Header Ads
Header Ads
Breaking News

ಬೇಸಿಗೆ ಬಂದರೆ ಕುಡಿಯುವ ನೀರಿಗೆ ತತ್ವಾರ…

ಬೈಂದೂರು: ಈ ಭಾಗದಲ್ಲಿ ನದಿ ಹರಿಯುತ್ತದೆ. ಆದರೆ ಬೇಸಿಗೆ ಬಂದರೆ ಕುಡಿಯುವ ನೀರಿಗೂ ತತ್ವಾರ. ಈ ಸಮಸ್ಯೆ ಮನುಷ್ಯರನ್ನಷ್ಟೇ ಕಾಡುತ್ತಿಲ್ಲ. ಬದಲಾಗಿ ವನ್ಯ ಜೀವಿಯಿಂದ ಹಿಡಿದು ಸಾಕು ಪ್ರಾಣಿಗಳಿಗೂ ಕುಡಿಯುವ ನೀರೇ ದೊಡ್ಡ ಸಮಸ್ಯೆ..

ಬೈಂದೂರು ವಿಧಾನಸಭಾ ಕ್ಷೇತ್ರದ ಇಡೂರು ಕುಂಜ್ಞಾಡಿಯ ಮೇಲ್‌ಹೊಸೂರು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಕೇವಲ ಗ್ರಾಮಸ್ಥರಿಗೆ ಮಾತ್ರ ಬಾಧಿಸುತ್ತಿಲ್ಲ. ಸ್ಥಳೀಯ ಅಂಗನವಾಡಿ ಪುಟಾಣಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಇದೆ. ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಗೆ ನೀರು ಪೂರೈಕೆ ಮಾಡುವುದೇ ದೊಡ್ಡ ತಲೆಬೇನೆ. ಮಳೆಗಾಲ ಹೊರತು ಪಡಿಸಿ ಎಲ್ಲಿ ಯಾವ ಬಾವಿಯಲ್ಲಿ ನೀರಿದೆ ಎಂದು ಹುಡುಕಿ ತರುವುದರಲ್ಲೇ ಆಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಹೈರಾಣಾಗುತ್ತಾರೆ. ಈ ಸ್ಥಿತಿ ಅಂಗನವಾಡಿಗೆ ಮಾತ್ರ ಸೀಮಿತವಲ್ಲ. ಊರಿನವರಿಗೂ ಅನ್ವಯಿಸುತ್ತದೆ. ಸ್ಥಳೀಯರು ನಮಗೆ ನೀರಿಲ್ಲದಿದ್ದರೂ ತೊಂದರೆ ಇಲ್ಲಾ. ಅಂಗನವಾಡಿ ಪುಟಾಣಿಗಳಿಗಾದರೂ ನೀರು ಕೊಡಿ ಎಂಬ ಮಾನವೀಯ ಬೇಡಿಕೆ ಕಸದ ಬುಟ್ಟಿ ಸೇರಿದೆ! ಅಂಗನವಾಡಿಯಲ್ಲಿ ೧೮ಕ್ಕೂ ಮಿಕ್ಕಿ ಪುಟಾಣಿಗಳಿದ್ದು, ಅಡುಗೆ, ಶೌಚಾಲಯ ಹಾಗೂ ಇನ್ನಿತರ ಬಳಕೆಗಾಗಿ ಪ್ರತಿದಿನ ಐವತ್ತಕ್ಕೂ ಅಧಿಕ ಕೊಡ ನೀರು ಬೇಕಾಗುತ್ತದೆ. ಮಳೆಗಾದಲ್ಲಿ ಅಂಗನವಾಡಿ ಎದುರಿರುವ ಬಾವಿಯಿಂದ ನೀರು ತರುತ್ತಿದ್ದರೆ, ಜನವರಿ ನಂತರ ಯಾವ ಬಾವಿಯಲ್ಲಿ ನೀರು ಸಿಗುತ್ತದೆ ಎಂದು ಹುಡುಕಿ, ಕಿಮೀ ಗಟ್ಟಲೆ ಅಲೆದು ನೀರು ತರಬೇಕು. ಅಂಗನವಾಡಿ ಬಳಿಯೇ ರಸ್ತೆ ಹಾದು ಹೋಗಿದ್ದು, ಅಂಗನವಾಡಿಗೆ ಕಂಪೌಂಡ್ ಇಲ್ಲದಿರುವುದು ಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತದೆ.

ಜನವರಿಯಿಂದಲೇ ನೀರಿನ ಸಮಸ್ಯೆ ಆರಂಭವಾದರೆ ಮಳೆಗಾಲದ ತನಕ ಮುಂದುವರಿಯುತ್ತದೆ. ಕೊಳೆವೆ ಬಾವಿ, ತೆರೆದ ಬಾವಿ ತೋಡಿದರೂ ನೀರು ಬರುತ್ತಿಲ್ಲ. ಇದಕ್ಕೆ ಕಾರಣ ಶಿಲಾಪದರ. ಆದರೆ ಮೇಲ್ ಹೊಸೂರು ಬಳಸಿ ಹೊಳೆಯೊಂದು ಹರಿಯುತ್ತದೆ. ಅದೇ ಹೊಳೆಗೆ ಡ್ಯಾಮ್ ಕಟ್ಟಿ ಏತ ನೀರಾವರಿ ಮೂಲಕ ನೀರುಣಿಸುವ ಜನರ ಬೇಡಿಕೆಗೆ ಇಂದಿಗೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ.

ಮೇಲ್ ಹೊಸೂರು ನೀರಿನ ಸಮಸ್ಯೆಗೆ ಇಡೂರು ಕುಂಜ್ಞಾಡಿ ಗ್ರಾಪಂ ಸ್ಪಂದಿಸಿದರೂ ಶಾಶ್ವತ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಎರಡು ದಿನಕ್ಕೊಮ್ಮೆ ಗ್ರಾಪಂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಈ ನೀರು ನಾಗರಿಕರಿಗೆ ಸಾಲುತ್ತಿಲ್ಲ. ಕುಡಿಯುವ ದಾಹ ತಣಿಸಿಕೊಳ್ಳುವ ಜತೆ ಸ್ನಾನ, ಶೌಚಕ್ಕೂ ಬಳಸಿ ಸಾಕು ಪ್ರಾಣಿಗಳಿಗೂ ಅದರಲ್ಲೇ ನೀರುಣಿಸುವ ಸ್ಥಿತಿ ಇದೆ. ಪ್ರತಿದಿನ ಗ್ರಾಪಂ ನೀರು ಪೂರೈಕೆ ಮಾಡಬೇಕು ಎನ್ನೋದು ಜನರ ಬೇಡಿಕೆ. ಮನುಷ್ಯರ ಪಾಡು ಹೀಗಾದರೆ ವನ್ಯ ಜೀವಗಳಿಗೆ ದೇವರೇ ದಿಕ್ಕು. ಮೇಲ್ ಹೊಸೂರು ಹಾಗೂ ಹೊಸೂರು ಗ್ರಾಮ ಹಿಂದೆ ಚಿತ್ತೂರು ಗ್ರಾಪಂಗೆ ಸೇರಿದ್ದು, ಗ್ರಾಮ ಪಂಚಾಯಿತಿ ಪುನರ್ ರಚನೆಯಲ್ಲಿ ಹೊಸದಾಗಿ ಜನ್ಮ ತಾಳಿದ ಇಡೂರು ಕುಂಜ್ಞಾಡಿ ಗ್ರಾಪಂಗೆ ಸೇರಿದೆ. ಹೊಸೂರು ಹಾಗೂ ಮೇಲ್ ಹೊಸೂರು ಭೌಗೋಳಿಕವಾಗಿ ಶಿಲಾ ಪದರ ಹೊಂದಿದ ಪ್ರದೇಶವಾಗಿದ್ದು, ಶಿಲೆ ಕಲ್ಲು ಹೇರಳ ದೊರೆಯುತ್ತದೆ. ಇದೇ ಶಿಲೆ ಕಲ್ಲೇ ನೀರಿನ ಸಮಸ್ಯೆ ಮೂಲ. ತೆರೆದ ಬಾವಿ ತೆಗೆದರೆ ಶಿಲೆ ಬರುವುದು ಬಿಟ್ಟರೆ ನೀರು ಬರೋದಿಲ್ಲ. ಹಾಗಾಗಿ ಬಾವಿ ಫೈಲ್ಯೂರ್. ಆದರೆ ನೀರಿನ ಸಮಸ್ಯೆ ಪರಿಹಾರಕ್ಕೆ ಮಾರ್ಗವಿದ್ದು, ಬದ್ದತೆ ಕೊರತೆಯಿಂದ ನೀರಿನ ಸಮಸ್ಯೆ ಇನ್ನೂ ಜ್ವಲಂತವಾಗಿದೆ. ಮುದೂರು ಬಳಿ ಬೆಳ್ಕಲ್ ತೀರ್ಥ ಹಾಗೂ ಸೌಪರ್ಣಿಕಾ ಉಪ ನದಿ ಮೇಲ್ ಹೊಸೂರು ಬಳಸಿ ಹರಿದು ಅರಬ್ಬಿ ಸಮುದ್ರ ಪಾಲಾಗುತ್ತದೆ. ಹಯ್ಯಂಗಾರ್ ಬಳಿ ಚೆಕ್ ಡ್ಯಾಮ್ ಕಟ್ಟಿ ಏತ ನೀರಾವರಿ ಮೂಲಕ ಚಿತ್ತೂರು, ಇಡೂರು ಕುಂಜ್ಞಾಡಿ ಇಡೀ ಗ್ರಾಮಕ್ಕೆ ಕುಡಿಯುವ ನೀರಿನ ಜತೆ ಕೃಷಿಗೂ ಅನುಕೂಲ ಮಾಡಿಕೊಡಲು ಸಾಧ್ಯವಿದೆ. ಈ ಬಗ್ಗೆ ಸ್ಥಳೀಯರು ಗಮನ ಸೆಳೆದರೂ ಯಾರೂ ಸ್ಪಂದಿಸದಿರುವುದು ದೌರ್ಭಾಗ್ಯ. ಅಂಗೈಯಲ್ಲಿ ನೀರಿಟ್ಟುಕೊಂಡು ಸುತ್ತೆಲ್ಲಾ ಹುಡುಕುವ ಸ್ಥಿತಿ ಇದೆ. ಸಂಸದರಿಗೆ, ಶಾಸಕರಿಗೆ ಸ್ಥಳೀಯರು ಮತ್ತೆ ಮನವಿ ಮಾಡಿದ್ದು, ಕಾತರದ ನಿರೀಕ್ಷೆಯಲ್ಲಿದ್ದಾರೆ.

ನಾಲ್ಕಾರು ಗ್ರಾಮಕ್ಕೆ ನೂರಾರು ಮನೆಗೆ ನೀರು ಪೂರೈಸುವಷ್ಟು ಸಮೃದ್ಧ ನದಿಯಿದ್ದರೂ ಬೇಸಿಗೆಯಲ್ಲಿ ಬಾಯಾರಿ ನೀರಿಗೆ ಅಂಡಲೆಯುವುದು ತಪ್ಪುವುದಿಲ್ಲ. ಪ್ರತಿ ಚುನಾವಣೆ ಸಮಯದಲ್ಲೂ ನೀರಿನ ಸಮಸ್ಯೆ ಪರಿಹಾರ ಮಾರ್ಗದ ಬಗ್ಗೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರಿಗೆ ಶಾಸಕರಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಮಾಡಿಕೊಂಡ ಮನವಿ ಅದೆಷ್ಟೋ.. ಮನವಿ ಸ್ವೀಕರಿಸಿದ್ದು ಬಿಟ್ಟರೆ ನೀರು ಸಿಗಲಿಲ್ಲ. ಕುಡಿಯುವ ನೀರಿನೊಟ್ಟಿಗೆ ಸಾಕು ಪ್ರಾಣಿಗಳ ಬೇಸಿಗೆಯಲ್ಲಿ ನೋಡಿಕೊಳ್ಳುವುದು ಕಷ್ಟಕರವಾಗಿದೆ.

ನೀರು ಅತ್ಯಾವಶ್ಯಕ ವಸ್ತುಗಳಲ್ಲಿ ಒಂದು. ನೀರಿಲ್ಲದೆ ಯಾರೂ ಕೂಡ ಬದುಕಲು ಸಾಧ್ಯವಿಲ್ಲ. ಇಂತಹ ಅಮೂಲ್ಯ ಸಂಪತ್ತು ಅನಾವಶ್ಯಕವಾಗಿ ಪೋಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಇಲ್ಲಿನ ಜನರಿಗೆ ನೀರು ಪೂರೈಸುವ ಕಾರ್ಯಕ್ಕೆ ಜನಪ್ರತಿನಿಧಿಗಳು, ಸರ್ಕಾರ ಮುಂದಾಗಬೇಕಿದೆ.

ಶ್ರೀಕಾಂತ ಹೆಮ್ಮಾಡಿ ವಿ4 ನ್ಯೂಸ್ 24/7 ಕುಂದಾಪುರ

Related posts

Leave a Reply