Header Ads
Header Ads
Breaking News

ಬೆಳ್ತಂಗಡಿ ತಾಲೂಕಿನಲ್ಲಿದ್ದಾರೆ ಭ್ರಷ್ಟ ಸರ್ಕಾರಿ ಅಧಿಕಾರಿಗಳು, 94ಸಿಯ ಉದ್ದೇಶವನ್ನೇ ಬದಲಾಯಿಸಿದ ಧೂರ್ತರು


ಬಡವರಿಗೆ, ಹಲವು ವರ್ಷಗಳಿಂದ ಮನೆಯಿದ್ದರೂ ನಿವೇಶನದ ಹಕ್ಕು ಪತ್ರ ದೊರೆಯದವರಿಗೆ ಉಪಯೋಗವಾಗಲೆಂದು ರಾಜ್ಯ ಸರಕಾರ ಜಾರಿಗೆ ತಂದಿರುವ 94ಸಿ ಯೋಜನೆಯು ಕೆಲವು ಭ್ರಷ್ಟ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕೆಲ ಭ್ರಷ್ಟ ಅಧಿಕಾರಿಗಳು ಇದರ ಮೂಲ ಉದ್ದೇಶವನ್ನೇ ಬದಲಾಯಿಸಿದ್ದಾರೆ. ವಿ೪ ನ್ಯೂಸ್‌ಗೆ ಅಕ್ರಮ ನಡೆದಿರುವ ದಾಖಲೆಯೊಂದು ಲಭ್ಯವಾಗಿದ್ದು, ಇದರ ವರದಿ ಇಲ್ಲಿದೆ ನೋಡಿ.
೨೦೧೦-೧೧ರ ಮೊದಲು ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸ್ತವ್ಯ ಮಾಡಿಕೊಂಡು ಬರುವವರಿಗೆ ನಿವೇಶನದ ಹಕ್ಕು ಕಲ್ಪಿಸುವುದು ೯೪ಸಿ ಯೋಜನೆಯ ಮೂಲ ಉದ್ದೇಶ. ಮುಖ್ಯವಾಗಿ ೯೪ಸಿ ಯೋಜನೆಯಡಿ ಮಂಜೂರಾತಿ ಪಡೆದ ವ್ಯಕ್ತಿಯು ಈ ಕಟ್ಟಡವನ್ನು ವಾಸದ ಮನೆಯಾಗಿಯೇ ಬಳಸಬೇಕು. ಬದಲಾಗಿ ಬೇರೆ ಯಾವುದೇ ಉದ್ದೇಶಕ್ಕೆ ಉಪಯೋಗಿಸತಕ್ಕದಲ್ಲ. ಹೀಗೆ ಹಲವು ಷರತ್ತುಗಳಿವೆ, ಆದರೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ ವ್ಯಾಪ್ತಿಯಲ್ಲಿ ವಾಣಿಜ್ಯ ಉದ್ದೇಶಕ್ಕೂ ೯೪ಸಿಯಡಿ ಹಕ್ಕು ಪತ್ರ ನೀಡಲಾಗಿದೆ. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಸಹಿ ಮಾಡಿದ್ದರೂ, ಇದನ್ನು ಪರಿಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಲ್ಲೇರಿಯವರು ಎಸಿಬಿಗೂ ದೂರು ನೀಡಿದ್ದಾರೆ.
ವಿ೪ ನ್ಯೂಸ್‌ಗೆ ಸಿಕ್ಕಿದ ದಾಖಲೆಯೊಂದರಲ್ಲಿ ೯೪ಸಿಯಡಿ ಅರ್ಜಿ ಸಲ್ಲಿಸಿದ ಅರ್ಜಿದಾರರೊಬ್ಬರು ತಣ್ಣೀರುಪಂಥ ಗ್ರಾಮ ಕರಣಿಕರಿಗೆ ಸಲ್ಲಿಸಿದ ಹೇಳಿಕೆಗೆ ತಣ್ಣೀರುಪಂಥ ಗ್ರಾಮ ಕರಣಿಕರು ಷರಾ ಬರೆದಿದ್ದು, ಅದರಲ್ಲಿ ಸ್ಪಷ್ಟವಾಗಿ ಸದ್ರಿ ಅರ್ಜಿದಾರರು ಸರ್ವೇ.ನಂ. ೧೨೦ರಲ್ಲಿ ಅಕ್ರಮವಾಗಿ ಮನೆ ಹಾಗೂ ಅಂಗಡಿಯನ್ನು ನಿರ್ಮಿಸಿದ್ದು ೨೦೧೨-೧೩ನೇ ಸಾಲಿನ ಮನೆ ತೆರಿಗೆ ರಶೀದಿ ಲಗತ್ತಿಸಿದ್ದಾರೆ. ಇನ್ನು ಮುಂದಿನ ಕ್ರಮದ ಬಗ್ಗೆ ಮಂಡಿಸಿದೆ’ ಎಂದು ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರಿಗೆ ಕಳುಹಿಸಿದ್ದಾರೆ. ಬಳಿಕ ಅದೇ ಅರ್ಜಿಗೆ ಕೊಕ್ಕಡ ಹೋಬಳಿ ಕಂದಾಯ ನಿರೀಕ್ಷಕರು ಅರ್ಜಿದಾರರ ಬಗ್ಗೆ ಪರಿಶೀಲಿಸಲಾಗಿದೆ. ಗ್ರಾಮ ಕರಣಿಕರ ವರದಿಯಂತೆ ಮಂಜೂರುಗೊಳಿಸಬಹುದೆಂದು ವರದಿ ನೀಡಿದ್ದಾರೆ. ಹಾಗಾದರೆ ಇಲ್ಲಿ ಅಂಗಡಿಗೂ ೯೪ಸಿಯಡಿ ಹಕ್ಕು ಪತ್ರ ನೀಡಬಹುದೇ ಎಂಬುದನ್ನು ಮಾತ್ರ ಅಧಿಕಾರಿಗಳೇ ಉತ್ತರಿಬೇಕಷ್ಟೇ. ಕೊಕ್ಕಡದ ಈಗಿನ ಕಂದಾಯ ನಿರೀಕ್ಷಕರ ಬಗ್ಗೆ ಹಲವು ಆರೋಪಗಳು ಕೇಳಿ ಬರುತ್ತಿವೆ.
ಕೊಕ್ಕಡದ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸದೇ ಜಾಗವನ್ನು ೯೪ಸಿಯಡಿ ಮಂಜೂರುಗೊಳಿಸುತ್ತಿದ್ದಾರೆ. ಅಕ್ರಮಗಳಿಗೊಪ್ಪದ ಗ್ರಾಮ ಕರಣಿಕರಿಗೆ ಕಿರುಕುಳ ನೀಡುತ್ತಿದ್ದಾರಲ್ಲದೆ, ಅಕ್ರಮದಾರರೊಂದಿಗೆ ಶಾಮೀಲಾಗಿ ಸುಳ್ಳು ವರದಿ ಸೃಷ್ಟಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕೊಕ್ಕಡದಲ್ಲಿ ನಾಡ ಕಚೇರಿ ಇದ್ದರೂ, ಬೆಳ್ತಂಗಡಿಯಲ್ಲೇ ಇದ್ದುಕೊಂಡು ತನ್ನ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಸಾಕಷ್ಟು ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಭ್ರಷ್ಟ ಅಧಿಕಾರಿಗಳಿಂದಾಗಿ ಕೊಕ್ಕಡ ಕಂದಾಯ ಹೋಬಳಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಪರಮಾವಧಿ ಎಲ್ಲೇ ಮೀರುವಂತಾಗಿದ್ದು, ಇಲ್ಲಿ ೯೪ಸಿಯಡಿ ಮಂಜೂರಾದ ಹಕ್ಕುಪತ್ರವನ್ನು ತನಿಖೆಗೊಳಪಡಿಸಬೇಕು. ಭ್ರಷ್ಟರಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ೯೪ಸಿಯ ಮೂಲ ಆಶಯವನ್ನು ರಕ್ಷಿಸಬೇಕೆಂಬುದೇ ಈ ವರದಿಯ ಆಶಯವಾಗಿದೆ.

Related posts

Leave a Reply