Header Ads
Breaking News

ಭತ್ತ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ಕಾಯಬೇಕಿತ್ತು -ಮನೋಹರ ಶೆಟ್ಟಿ

ಬಂಟ್ವಾಳ: ಭತ್ತ ಬೆಳೆಗಾರರಿಗೆ ಸಕಾಲದಲ್ಲಿ ಬೆಂಬಲ ಬೆಲೆ ನೀಡಿ ಸರ್ಕಾರ ರೈತರ ಹಿತಕಾಯ ಬೇಕಿತ್ತು ಅದನ್ನು ಬಿಟ್ಟು ಭತ್ತ ಖಾಸಗಿ ಗಿರಣಿ ಸೇರಿದ ಬಳಿಕ ದ.ಕ.ಜಿಲ್ಲಾಧಿಕಾರಿಗಳು ರೈತರಿಗೆ ಬೆಂಬಲ ಬೆಲೆ ಘೋಷಿಸಿದ್ದು ರೈತನ ಮೂಗಿಗೆ ತುಪ್ಪ ಸವರಿದಂತೆ ಎಂದು ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಆರೋಪಿಸಿದ್ದಾರೆ.

ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಜಿಲ್ಲೆಯ ಜನತೆಯ ಜೀವಸತ್ವದ ಹಾಗೂ ಸಂಸ್ಕೃತಿಯ ಬೆಳೆ ಭತ್ತ. ಕರಾವಳಿ ಜಿಲ್ಲೆಗಳಲ್ಲಿ ಭತ್ತ ಬೆಳೆಯಬೇಕಾದರೆ ರೈತರು ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಭತ್ತ ಸಾಗುವಳಿಯ ಉತ್ಪಾದನ ವೆಚ್ಚವನ್ನು ಲೆಕ್ಕ ಹಾಕಿ ರೈತ ಸಂಘ ಹಸಿರು ಸೇನೆಯ ವಿನಂತಿಯ ಮೇರೆಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕರಾವಳಿ ಪ್ಯಾಕೇಜ್ ಘೋಷಣೆ ಮಾಡಿ ಅನುದಾನ ಬಿಡುಗಡೆ ಮಾಡಿದ್ದರು. ಬಳಿಕ ಯಡಿಯೂರಪ್ಪ ಸರಕಾರ ಒಂದು ವರ್ಷ ಪ್ರೋತ್ಸಾಹ ನೀಡಿದೆ. ಕರೋನಾ ಮಹಾಮಾರಿಯ ಸಂದರ್ಭ ಹೊರದೇಶ, ಹೊರರಾಜ್ಯಗಳಿಂದ ಕೆಲಸವಿಲ್ಲದೆ ಬಂದ ನಿರುದ್ಯೋಗಿ ಯುವಕರು ಹಡಿಲು ಗದ್ದೆಗಳನ್ನು ಸಾಗುವಳಿ ಮಾಡಿ ಆಹಾರ ಉತ್ಪಾದನೆಯಲ್ಲಿ ದಾಖಲೆ ಮಾಡಿದ್ದಾರೆ. ಸರ್ಕಾರ ಈ ಯುವಕರ ಕಾರ್ಯಕ್ಕೆ, ರೈತರ ಶ್ರಮಕ್ಕೆ ಪ್ರೋತ್ಸಾಹ ನೀಡಬೇಕಿತ್ತು. ಆ ಸಂದರ್ಭವೇ ಕರಾವಳಿ ಪ್ಯಾಕೇಜ್ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ, ಜಿಲ್ಲಾಧಿಕಾರಿ ಸಹಿತ ಕೃಷಿ ಅಧಿಕಾರಿಗಳಲ್ಲಿ ಅಂಗಲಾಚಿದರೂ ಕರೋನಾ ನೆಪ ಹೇಳಿ ಪ್ರೋತ್ಸಾಹ ಧನ ನೀಡದೆ ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply

Your email address will not be published. Required fields are marked *