Header Ads
Header Ads
Header Ads
Breaking News

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ೧೬೩ನೇ ಜನ್ಮ ದಿನಾಚರಣೆ ಸಂತ ನಾರಾಯಣ ಗುರುಗಳು ನಿಜವಾದ ಜಗದ್ಗುರು ಪುತ್ತೂರಿನಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅಭಿಪ್ರಾಯ

 

ಅಸ್ಪೃಶ್ಯರಿಗೆ ಬೆಳಕಿನ ಕಿರಣವಾಗಿ ಇಡೀ ಮಾನವ ಕುಲಕ್ಕೆ ಒಂದೇ ಜಾತಿ, ಮತ, ದೇವರು ಒಂದೇ ಎಂಬ ಭಾವನೆಯಲ್ಲಿ, ದೇಶಕ್ಕೆ ಸುಂದರ ಮಾರ್ಗದರ್ಶಿಯಾಗಿ ಜನ್ಮ ತಾಳಿದ ಸಂತ ನಾರಾಯಣ ಗುರುಗಳು ನಿಜವಾದ ಜಗದ್ಗುರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಬುಧವಾರ ಇಲ್ಲಿಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ೧೬೩ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಶಿಕ್ಷಣ ವಂಚಿತ ಸಮಾಜ ಇದ್ದ ಕಾಲಘಟ್ಟದಲ್ಲಿ ಸಮಾಜದ ಕಟ್ಟಡಕಡೆಯ ಪ್ರತಿಯೊಬ್ಬನಿಗೂ ಜ್ಞಾನ ವಿಕಸನ ಆಗಬೇಕು ಎಂಬ ನೆಲೆಯಲ್ಲಿ ಆಧ್ಯಾತ್ಮಿಕ ಚಿಂತನೆಯೊಂದಿಗೆ ಶಿಕ್ಷಣ ಕ್ರಾಂತಿ ಮಾಡಿದ ನಾರಾಯಣ ಗುರುಗಳು, ಶಿಕ್ಷಣದ ಮೂಲಕ ಜಗತ್ತು, ಆಧ್ಯಾತ್ಮದ ಮೂಲಕ ಗುರು ಎಂಬುದನ್ನು ತಿಳಿಸಿಕೊಟ್ಟವರು. ಹಿಂದೂ ಧರ್ಮ ಉಳಿಯಲು ನಾರಾಯಣ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಭಿನಂದಿಸಿ ಮಾತನಾಡಿ, ವಿದ್ಯೆ ಕಲಿತು ಸಮಾಜದಲ್ಲಿ ನೆಲೆ ನಿಲ್ಲುವ ಅಡಿಪಾಯವನ್ನು ಹಾಕಿಕೊಟ್ಟು, ಎಲ್ಲರೂ ಒಂದೇ ವರ್ಗಕ್ಕೆ ಸೇರಿದವರು, ದೇವರು ಒಂದೇ ಎಂದು ಜಗತ್ತಿಗೆ ತೋರಿಸಿಕೊಡಲು ಅವತಾರ ಎತ್ತಿದವರು ನಾರಾಯಣ ಗುರುಗಳು. ನಾವೆಲ್ಲರೂ ಮನುಷ್ಯರು ಎಂಬ ಭಾವನೆ ವ್ಯಕ್ತಪಡಿಸಲು ಮತ, ಭಾಷೆ, ದೇಶ ಒಂದೇ ಎಂದು ತಿಳಿಯಲು ಅವರು ಸಾರಿದ ಸಂದೇಶದಡಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವರು ನಾರಾಯಣ ಗುರು ಜಯಂತಿಯನ್ನು ರಾಜ್ಯ ಕಾರ್ಯಕ್ರಮವಾಗಿ ಘೋಷಿಸಿದರು. ನಾರಾಯಣ ಗುರುಗಳ ಸಂದೇಶವನ್ನು ಪ್ರತಿಯೊಬ್ಬನೂ ಆಲಿಸಿ, ತನ್ನ ಜೀವನದಲ್ಲಿ ಅಳವಡಿಸಿ ದೇಶ ಪ್ರೇಮವನ್ನು ಬೆಳೆಸೋಣ ಎಂದು ತಿಳಿಸಿದರು.
ಮಂಗಳೂರು ಶ್ರೀ ನಾರಾಯಣಗುರು ಪ.ಪೂ. ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಗುರು ಸಂದೇಶ ನೀಡಿ, ಕೇವಲ ಒಂದು ಸಮಾಜಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಕ್ರಿಯಾಶೀಲ ವಿಜ್ಞಾನಿಯಾಗಿ, ವಿಶ್ವಕ್ಕೆ ಸಂತನಾಗಿ ಜಗತ್ತನ್ನು ಕಂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕಿನ ವಿಚಾರಧಾರೆ ಪ್ರಸ್ತುತ ಅಗತ್ಯ. ಶಿಕ್ಷಕಿತರ ನಾಡು, ಬುದ್ಧಿವಂತರ ನಾಡು ಎಂದು ಹೇಳಿಕೊಳ್ಳುವುದರ ಹಿಂದೆ ಇದ್ದವರು ನಾರಾಯಣ ಗುರುಗಳು. ಅಂತಃಮುಖಿಯಾಗಿ ಶಿಕ್ಷಣದಲ್ಲೇ ಆಧ್ಯಾತ್ಮದ ಸೆಳೆತಕ್ಕೊಳಗಾಗಿ ಇಡೀ ಸಮಾಜ ಹಿಂಸೆಯಿಂದ ಮುಕ್ತವಾಗಿ ಶಾಂತಿಯಿಂದ ಜಗತ್ತಿನ ಪರಿವರ್ತನೆ ಸಾಧ್ಯ ಎಂದು ತೋರಿಸಿಕೊಟ್ಟವರು ನಾರಾಯಣ ಗುರುಗಳು. ಜಗತ್ತಿನ ಇತಿಹಾಸದಲ್ಲಿ ಶೂದ್ರನಾಗಿ ಹುಟ್ಟಿದರೂ ಲಕ್ಷಾಂತರ ಜನರ ಎದುರು ಶಿವನ ಪ್ರತಿಷ್ಠಾಪನೆ ಮಾಡಿರುವ ಅವರು, ಸಾಮರಸ್ಯ ಜೀವನಕ್ಕೆ ಗಾಂಧೀಜಿಯಂತರ ಮಹಾತ್ಮರಿಗೆ ಮಹಾತ್ಮರಾಗಿದ್ದವರು. ಶಿಕ್ಷಣದಿಂದ ಜಾಗೃತಿಯಾಗಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಣ ಕ್ರಾಂತಿಯನ್ನುಂಟು ಮಾಡಿದ ನಾರಾಯಣ ಗುರುಗಳ ಸಂದೇಶ ಪ್ರಸ್ತುತ ಮನೆ ಮನೆಯನ್ನು ಬೆಳಗಬೇಕು ಎಂದ ಅವರು, ಬದುಕು ನೀಡಿದ ಮನೆ, ಅಸ್ತಿತ್ವ ನೀಡಿದ ಸಮುದಾಯ, ಭವಿಷ್ಯ ನೀಡಿದ ದೇಶವನ್ನು ಮರೆಯಬೇಡ ಎಂಬ ಸಂದೇಶವನ್ನು ಸಾರಿದವರು. ಇವೆಲ್ಲದಕ್ಕೆ ಇಂದು ನಾವು ಆಚರಿಸಲ್ಪಡುವ ನಾರಾಯಣ ಗುರುಗಳ ಜಯಂತಿಯೇ ಕಾರಣ ಎಂದು ಹೇಳಿದರು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕಕ್ಕಪದವು ಎಂಯಲ್‌ಎಮ್. ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ರೋಹಿನಾಥ್ ಪಾದೆ, ಮುಲ್ಕಿ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೇರಾಜೆ ಪಾಲ್ಗೊಂಡು ಶುಭ ಹಾರೈಸಿದರು. ವೇದಿಕೆಯಲ್ಲಿ ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ ಉಪಸ್ಥಿತರಿದ್ದು ಶುಭ ಹಾರೈಸಿದರು.
ಸಮಾರಂಭದಲ್ಲಿ ವಲಯ ಸಂಚಾಲಕರು ಹಾಗೂ ವಿವಿಧ ಗ್ರಾಮ ಸಮಿತಿ ಅಧ್ಯಕ್ಷರಿಗೆ ಶಾಲು ಹೊದಿಸಿ ಗೌರವಾರ್ಪಣೆ ಸಲ್ಲಿಸಲಾಯಿತು. ಸಮಾರಂಭದಲ್ಲಿ ಉಪಸ್ಥಿತರಿದ್ದ ಇತರ ಸಮಾಜದ ಮುಂದಾಳುಗಳನ್ನೂ ಪುಷ್ಪ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಂಭತ್ತು ಮಂದಿ ಸಾಧಕರನ್ನು ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿಶೇಷ ಸಾಧನೆ ಮಾಡಿದ ಸಮಾಜದ ರವಿಚಂದ್ರ ಕನ್ನಡಿಕಟ್ಟೆ (ಯಕ್ಷಗಾನ ಭಾಗವತಿಕೆ) ಹಾಗೂ ಲಹರಿ ಕೋಟ್ಯಾನ್ (ಸಂಗೀತ) ಅವರನ್ನು ಗೌರವಿಸಲಾಯಿತು. ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಎಡ್, ಬಿಬಿಎಂ, ಬಿಸಿಎ, ಬಿಎಡ್, ಎಲ್‌ಎಲ್‌ಬಿ, ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಮುಂತಾದ ಕಲಿಕೆಯಲ್ಲಿ ಅಂತಿಮ ಪರೀಕ್ಷೆಯಲ್ಲಿ ಅತ್ಯದಿಕ ಅಂಕ ಗಳಿಸಿದವರಿಗೆ, ಜಿಲ್ಲಾ ಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡೆ, ಕಲಾ, ಬಾಲ, ಸಾಹಿತ್ಯ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಐಪಿಎಸ್, ಐಎಎಸ್, ಕೆಎಎಸ್, ಕೆಇಎಸ್, ಪಿಎಚ್‌ಡಿ ಪದವಿ ಪಡೆದವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸ್ಪರ್ಧಾ ವಿಜೇತರ ಪಟ್ಟಿಯನ್ನು ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷ ಜಯಂತ ಬಾಯಾರು ಓದಿದರು. ಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸಿ.ನಾರಾಯಣ ರೆಂಜ ,ಬಿಲ್ಲವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗೇಶ್ ಬಲ್ನಾಡು, ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ, ನಾರಾಯಣ ಗುರುಸ್ವಾಮಿ ಮಂದಿರದ ಸದಸ್ಯ ಚಂದ್ರಕಾಂತ ಶಾಂತಿವನ ಅತಿಥಿಗಳನ್ನು ಗೌರವಿಸಿದರು. ಮಂದಿರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಸಿ.ನಾರಾಯಣ ರೆಂಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸದಸ್ಯ ಶಶಿಧರ ಕಿನ್ನಿಮಜಲು, ದಿನೇಶ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಬೆಳಗ್ಗೆ ೭.೩೦ ರಿಂದ ನಾರಾಯಣ ಶಾಂತಿ ಪಟ್ಲಕೆರೆ ಮತ್ತು ಶಿಷ್ಯವೃಂದದವರಿಗೆ ವೈದಿಕ ಕಾರ್ಯಕ್ರಮ ಪಂಚಾಮೃತಾಭಿಷೇಕ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಆಲಂಕಾರು ಗ್ರಾಮ ಸಮಿತಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಪ್ರಸಾದ ಭೋಜನ ಜರಗಿತು.

Related posts

Leave a Reply