Breaking News

ಬೆಳ್ತಂಗಡಿ ಅಳಕೆಯ ರುದ್ರಗಿರಿ ಬಳಿ ಲಾರಿ ಪಲ್ಟಿ, ಎಕ್ಕಳದ ಜಯರಾಮ ಶೆಟ್ಟಿ ಸಾವು

ಲಾರಿಯೊಂದು ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಅಳಕೆಯ ರುದ್ರಗಿರಿ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಎಕ್ಕಳದ ಜಯರಾಮ ಶೆಟ್ಟಿ ಮೃತಪಟ್ಟಿದ್ದಾರೆ.
ಲಾರಿಯಲ್ಲಿದ್ದ ಇನ್ನುಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ರುದ್ರಗಿರಿಯ ಮೃತ್ಯುಂಜಯ ದೇವಾಲಯದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿದ್ದು, ಇದರ ಕೆಲಸಕಾರ್ಯಗಳಿಗೆಂದು ಸುಳ್ಯದ ಕಡೆಯಿಂದ ಕೆಲ ಸಾಮಾಗ್ರಿಗಳನ್ನು ತರಲು ಊರ ಕೆಲವರು ಲಾರಿಯಲ್ಲಿ ತೆರಳಿದ್ದರು. ಸುಳ್ಯದಿಂದ ಸಾಮಗ್ರಿಗಳನ್ನು ತೆಗೆದುಕೊಂಡು ಬರುವಾಗ ಮರದ ಲಾರಿಯು ಅಳಕೆ ಕಳೆದು ರುದ್ರಗಿರಿ ದೇವಸ್ಥಾನ ಪ್ರವೇಶ ದ್ವಾರದಿಂದ ಕೆಲವೇ ದೂರ ಸಾಗಿ ಸುಮಾರು ಆರೇಳು ಅಡಿ ಆಳದ ಗುಂಡಿಗೆ ಮಗುಚಿ ಬಿದ್ದಿದೆ. ಘಟನೆಯಿಂದ ಲಾರಿಯ ಹಿಂದಿದ್ದ ಎಕ್ಕಳದ ಜಯರಾಮ ಶೆಟ್ಟಿ ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಘಟನೆಯಲ್ಲಿ ಅಳಕೆ ಸಮೀಪದ ಅಂತರದ ನವೀನಚಂದ್ರ, ಬಟ್ಟಂಡ ಶ್ರೀಧರ ಗಾಯಗೊಂಡಿದ್ದಾರೆ. ಇವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ತೋಟಗಳ ಮಧ್ಯೆ ಮಣ್ಣು ಹಾಕಿ ಎತ್ತರಿಸಿ, ರುದ್ರಗಿರಿ ದೇವಾಲಯಕ್ಕೆ ತೆರಳುವ ದಾರಿಯನ್ನು ನಿರ್ಮಿಸಲಾಗಿದೆ. ಇದು ತೀರಾ ಇಕ್ಕಟ್ಟಾಗಿದ್ದು, ಇಲ್ಲಿಂದ ಒಮ್ಮೆಗೆ ಒಂದು ಲಾರಿ ಮಾತ್ರ ಸಂಚರಿಸಬಹುದಾಗಿದೆ. ಆದರೆ ಮಳೆಯಿಂದಾಗಿ ಲಾರಿ ಸಂಚರಿಸುವಾಗ ಮಣ್ಣು ಕುಸಿದಿದ್ದು, ಲಾರಿ ಆಳದಲ್ಲಿರುವ ತೋಟಕ್ಕೆ ಮಗುಚಿಬಿದ್ದಿದೆ. ಈ ಸಂದರ್ಭ ಲಾರಿಯಲ್ಲಿದ್ದ ಸಾಮಗ್ರಿಗಳು ಬಿದ್ದು ಹಿಂಬದಿಯಲ್ಲಿದ್ದವರು ಗಾಯಗೊಂಡಿದ್ದಾರೆ. ಘಟನೆಯ ಸಂದರ್ಭ ಲಾರಿಯ ಚಾಲಕ ಸೇರಿದಂತೆ ಕ್ಲೀನರ್ ಇನ್ನಿಬ್ಬರು ಕುಳಿತುಕೊಂಡಿದ್ದು, ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Related posts

Leave a Reply