Header Ads
Breaking News

ಭಾವನಾತ್ಮಕ ರಸೋತ್ಪತ್ತಿಗಳಿಗೆ ಯಕ್ಷಗಾನದಲ್ಲಿ ಹೆಚ್ಚಿನ ಅವಕಾಶ : ಡಾ. ಹೆಗ್ಗಡೆ

ಉಜಿರೆ, ಜ, ೧೧: ಮನುಷ್ಯ ಸಂಬಂಧದಲ್ಲಿ ಭಾವರಸೋತ್ಪತ್ತಿ ಅತೀ ಮುಖ್ಯವಾದುದು. ನವರಸಗಳನ್ನು ಅಭಿವ್ಯಕ್ತಿ ಮಾಡುವಾಗ ಅದು ಸ್ವಾಭಾವಿಕವಾಗಿ, ಸಂದರ್ಭೋಚಿತವಾಗಿ ಬರಬೇಕು. ಕಲೆಯ ಮಾಧ್ಯಮದಿಂದ ಇಂತಹ ಭಾವನಾತ್ಮಕ ರಸೋತ್ಪತ್ತಿಗಳು ಉತ್ಪತಿಯಾಗುತ್ತವೆ. ಇಂತಹ ರಸೋತ್ಪತ್ತಿಗಳಿಗೆ ಯಕ್ಷಗಾನದಲ್ಲಿ ಹೆಚ್ಚಿನ ಅವಕಾಶವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಯಕ್ಷಗಾನದಲ್ಲಿ ಹಾಸ್ಯವೂ ಒಂದು ಪ್ರಮುಖ ರಸ. ಜನರನ್ನು ನಗಿಸುವುದು ಮಾತ್ರವೇ ಹಾಸ್ಯಗಾರನ ಉದ್ದೇಶವಾಗಿರಬಾರದು. ಪಾತ್ರದ ಹಾಗೂ ವೇದಿಕೆಯ ಗೌರವವನ್ನು ಹೆಚ್ಚಿಸುವುದು ಹಾಸ್ಯಗಾರನಿಗೆ ಮುಖ್ಯವಾಗುತ್ತದೆ ಎಂದು ಶನಿವಾರ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಂಯೋಜನೆಯೊಂದಿಗೆ ಕುರಿಯ ವಿಠಲ ಶಾಸ್ರ್ತಿ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಯಕ್ಷಗಾನ ಹಾಸ್ಯ ಪರಂಪರೆ – ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ’ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಎಂ. ಎ. ಹೆಗಡೆ ಮಾತನಾಡಿ, ಯಕ್ಷಗಾನದಲ್ಲಿ ಹಾಸ್ಯಕ್ಕೆ ಅದರದ್ದೇ ಆದ ಮಹತ್ವ ಸ್ಥಾನವಿದೆ. ಮುಂದಿನ ತಲೆಮಾರಿಗೆ ಹಾಸ್ಯ ಪರಂಪರೆಯ ಸ್ಪಷ್ಟ ಚಿತ್ರಣ ನೀಡಲು ಈ ದಾಖಲೀಕರಣ ಅತ್ಯಗತ್ಯ. ಯಕ್ಷಗಾನದ ಇತಿಹಾಸ ಹಾಗೂ ಅಧ್ಯಯನದ ದೃಷ್ಟಿಯಿಂದ ಕೂಡಾ ಅಗತ್ಯ ಎಂದು ನುಡಿದರು.
ಪ್ರಸ್ತುತ ಕಲಾವಿದರು ಪರಂಪರೆಯನ್ನು ಅಧ್ಯಯನ ಮಾಡಿ ಅದರಿಂದ ಒಳ್ಳೆಯ ಅಂಶಗಳನ್ನು ಸ್ವೀಕರಿಸಬೇಕು. ಈ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ. ಹಾಸ್ಯ ಪ್ರಮುಖ ರಸವಾದರೂ ಅದಕ್ಕೆ ಪ್ರಾತಿನಿಧ್ಯ ದೊರಕಿಲ್ಲ, ಈ ನಿಟ್ಟಿನಲ್ಲಿ ಯಕ್ಷಗಾನ ಹಾಸ್ಯ ಪರಂಪರೆಯ ದಾಖಲೀಕರಣ ಅವಶ್ಯವಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್, ಯಕ್ಷಗಾನದಲ್ಲಿ ಹಾಸ್ಯವು ಒಂದು ಪೋಷಕ ಪಾತ್ರವಾಗಿದೆ. ಅದು ಅಶ್ಲೀಲ, ಅಸಂಬದ್ಧವಾಗಿರದೆ ಸಭ್ಯತೆಯ ಆವರಣದೊಳಗೆ ಇರಬೇಕು. ಹಾಗೆಯೇ ಹಾಸ್ಯ ರಸವು ಯಾವುದೇ ಗುರುಗಳಿಂದ ಬರುವಂತದ್ದಲ್ಲ ಅದು ಕಲಾವಿದನಲ್ಲಿಯೇ ಹುಟ್ಟಿಕೊಂಡಿರಬೇಕು ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನದ ಹಿರಿಯ ಕಲಾವಿದರಾದ ಪೆರುವಡಿ ನಾರಾಯಣ ಭಟ್, ಗೋವಿಂದ ಭಟ್ ಮುಂತಾದವರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ಸುಮಾರು ೩೦ ಯಕ್ಷಗಾನ ಪರಂಪರೆ ಹಾಸ್ಯ ಪಾತ್ರಗಳ ಪ್ರಾತ್ಯಕ್ಷತೆ ನಡೆಲಿದೆ. ಸಿಬಂತಿ ಪದ್ಮನಾಭ ಕೆ ವಿ ನಿರೂಪಿಸಿ, ಉಜಿರೆಯ ಶ್ರೀ.ಧ.ಮಂ ಕಾಲೇಜಿನ ಪ್ರಾಶುಂಪಾಲ ಪ್ರೊ.ಎಸ್ ಸತೀಶ್ಚಂದ್ರ ಸ್ವಾಗತಿಸಿ,ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕಿ ಆರತಿ ಪಟ್ರಮೆ ವಂದಿಸಿದರು.

Related posts

Leave a Reply

Your email address will not be published. Required fields are marked *