Header Ads
Breaking News

ಭಾರೀ ಮಳೆಗೆ ಸುಳ್ಯ ತಾಲೂಕು ತತ್ತರ : ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಕ್ರಮಕ್ಕೆ ತಹಶೀಲ್ದಾರ್ ಸೂಚನೆ

ಸುಳ್ಯ ತಾಲೂಕಿನಲ್ಲಿ ಮಂಗಳವಾರ ಭಾರೀ ಮಳೆ ಅಬ್ಬರಿಸಿದೆ. ತಾಲೂಕಿನ ವಿವಿಧ ಕಡೆ ಜಲ ಸಂಕಷ್ಟ ತಂದೊಡ್ಡಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಸಣ್ಣಪುಟ್ಟ ಹಾನಿ ಸಂಭವಿಸಿದ್ದು, ಸುಳ್ಯ ತಹಶೀಲ್ದಾರ್ ವಿವಿದೆಡೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ದಿನಪೂರ್ತಿ ಸುರಿದ ಧಾರಾಕಾರ ಮಳೆಗೆ ಅನೇಕ ಪ್ರದೇಶಗಳು ಜಲಾವೃತಗೊಂಡಿತು. ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಮಳೆ ನೀರು ಉಕ್ಕಿ ರಸ್ತೆಯಲ್ಲಿ ಹರಿದು ವಾಹನಗಳು ನೆರೆ ನೀರಿನಲ್ಲಿಯೇ ಸಂಚರಿಸುವಂತಾಯಿತು. ಪೆರುವಾಜೆ ದೇವಸ್ಥಾನಕ್ಕೆ ನೆರೆ ನೀರಿನ ಸ್ಪರ್ಶವಾಯಿತು. ಹೊರಾಂಗಣದಲ್ಲಿ ನೀರು ತುಂಬಿ ಹರಿಯಿತು.

ಸುಳ್ಯದ ಕೇರ್ಪಳದಲ್ಲಿ ರಸ್ತೆ ಬದಿಯಲ್ಲಿದ್ದ ಮರವೊಂದು ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ಗುತ್ತಿಗಾರು ಪಂಜ ರಸ್ತೆಯ ಬಳ್ಳಕದಲ್ಲೂ ರಸ್ತೆಗಡ್ಡವಾಗಿ ಮರ ಬಿದ್ದಿತ್ತು. ಜಾಲ್ಸೂರಿನಲ್ಲಿ ಗಾಳಿ ಮಳೆಗೆ ಮೀನು ಮಾರುಕಟ್ಟೆಯ ಶೀಟ್ ಹಾರಿ ಹೋಗಿದೆ.
ಪೆರಾಜೆಯಲ್ಲಿ ಗಾಡಿಗುಡ್ಡೆ ಕೆ.ಸಿ. ಮೋಹನ್ ಎಂಬವರ ಮನೆಗೆ ಬರೆ ಜರಿದು ಮಣ್ಣು ಬಿದ್ದು ಹಾನಿ ಸಂಭವಿಸಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸುಳ್ಯ ನಗರದ ಕೇರ್ಪಳ ಎಂಬಲ್ಲಿ ಕಾಂಪೌಂಡ್ ಕುಸಿದ ಪರಿಣಾಮ ಪಕ್ಕದಲ್ಲೆ ಇರುವ ಹೊಸಮನೆಗೆ ಹಾನಿಯಾದ ಘಟನೆ ನಡೆಯಿತು.

ರಾತ್ರಿ ಸುಮಾರು 1.30ರ ವೇಳೆಗೆ ಸತ್ಯಾನಂದ ಎಂಬವರ ಮನೆಯ ಕಾಂಪೌಂಡ್ ಕುಸಿದು ಪಕ್ಕದಲ್ಲಿರುವ ಸೀತಾರಾಮ ಎಂಬವರ ಮನೆಗೆ ಬಿದ್ದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ಕಿಟಕಿಗಳಿಗೂ ಹಾನಿಯಾಗಿದೆ. ತಿಂಗಳ ಹಿಂದಷ್ಟೇ ಈ ಮನೆಯ ಗೃಹಪ್ರವೇಶ ನಡೆದಿತ್ತು.

ಕಾನತ್ತಿಲದಲ್ಲಿ ಪತ್ರಕರ್ತ ಹರೀಶ್ ಬಂಟ್ವಾಳ್‌ರವರ ಮನೆಯ ಕಾಂಪೌಂಡ್ ಕುಸಿದು ಬಿದ್ದು ಭಾರೀ ಹಾನಿ ಸಂಭವಿಸಿದೆ. ಕಾಂಪೌಂಡ್ ಕುಸಿದು ಬಿದ್ದ ಕಾರಣ ಅವರ ಮನೆಯ ಬಳಿ ಇರುವ ಇನ್ನೊಂದು ಮನೆ , ಅಲ್ಲಿದ್ದ ರಿಕ್ಷಾ ಹಾಗೂ ಬೈಕ್‌ಗೆ ಹಾನಿ ಸಂಭವಿಸಿದೆ. ನ.ಪಂ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಐವರ್ನಾಡಿನ ಕೆಳಗಿನ ಪೇಟೆಯಲ್ಲಿ ಮೋರಿ ಒಡೆದು ಮಳೆನೀರು ಉಕ್ಕಿದ್ದು ರಸ್ತೆಯಲ್ಲಿ ಹರಿದಿದೆ.ಇದರಿಂದ ಮುಖ್ಯ ರಸ್ತೆಯಿಂದ ಪಾಲೆಪ್ಪಾಡಿ ಹೋಗುವ ಮಾರ್ಗದಲ್ಲಿ ಸಂಪೂರ್ಣ ನೀರು ಹರಿದಿದ್ದು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಕಲ್ಲುಮುಟ್ಲಿನಲ್ಲಿ ಬರೆ ಕುಸಿದು ಮನೆಗಳಿಗೆ ಹಾನಿ ಸಂಭವಿಸಿದೆ. ಉಬರಡ್ಕ ಮಿತ್ತೂರು ರಸ್ತೆಯಲ್ಲಿ ನೆರೆನೀರಿನಿಂದ ಕುಸಿತ ಸಂಭವಿಸಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ತಾಲೂಕಿನಾದ್ಯಂತ ಬೀಸಿದ ಗಾಳಿ ಮಳೆಗೆ 50ವಿದ್ಯುತ್ ಕಂಬಗಳು ಧಾರಶಾಯಿ ಆಗಿದೆ. ಇದರಿಂದ ಕೆಲವು ಗ್ರಾಮಗಳು ಕತ್ತಲೆಯಲ್ಲಿ ಕಾಲ ಕಳೆಯುವಂತೆ ಆಗಿದೆ.

ತಾಲೂಕಿನಾದ್ಯಾಂತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕೊಲ್ಲಮೊಗ್ರ ಹಾಗೂ ಕಲ್ಲುಗುಂಡಿಯಲ್ಲಿ ಗಂಜಿ ಕೇಂದ್ರ ಆರಂಬಿಸಲು ತಾಲೂಕು ಆಡಳಿತ ಸಿದ್ಧತೆ ನಡೆಸಿದೆ. ತಹಶೀಲ್ದಾರ್ ಕುಂಞಿ ಅಹಮದ್‌ರವರು ತಾಲೂಕು ಕಛೇರಿಯಲ್ಲಿ ನಡೆಸಿದ ಅಧಿಕಾರಿಗಳ ಸಮಾಲೋಚನೆಯ ವೇಳೆ ಈ ವಿಷಯ ತಿಳಿಸಿದರಲ್ಲದೆ, ಪಾಕೃತಿಕ ವಿಕೋಪ ಸಂಭವಿಸಿದರೆ ತಕ್ಷಣ ಹೋಗಿ ಪರಿಹಾರ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ದ.ಕ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ ಹಿನ್ನಲೆಯಲ್ಲಿ, ಸಾರ್ವಜನಿಕರು ಯಾವುದೇ ತುರ್ತು ಸಮಯದಲ್ಲಿ ಸುಳ್ಯ ವಿಖಾಯ ತಂಡದ ಸಹಾಯಕ್ಕಾಗಿ ಸಂಪರ್ಕಿಸಬಹುದೆಂದು ವಿಖಾಯ ತಂಡ ಮನವಿ ಮಾಡಿದೆ.

Related posts

Leave a Reply

Your email address will not be published. Required fields are marked *