Breaking News

ಭಟ್ಕಳದಲ್ಲಿ ರೈಲ್ವೆ ಅಪಘಾತ ತಪ್ಪಿಸಿ ಸಾಹಸ ಮೆರೆದ ಯುವಕ, ಸಮಯಪ್ರಜ್ಞೆ ಮೆರೆದ ರೈಲ್ವೆ ಟಿ.ಟಿ. ಪರಮೇಶ್ವರ ನಾಯ್ಕ


ಇಲ್ಲೊಬ್ಬ ಯುವಕ ತನ್ನ ಜಾಣ್ಮೆ, ಸಮಯ ಸಂಯಮದಿಂದ ಆಗಬಹುದಾದಂತಹ ದೊಡ್ಡ ದುರಂತವನ್ನ ತಪ್ಪಿಸಿದ್ದಾನೆ. ಕಳೆದ ಜೂನ್ ೮ರಂದು ಸಂಜೆ ಬೆಂಗ್ರೆಯ ಮೋಹನ ನಾಯ್ಕ ಎನ್ನುವ ಯುವಕ ಗದ್ದೆ ಕೆಲಸಕ್ಕೆಂದು ರೈಲ್ವೆ ಹಳಿ ಆಚೆ ತೆರಳುತ್ತಿದ್ದ ಸಂಧರ್ಭದಲ್ಲಿ ತಾಲೂಕಿನ ಚಿತ್ರಾಪುರ ಹಾಗೂ ಮುರ್ಡೇಶ್ವರ ಮಧ್ಯ ಭಾಗವೊಂದರಲ್ಲಿನ ರೈಲಿನ ಟ್ರಾಕ್ ನಂ: ೬೦೩/೦೨ ಹಳಿ ಬಿರುಕುಗೊಂಡಿರುವುದು ಆತನ ಗಮನಕ್ಕೆ ಬಂದಿದೆ.
ಒಂದು ಕ್ಷಣಕ್ಕೆ ಆತನಿಗೆ ಏನು ಮಾಡಬೇಕೆಂದು ತೋಚಲಿಲ್ಲ ಆ ಬಳಿಕ ಶಿರಾಲಿಯ ಚಿತ್ರಾಪುರದ ನಿವಾಸಿಯಾದ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪರಮೇಶ್ವರ ನಾಯ್ಕ ಎನ್ನುವವರಿಗೆ ರೈಲು ಹಳಿ ಬಿರುಕುಗೊಂಡ ಬಗ್ಗೆ ಮೊಬೈಲ್ ಕರೆ ಮಾಡಿ ತಕ್ಷಣಕ್ಕೆ ಮಾಹಿತಿ ತಿಳಿಸಿದ್ದಾನೆ. ಆ ಮಾರ್ಗವಾಗಿ ಅದೇ ಸಮಯ ಮಡಗಾಂವ್ ಮಂಗಳೂರು ರೈಲು ಸಂಚರಿಸಲಿದ್ದು, ಅದೇ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಪರಮೇಶ್ವರ ನಾಯ್ಕ ಸಂಚರಿಸುತಿದ್ದರು. ತಕ್ಷಣಕ್ಕೆ ಸಮಯಪ್ರಜ್ಞೆ ಮೆರೆದ ಟಿ.ಟಿ. ಪರಮೇಶ್ವರ ನಾಯ್ಕ ಮುರ್ಡೇಶ್ವರ ರೈಲ್ವೆ ವಿಭಾಗಕ್ಕೆ ಸರಿಯಾದ ಸಮಯಕ್ಕೆ ಕರೆ ಮಾಡಿದ್ದಾರೆ. ಬಳಿಕ ಸಂಚರಿಸುತ್ತಿದ್ದ ರೈಲು ನಂಬರ್ ೫೬೬೪೧ ಮಡಗಾಂವ್ ಮಂಗಳೂರು ರೈಲನ್ನು ಚಿತ್ರಾಪುರದ ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ನಿಲ್ಲಿಸಿ ರೈಲ್ವೆ ಇಲಾಖಾ ಸಿಬ್ಬಂದಿಗಳು ಬಿರುಕುಗೊಂಡ ರೈಲು ಹಳಿಯನ್ನು ಸರಿಪಡಿಸಿದರು.
ರೈಲು ಹಳಿ ಸಂಚಾರಕ್ಕೆ ಮುಕ್ತವಾದ ಬಳಿಕ ರೈಲ್ವೆ ನಂಬರ್ ೫೬೬೪೧ ಮಡಗಾಂವ್ ಮಂಗಳುರು ರೈಲನ ಪ್ರಯಾಣ ಮುಂದುವರೆಸಿದರು. ಒಂದು ವೇಳೆ ಗದ್ದೆ ಕೆಲಸಕ್ಕೆ ಹೋಗುತ್ತಿದ್ದ ಯುವಕನ ಗಮನಕ್ಕೆ ಬಿರುಕುಗೊಂಡ ರೈಲು ಹಳಿ ಕಾಣಿಸದಿದ್ದರೆ ಹಾಗೂ ಬಿರುಕುಗೊಂಡ ಬಗ್ಗೆ ರೈಲ್ವೆ ಟಿ.ಟಿ. ಪರಮೇಶ್ವರ ನಾಯ್ಕಗೆ ಕರೆ ಮಾಡಿದಾಗ ಯಾವುದೋ ಸುಳ್ಳು ಕರೆಯೆಂದು ನಿಷ್ಕಾಳಜಿ ತೋರಿದ್ದರೆ ಅತೀ ದೊಡ್ಡ ರೈಲು ಅನಾಹುತವಾಗುವುದರ ಜೊತೆಗೆ ಅದೆಷ್ಟೋ ಪ್ರಾಣಹಾನಿ ಸಂಭವಿಸುತ್ತಿತ್ತು. ಅನಾಹುತವನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ ಬೆಂಗ್ರೆಯ ಯುವಕ ಮೋಹನ ಮಾದೇವ ನಾಯ್ಕನಿಗೆ ಕಾರವಾರ ವಿಬಾಗದ ಕೊಂಕಣ ರೈಲ್ವೆ ರೀಜನಲ್ ರೈಲ್ವೆ ಮ್ಯಾನೇಜರ್ ಎಮ್.ಡಿ. ಆಸೀಮ್ ಸುಲೇಮಾನ್ ಬೆಂಗ್ರೆಗೆ ಆಗಮಿಸಿ ಯುವಕನಿಗೆ ೧೦,೦೦೦ ಸಾವಿರ ನಗದು ಬಹುಮಾನ ಸೇರಿ ಶಾಲು ಹೊದಿಸಿ ಗೌರವಿಸಿ ಪ್ರಶಸ್ತಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ರೈಲು ಹಳಿಯಲ್ಲಾದ ಬಿರುಕು ಚಿಕ್ಕದಾದರೂ ಆಗಬಹುದಾದ ಅನಾಹುತ ಮಾತ್ರ ದೊಡ್ಡದಾಗಿರುತ್ತಿತ್ತು. ತಪ್ಪಿಸಿದ ಸಾಹಸಿ ಯುವಕ ಮೋಹನ ಹಾಗೂ ಸಮಯಪ್ರಜ್ಞೆ ಮೆರೆದ ರೈಲ್ವೆ ಟಿ.ಟಿ. ಪರಮೇಶ್ವರ ನಾಯ್ಕ ಎಲ್ಲರಿಗೂ ಮಾದರಿಯೇ ಸರಿ.

Related posts

Leave a Reply