Header Ads
Header Ads
Breaking News

ಬೈಂದೂರು:ಮಳೆಗಾದಲ್ಲಿ ರಸ್ತೆಯನ್ನೇ ಕೊರೆದು ಹಾಕುತ್ತದೆ ಯಮಗುಂಡಿ ಹೊಳೆ

ಮಳೆಗಾದಲ್ಲಿ ಯಮಗುಂಡಿ ಹೊಳೆ ರಸ್ತೆಯನ್ನೇ ನುಂಗಿ ಹಾಕುತ್ತದೆ. ಎಲ್ಲರ ಕಿಸೆಯಲ್ಲೂ ಮೊಬೈಲ್‌ಯಿದ್ದರೂ ರಿಂಗ್ ಆಗೋದಿಲ್ಲ. ಹತ್ತಾರು ಪಂಚವಾರ್ಷಿಕ ಯೋಜನೆಗಳು ಸಾಕಾರಗೊಂಡಿವೆ. ಗ್ರಾಮೋದ್ಧಾರ, ಕೃಷಿ, ರೈತ ಎಲ್ಲವೂ ದಿನ ನಿತ್ಯ ಪ್ರಚಾರ ಪಡೆದಷ್ಟು ಉದ್ದಾರವಾಗಿಲ್ಲ ಎನ್ನೋದಕ್ಕೆ ಒಮ್ಮೆ ಕುಂಜ್ಞಾಡಿ ಸುತ್ತಿ ಬಂದರೆ ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯ. ಅಷ್ಟಕ್ಕೂ ಏನಿದು ಇಲ್ಲಿನ ಜನರ ಸಮಸ್ಯೆ ಅಂತೀರಾ..ಈ ಸ್ಟೋರಿ ನೋಡಿ..ಇದು ಬೈಂದೂರು ವಿಧಾನಸಭಾ ಕ್ಷೇತ್ರದ ಕುಂಜ್ಞಾಡಿ ಎಂಬ ಪುಟ್ಟ ಊರಿನ ರಿಯಲ್ ಸ್ಟೋರಿ. ಕುಂಜ್ಞಾಡಿಗೆ ಹಿಂದೆ ರಸ್ತೆಯೇ ಇರಲಿಲ್ಲ. ಗೋವಾ ಹೋಟೆಲ್ ಉದ್ಯಮಿ ಆನಂದ ಶೆಟ್ಟಿ ಕಳೆದ ನಾಲ್ಕು ವರ್ಷದ ಹಿಂದೆ 2ವರೆ ಲಕ್ಷ ವ್ಯಯಿಸಿ ರಸ್ತೆ ಮಾಡಿದರು. ಊರು ಸಂಪರ್ಕಿಸುವ ರಸ್ತೆ ನಡುವೆ ಯಮಗುಂಡಿ ಹೊಳೆ ಹರಿಯೋದೇ ರಸ್ತೆಗೆ ಕಂಟಕ. ಮಳೆಗಾದಲ್ಲಿ ಆನೆಬಲ ಪಡೆಯುವ ಹೊಳೆ ಮೋರಿ ಪೈಪ್ ಕಿತ್ತು, ಮಣ್ಣನ್ನೆಲ್ಲಾ ನುಂಗಿ ನೀರು ಕುಡಿದು ರಸ್ತೆ ಸಂಪರ್ಕವನ್ನೇ ನಿರಾಕರಿಸಿ ಬಿಡುತ್ತದೆ. ಮಳೆಗಾದಲ್ಲಿ ಕಂಕಣ ಸುತ್ತಿ ಮೈಲಾರ ಸೇರಿದ ಹಾಗೆ ಊರು ಸೇರಬೇಕು. ಅದೇ ಹೊಳೆಗೊಂದು ಶಾಶ್ವತವಾದ ಸೇತುವೆ ಮಾಡಿದರೆ ಕೇವಲ ಒಂದುವರೆ ಕೀಮಿನಲ್ಲಿ ಊರು ಸೇರಬಹುದು. ಕಳೆದ ನಾಲ್ಕು ವರ್ಷದಿಂದ ಮಳೆಗಾಲದಲ್ಲಿ ರಸ್ತೆ ಕೊಚ್ಚಿಹೋದರೆ, ಬೇಸಿಗೆಯಲ್ಲಿ ಆನಂದ ಶೆಟ್ಟಿ ಪ್ರತೀವರ್ಷ 15ಸಾವಿರ ಖರ್ಚುಮಾಡಿ ಮಣ್ಣುತುಂಬಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ.. ಆದರೆ ಗ್ರಾಪಂ ನಾಯಾಪೈಸೆ ಕೊಡೋದಿಲ್ಲ ಎನ್ನೋದು ಸ್ಥಳೀಯರ ಆರೋಪವಾಗಿದೆ.

ಚುನಾವಣೆ ಬಂದಾಗ ಊರಿಗೆ ಬಂದು ಮುಖ ತೋರಿಸಿ ಹೋಗುವ ಜನಪ್ರತಿನಿಧಿಗಳು ಮತ್ತೆ ಬರೋದು ಮತ್ತೊಂದು ಎಲೆಕ್ಷನ್ನಿಗೆ. ಊರು ಉದ್ದಾರ ಆಗೋದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಕುಂಜ್ಞಾಡಿ ನಾಗರಿಕರು. ಹಳ್ಳಿ ತೊರೆದು ಪೇಟೆ ಪಟ್ಟಣಕ್ಕೆ ಏಕೆ ಜನ ಗುಳಿಯೆದ್ದು ಹೋಗುತ್ತಾರೆ ಎನ್ನೋದಕ್ಕೆ ಉತ್ತರ ಕುಂಜ್ಞಾಡಿಯಲ್ಲಿ ಸಿಗುತ್ತದೆ. ಸೇತುವೆ ಮಾಡಿಕೊಡದಿದ್ದರೆ ನಾವು ಹೋರಾಟಕ್ಕೂ ಹೆದರೋದಿಲ್ಲ ಎನ್ನುವ ಎಚ್ಚರಿಕೆ ಸಂದೇಶ ಕೂಡಾ ರವಾನಿಸಿದ್ದಾರೆ.

ಕುಂಜ್ಞಾಡಿ ಜನ ಕೃಷಿಕರಾಗಿದ್ದು, ಅಂದು ಎರೆಡೆರೆಡು ಭತ್ತದ ಬೆಳೆ ಬೆಳೆದು, ನಂತರ ದವಸ ಧಾನ್ಯ ಬೆಳೆಯುತ್ತಿದ್ದರು. ಪರಿಸರದ ನಿವಾಸಿಗಳೆಲ್ಲರಿಗೂ ಹೇರಳ ತೆಂಗಿನ ಮರವಿದೆ ಆದರೆ ಎಳೆನೀರಿಗೂ ಬರಗಾಲ. ಭತ್ತದ ಎರಡು ಬೆಳೆಯಿಂದ ಒಂದು ಬೆಳೆಗೆ ಇಳಿದಿದೆ. ಧವಸದಾನ್ಯ ಬೆಳೆಯೋದು ನಿಲ್ಲಿಸಲಾಗಿದ್ದು, ಇದಕ್ಕೆ ಕಾರಣ ಕಾಡು ಪ್ರಾಣಿಗಳ ಲೂಟಿ. ಮಂಗಳ ದಂಡು ತೆಂಗಿನ ಮಿಳ್ಳೆ ಸಹಿತ ಕಚ್ಚಿ ಹಾಕುವುದರಿಂದ ಕಾಯಿ ಕೊಂಡು ತಿನ್ನಬೇಕು. ಹಂದಿ, ಕಾಡುಕೋಣ, ನವಿಲು, ಜಿಂಕೆ, ಕಡವೆ ತಿಂದು ಬಿಟ್ಟದ್ದು ರೈತರು ಕಟಾವು ಮಾಡಿ ಮನೆ ತರಬೇಕು. ದೂರವಾಣಿ ಸಂಪರ್ಕವಿಲ್ಲದ, ಸರಿಯಾದ ರಸ್ತೆ ಸಂಪರ್ಕವೂ ಇಲ್ಲದ ಇಲ್ಲಿನ ನಿವಾಸಿಗಳಿಗೆ ಅನಾರೋಗ್ಯ ಎದುರಾದರೆ ದೇವರೇ ಕಾಯಬೇಕು. ಕೃಷಿಕರ ಪಾಡಂತೂ ವರ್ಣನೆಗೆ ಸಿಗೋದಿಲ್ಲ.

ಕುಂಜ್ಞಾಡಿ ರಸ್ತೆ ಅಭಿವೃದ್ಧಿ ಪಡಿಸಿ, ಸೇತುವೆ ಆದರೆ ಹತ್ತೂರಿಗೆ ಸಂಪರ್ಕ ಕಲ್ಪಿಸಿದಂತೆ ಆಗುತ್ತದೆ. ಕುಂಜ್ಞಾಡಿಯಲ್ಲಿ ೫೦ ಮನೆ, ೩೫೦ಕ್ಕೂ ಮಿಕ್ಕಿ ಜನ ಸಂಖ್ಯೆ ಇದ್ದು, ಸೇತುವೆ ಆದರೆ ಇವರಿಗಷ್ಟೇ ಪ್ರಯೋಜನ ಸಿಗೋದಿಲ್ಲ. ನೂರಾರು ಜನರಿಗೆ ಸಂಚಾರ ಸಲೀಸಾಗಲಿದೆ. ಕುಂಜ್ಞಾಡಿಯಿಂದ ಆಲೂರು, ನಾಡಾ, ಪಡುಕೋಣೆ, ಬ್ಯಾಟ್ರಣಿ, ರಾಗಿಹಕ್ಲು, ಹೇರೂರು ಅರೆಹೊಳೆ ಮೂಲಕ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ೬೬ ಸಂಪರ್ಕಿಸಲು ಸಾಧ್ಯ. ಕುಂಜ್ಞಾಡಿ ಜನ ಮಳೆಗಾದಲ್ಲಿ ರಸ್ತೆ ತುಂಡಾಗುವದರಿಂದ ಉದುರುಬೈಲು ಮರಬೇರು ಸೇತುವೆ ಮೂಲಕ ಇಡೂರು ಸೇರಿ ಅಲ್ಲಿಂದ ಸೇರಬೇಕಾದ ಗಮ್ಯ ಸೇರಬೇಕು. ಕುಂಜ್ಞಾಡಿ ಸೇತುವೆ ಆದರೆ ಸುತ್ತಿಬಳಸಿ ಇಡೂರು ಸೇರುವ ಬದಲು ನೇರವಾಗಿ ಸೇರಬಹುದು.

ಒಟ್ಟಿನಲ್ಲಿ ಕುಂಜ್ಞಾಡಿ ಯಮಗುಂಡಿ ಸೇತುವೆ ಬೇಡಿಕೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ತಲುಪಿದರೂ ಇನ್ನೂ ಕೂಡ ಇಲ್ಲಿನ ಜನತೆಗೆ ಸೇತುವೆ ಭಾಗ್ಯ ಸಿಕ್ಕಿಲ್ಲ. ಯಮಗುಂಡಿ ರಸ್ತೆ ಮಳೆಗಾಲದಲ್ಲಿ ಕೊಚ್ಚಿ ಹೋದಂತೆ ಇಲ್ಲಿನ ಜನರ ಸೇತುವೆ ಕನಸೂ ಕೊಚ್ಚಿ ಹೋಗದೆ ಸಂಬಂಧಪಟ್ಟ ಶಾಸಕರು, ಸರ್ಕಾರ ಯಮಗುಂಡಿ ಹೊಳೆಗೊಂದು ಶಾಶ್ವತ ಸೇತುವೆ ಕಲ್ಪಿಸಲಿ ಎನ್ನೋದೆ ಈ ವರದಿಯ ಆಶಯ.

Related posts

Leave a Reply