Breaking News

ಬೈಂದೂರಿನಲ್ಲಿ ಧ್ವನಿ ಬೆಳಕು ಆಯೋಜಕರ ಸಭೆ, ವೃತ್ತಿಯೊಂದಿಗೆ ಸಮಾಜ ಸೇವೆಯ ಮಹತ್ವದ ಚರ್ಚೆ

ಉಡುಪಿ ಜಿಲ್ಲಾ ಧ್ವನಿ ಬೆಳಕು ಸಂಯೋಜಕರ ಸಂಘದ ವಾರ್ಷಿಕ ಮಹಾಸಭೆಯು ಮಂಗಳವಾರ ನಾಗೂರಿನ ಶಾಂತೇರಿ ಕಾಮಾಕ್ಷಿ ಸಭಾಭವನದಲ್ಲಿ ನಡೆಯಿತು.
ಸದಸ್ಯರ ಮಾಹಿತಿ ಕೈಪಿಡಿ ಮತ್ತು ವಿದ್ಯಾನಿಧಿಯ ಉದ್ಘಾಟನೆ ಮಾಡಿ ಮಾತನಾಡಿದ ಉಡುಪಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಧ್ವನಿ ಬೆಳಕು ಈಗ ಅನಿವಾರ್ಯ ವ್ಯವಸ್ಥೆ. ಅದರ ಸಂಯೋಜಕರು ಹಗಲು ರಾತ್ರಿಯೆನ್ನದೆ ದುಡಿಯುವ ಶ್ರಮಜೀವಿಗಳು. ವೃತ್ತಿಯೊಂದಿಗೆ ಅವರು ನಡೆಸುತ್ತಿರುವ ಸಮಾಜ ಸೇವೆಯ ಕಾರಣದಿಂದ ಸಮಾಜ ಸದಾ ಅವರನ್ನು ಗುರುತಿಸುತ್ತದೆ ಹಾಗೂ ಸ್ಮರಿಸುತ್ತದೆ ಎಂದರು. ಸಂಘದ ಗೌರವಾಧ್ಯಕ್ಷ ಆಂಟನಿ ಡಿಸೋಜ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್. ಉದಯ ಆಚಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಹಿಂದಿನ ಸಾಲಿನ ವರದಿಯನ್ನು ಪ್ರಧಾನ ಕಾರ್ಯದರ್ಶಿ ಕೆ. ದಾಮೋದರ್, ಆಯವ್ಯಯ ವಿವರಗಳನ್ನು ಕೋಶಾಧಿಕಾರಿ ಸಂತೋಷ ಶೆಟ್ಟಿಗಾರ್ ಮುಂದಿಟ್ಟರು. ಪ್ರಸಕ್ತ ಪದಾಧಿಕಾರಿಗಳನ್ನು ಮುಂದಿನ ಅವಧಿಗೆ ಪುನರಾಯ್ಕೆ ಮಾಡಲಾಯಿತು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಮತ್ತು ಹಿರಿಯ ಕಾರ್ಮಿಕರ ಅಭಿನಂದನೆ ನಡೆದುವು. ಕಾರ್ಯಕ್ರಮ ಪ್ರಾಯೋಜಿಸಿದ ಘಾಟ್ಗೆ ಕರ್ಕೇರಾ ಪವರ್ ಇಂಡಸ್ಟ್ರೀಸ್‌ನ ಶೇಖರ್ ಕರ್ಕೇರಾ, ಅಶೋಕ್ ಲೈಲೇಂಡ್‌ನ ವಿನೋದ್, ದಿನಕರ್ ಅವರನ್ನು ಗೌರವಿಸಲಾಯಿತು. ಸಂಘಕ್ಕೆ ನಿವೇಶನ ಪಡೆದು ಕಟ್ಟಡ ನಿರ್ಮಿಸುವ, ಸಂಘದ ಆಶ್ರಯದಲ್ಲಿ ಸಹಕಾರಿ ಸಂಘ ಸ್ಥಾಪಿಸುವ ಕುರಿತು ವಿಚಾರ ವಿನಿಮಯ ನಡೆಯಿತು.
ಮನೆಗಳಲ್ಲಿ ರಾತ್ರಿ ನಡೆಯುವ ಕಾರ್ಯಕ್ರಮಗಳಲ್ಲಿ ಡಿಜೆ ಸೌಂಡ್ ಸಿಸ್ಟಮ್ ಬಳಸುವಾಗ ಪರಿಸರದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂಬ ದೂರು ಇರುವುದರಿಂದ ಅದನ್ನು ರಾತ್ರಿ ೧೧.೩೦ರವರೆಗೆ ಮಾತ್ರ ಬಳಸುವ ನಿರ್ಬಂಧ ಹೇರುವಂತೆ ಜಿಲ್ಲಾಧಿಕಾರಿಗಳನ್ನು ವಿನಂತಿಸಲು ನಿರ್ಧರಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ಕೆ. ಬಾಲಕೃಷ್ಣ ಪೂಜಾರಿ, ಬೈಂದೂರು ವಲಯದ ಅಧ್ಯಕ್ಷ ಶಶಿಧರ ಶೆಣೈ, ಕುಂದಾಪುರದ ರೋನಿ ಬೆರಟ್ಟೊ, ಬ್ರಹ್ಮಾವರದ ಪುಂಡಲೀಕ ಕಾಮತ್, ಉಡುಪಿಯ ಅನಿಲ್‌ಕುಮಾರ್, ಕಾಪುವಿನ ರಾಘು ಡಿ. ಕೋಟ್ಯಾನ್, ಕಾರ್ಕಳದ ಜಗದೀಶ ಆಚಾರ್ ಅನ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply