Header Ads
Header Ads
Breaking News

ಬ್ರಿಟೀಷ್ ಜೈಲ್ ಗೋಡೆ ಕುಸಿಯುವ ಭೀತಿ, ಸರಕಾರಿ ಆಸ್ಪತ್ರೆಗೂ ಅಪಾಯ; ರೋಗಿಗಳಿಗೂ ಭಯ…!

ಪುತ್ತೂರು: ಬ್ರಿಟಿಷರ ಕೊಡುಗೆಯಾಗಿ ಪುತ್ತೂರು ಹಳೆ ತಾಲೂಕು ಕಚೇರಿ ಹಿಂಭಾಗದಲ್ಲಿದ್ದ ಸಬ್ ಜೈಲ್ ಇದೀಗ ಅಳಿವಿನಂಚಿನಲ್ಲಿದ್ದು, ನೂರು ವರ್ಷಕ್ಕೂ ಹೆಚ್ಚಿನ ಆಯುಷ್ಯದ ಈ ಜೈಲಿನ ಗೋಡೆಗಳು ಮಳೆಯ ಅಬ್ಬರಕ್ಕೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮುಂಜಾಗರೂಕತೆ ವಹಿಸದಿದ್ದರೆ ಈ ಗೋಡೆ ಕುಸಿದು ಅಪಾಯ ಉಂಟಾಗುವ ಸಾಧ್ಯತೆ ಕಂಡುಬಂದಿದೆ.ಬ್ರಿಟಿಷರ ಕಾಲದ ಆಡಳಿತಾತ್ಮಕ ಹಿನ್ನಲೆಯಲ್ಲಿ ನಿರ್ಮಿಸಲಾದ ಈ ಸಬ್ ಜೈಲ್ ಅತ್ಯಂತ ಗಟ್ಟಿಯಾಗಿ ನಿರ್ಮಾಣವಾಗಿತ್ತು. ಜೋಡಿ ದಪ್ಪ ಕಲ್ಲಿನಲ್ಲಿ ಗೋಡೆ ನಿರ್ಮಿಸಲಾಗಿದೆ. ಸುಮಾರು5 ಅಡಿ ಕಗ್ಗಲ್ಲಿನ ಅಡಿಪಾಯ ಹಾಕಿ ಗೋಡೆ ನಿರ್ಮಾಣ ನಡೆದಿದೆ. ಆದರೆ ಇದೀಗ ಗೋಡೆ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿದೆ.

 

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಅನುಕೂಲದ ಹಿನ್ನಲೆಯಿಂದ ಕೋರ್ಟ್ ಮತ್ತು ಸಬ್‌ಜೈಲ್ ಅಕ್ಕಪಕ್ಕದಲ್ಲಿದ್ದು, ಬ್ರಿಟಿಷ್ ಸರಕಾರ ಸುಸಜ್ಜಿತ ಕಟ್ಟಡ ನಿರ್ಮಿಸಿತ್ತು. ಮುಂಭಾಗದಲ್ಲಿ ನ್ಯಾಯಾಲಯ ಮತ್ತು ಹಿಂಭಾಗದಲ್ಲಿ ಜೈಲು ಕಾರ್ಯಾಚರಿಸುತ್ತಿತ್ತು. ಸ್ವಾತಂತ್ರ್ಯಾ ನಂತರವು ಕೆಲ ಕಾಲ ಹೀಗೆಯೇ ಮುಂದುವರಿದಿತ್ತು. 60ರ ದಶಕದಲ್ಲಿ ಕೋರ್ಟ್ ಸಮುಚ್ಚಯವನ್ನು ತಾಲೂಕು ಕಚೇರಿಯಾಗಿ ಪರಿವರ್ತಿಸಲಾಯಿತು. ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಜೈಲ್ ನಿರ್ಮಾಣಗೊಂಡ ಕಾರಣ ಪುತ್ತೂರಿನ ಸಬ್‌ಜೈಲ್ ಅನಾಥವಾಯಿತು. ಕಂದಾಯ ಇಲಾಖೆಯ ಭಾಗವಾಗಿರುವ ಖಜಾನೆಯಾಗಿಯೂ ಈ ಸಬ್‌ಜೈಲನ್ನು ಸ್ವಲ್ಪ ಸಮಯ ಬಳಸಿಕೊಳ್ಳಲಾಗಿತ್ತು. 

 ಆದರೆ ಜೈಲು ಮಾತ್ರ ಹಾಗೆಯೇ ಉಳಿಯಿತು. ಸುಮಾರು ನೂರು ವರ್ಷಗಳಲ್ಲಿ ಬಿಸಿಲು ಮಳೆಗೆ ಮೈಯೊಡ್ಡಿನಿಂತ ಈ ಜೈಲಿನ ಗೋಡೆಗಳು ಬಿರುಕುಬಿಟ್ಟದ್ದಷ್ಟೇ ಅಲ್ಲ. ಇಲ್ಲಿ ಪೊದೆ, ಕಸಗಳ ರಾಶಿ ತುಂಬಿ ಇಡೀ ವಾತಾವರಣ ದುರ್ವಾಸನೆಯ ಕೇಂದ್ರವಾಯಿತು. ಇದೀಗ ಈ ಗೋಡೆಯ ಪಕ್ಕದಲ್ಲಿರುವ ಸರಕಾರಿ ಆಸ್ಪತ್ರೆ ಕಟ್ಟಡ, ಶವಾಗಾರಕ್ಕೂ ಗೋಡೆ ಕುಸಿತದಿಂದ ಅಪಾಯ ಉಂಟಾಗುವ ಸಾಧ್ಯತೆ ಇದೆ. ಸರಕಾರಿ ಆಸ್ಪತ್ರೆಯ ರೋಗಿಗಳು, ಮಕ್ಕಳು ಈ ಭಾಗದಲ್ಲಿ ಓಡಾಡುತ್ತಿರುವುದು, ಶವಾಗಾರಕ್ಕೆ ಬಂದವರೂ ಇದೇ ಭಾಗದಲ್ಲಿ ಗುಂಪಾಗಿ ನಿಲ್ಲುವುದರಿಂದ ಗೋಡೆ ಕುಸಿದರೆ ಮತ್ತಷ್ಟು ದೊಡ್ಡ ಸಮಸ್ಯೆಗೆ ಕಾರಣವಾಗುವ ಭೀತಿಯೂ ಇಲ್ಲಿಗೆ ಬರುವ ಜನತೆಯಲ್ಲಿ ಆವರಿಸಿದೆ. ಇದರೊಂದಿಗೆ ಸರಕಾರಿ ಆಸ್ಪತ್ರೆಯ ವಠಾರಕ್ಕೆ ಬೆಳಕು ನೀಡುವ ಬೀದಿ ದೀಪಗಳು ಇಲ್ಲೇ ಇದ್ದು, ಗೋಡೆ ಕುಸಿದು ಬಿದ್ದರೆ ಈ ಕಂಬಗಳು ಬೀಳುವ ಸಾಧ್ಯತೆ ಇದೆ. ಆಸ್ಪತ್ರೆಯಿಂದ ಔಷಧಿ ದಾಸ್ತಾನು ಕೊಠಡಿಗೆ ಹಾಗೂ ಶವಾಗಾರಕ್ಕೆ ಹೋಗಲು ಇರುವ ನಿರ್ಗಮನ ಬಾಗಿಲು ಕೂಡಾ ಈ ಗೋಡೆ ಎದುರು ಭಾಗದಲ್ಲಿ ಇದ್ದು, ಅಪಾಯ ಉಂಟುಮಾಡುವ ತರುವ ಆತಂಕವೂ ಇದೆ.

Related posts

Leave a Reply