ. ಈ ವ್ಯಾಪ್ತಿಯ ಅಯ್ಯಪ್ಪ ವೃತಾಧಾರಿಗಳು ಭಜನಾ ಮಂದಿರಕ್ಕೆ ಸಂಬಂಧಿಸಿದ ಕಟ್ಟಡದಲ್ಲಿಯೇ ಆಶ್ರಯ ಪಡೆದಿದ್ದು, ಬೆದ್ರಾಳ ಹೊಳೆ ನೀರಿನಲ್ಲೇ ಸ್ನಾನ ಮಾಡುತ್ತಿದ್ದಾರೆ.

ಇದೀಗ ಈ ಧಾರ್ಮಿಕ ಕೇಂದ್ರದ ಪಕ್ಕದಲ್ಲಿರುವ ಇರುವ ಹೊಳೆಯ ಬದಿಯಲ್ಲಿ ಕೊಳೆತ ನಿರುಪಯುಕ್ತ ಹಸಿಮೀನುಗಳನ್ನು ತಂದು ರಾಶಿ ಹಾಕಲಾಗಿದೆ. ಯಾರೋ ಕಿಡಿಗೇಡಿಗಳು ರಾತ್ರಿ ವೇಳೆ ಓಮ್ನಿ ಕಾರೊಂದರಲ್ಲಿ ತಂದು ಉಪಯೋಗಕ್ಕಿಲ್ಲದ ಹಸಿಮೀನುಗಳನ್ನು ಇಲ್ಲಿ ಎಸೆದು ಹೋಗಿರುವುದಾಗಿ ಸುದ್ದಿ ಹರಡಿದೆ. ಇಲ್ಲಿಂದ ಬೀರುವ ದುರ್ವಾಸನೆ ಇಡೀ ಪರಿಸರವನ್ನೇ ವ್ಯಾಪಿಸಿದ್ದು, ಭಜನಾ ಮಂದಿರದ ವಠಾರದಲ್ಲಿ ಹಾಗೂ ಅಲ್ಲಿನ ರಸ್ತೆ ಭಾಗದಲ್ಲಿ ತೆರಳುವವರು ಮೂಗು ಮುಚ್ಚಿಕೊಂಡು ಹೋಗ ಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ.

ವಾರದಲ್ಲಿ ಒಂದೆರಡು ಬಾರಿ ಈ ರೀತಿ ಉಪಯೋಗಕ್ಕಿಲ್ಲ ಹಸಿಮೀನನ್ನು ತಂದು ಇಲ್ಲಿ ಎಸೆಯಲಾಗುತ್ತಿದೆ. ಕೋಳಿ ತ್ಯಾಜ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಎಸೆಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ಈ ಪರಿಸರದ ನೆಮ್ಮದಿಗೆ ಭಂಗವಾಗುತ್ತಿದೆ. ಅಲ್ಲದೆ ಈ ವ್ಯಾಪ್ತಿಯ ಜನತೆಯ ಧಾರ್ಮಿಕ ನಂಬಿಕೆಯ ಕೇಂದ್ರದ ಶ್ರದ್ಧಾ-ಭಕ್ತಿಯ ವ್ಯವಸ್ಥೆಗೆ ಭಂಗ ತರುವ ಕೆಲಸ ಇದಾಗಿದೆ ಎನ್ನುವುದು ಸ್ಥಳೀಯರ ಆರೋಪ.
‘ಕಸ, ಕಡ್ಡಿ, ತ್ಯಾಜ್ಯಗಳನ್ನು ಎಸೆಯಬಾರದು. ಪಕ್ಕದಲ್ಲಿ ಭಜನಾ ಮಂದಿರವಿದೆ.ಸ್ವಚ್ಚತೆ ಕಾಪಾಡಿ. ಬ್ಯಾನರ್ ಹರಿದರೆ,ಕಸ ತ್ಯಾಜ್ಯಗಳನ್ನು ಎಸೆದರೆ ಹರಕೆ ಹೇಳಲಾಗುವುದು’ ಎಂದು ಉಲ್ಲೇಖಿಸಿ ಇಲ್ಲಿನ ಧಾರ್ಮಿಕ ಕೇಂದ್ರದ ಭಕ್ತರು ಅಳವಡಿಸಿದ ಬ್ಯಾನರ್ ಬದಿಯಲ್ಲೇ ತ್ಯಾಜ್ಯ ಎಸೆಯುವ ಕೃತ್ಯ ನಿರಂತರವಾಗಿ ನಡೆಯುತ್ತಿರುವುದು ಇಲ್ಲಿನ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿಗೆ ಕೋಳಿ,ಮೀನು ತ್ಯಾಜ್ಯ ಸೇರಿದಂತೆ ಕೊಳಕು ವಸ್ತುಗಳನ್ನು ತಂದು ಎಸೆಯುತ್ತಿರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಫ್ಲೆಕ್ಸ್ ಅಳವಡಿಸಲಾಗಿದ್ದರೂ ತ್ಯಾಜ್ಯಗಳನ್ನು ತಂದು ಎಸೆಯುವ ಕೃತ್ಯ ನಿಂತಿಲ್ಲ.ಇಂತಹ ಕೃತ್ಯದಿಂದಾಗಿ ಕ್ಷೇತ್ರಕ್ಕೆ ಬರುವ ಹಾಗೂ ರಸ್ತೆಯಲ್ಲಿ ತೆರಳುವ ಮಂದಿಗೆ ಸಮಸ್ಯೆಯಾಗುತ್ತಿದೆ-ಪ್ರಕಾಶ್ ಬೆದ್ರಾಳ.

ಒಟ್ಟಿನಲ್ಲಿ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಬದಿಯಲ್ಲಿ ಹರಿದು ಹೋಗುತ್ತಿರುವ ಬೆದ್ರಾಳ ಹೊಳೆಗೆ ನಿರುಪಯುಕ್ತ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಮತ್ತು ಕಸ ಎಸೆಯುವವರ ಧಾರ್ಮಿಕ ಪಾವಿತ್ರತೆಗೆ ಹಾಗೂ ಜನತೆಯ ನೆಮ್ಮದಿಗೆ ಭಂಗವನ್ನುಂಟುಮಾಡುತ್ತಿರುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Related posts

Leave a Reply

Your email address will not be published. Required fields are marked *