Header Ads
Header Ads
Breaking News

ಮಂಗಳೂರಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದು:ಭಾಸ್ಕರ ಮೊಯ್ಲಿ ಹೇಳಿಕೆ

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂನಲ್ಲಿ ಸಾಕಷ್ಟು ನೀರಿನ ಸಂಗ್ರಹಣೆಯಿದ್ದು ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಮನಪಾ ಮಹಾಪೌರ ಭಾಸ್ಕರ ಮೊಲಿ ತಿಳಿಸಿದ್ದಾರೆ.
ಬುಧವಾರ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗಂಗಾಪೂಜೆ ನೇರವೇರಿಸಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರು ರಾಜ್ಯದ ನೀರಿನ ಕೊರತೆಯಿರದ ನಗರವಾಗಿದೆ. ಪ್ರಸ್ತುತ ತುಂಬೆ ಡ್ಯಾಂನಲ್ಲಿ 10.83 ಎಂಸಿಎಂ ನೀರಿನ ಸಂಗ್ರಹಣೆಯಿದ್ದು ಶಂಭೂರಿನಲ್ಲಿರುವ ಎಎಂಆರ್ ಡ್ಯಾಂನಲ್ಲಿ 14.25 ಎಂಸಿಎಂ ನೀರಿನ ಸಂಗ್ರಹವಿದೆ. ಶಂಭೂರು ಡ್ಯಾಂನಲ್ಲಿ ಹೆಚ್ಚು ನೀರು ಸಂಗ್ರಹಿಸಿಡುವಂತೆ ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ, ನೇತ್ರಾವತಿ ನದಿಯಲ್ಲಿ20 ಕ್ಯುಸೆಕ್ಸ್ ನೀರಿನ ಒಳಹರಿವು ಇದ್ದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉದ್ಭವಾಗುವುದಿಲ್ಲ ಎಂದು ಮಾಹಿತಿ ನೀಡಿದರು. ಡ್ಯಾಂನ ತಡಗೋಡೆ ಪುನರ್ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸಿನಂತೆ 8 ಕೋಟಿ ರುಪಾಯಿ ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿದ್ದು ಮನಪಾ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಮಾತನಾಡಿ ಸಮುದ್ರದ ಉಪ್ಪುನೀರನ್ನು ಶುದ್ದೀಕರಣಗೊಳಿಸಿ ಸರಬರಾಜು ಮಾಡುವ ಹಣವನ್ನು ತುಂಬೆ ವೆಂಟೆಡ್ ಡ್ಯಾಂನ ನೀರಿನ ಘಟಕಕ್ಕೆ ವಿನಿಯೋಗಿಸಿದರೆ ನಗರಕ್ಕೆ ಬೇಕಾದ ಶಾಶ್ವತ ನೀರಾವರಿಯನ್ನು ಪಡೆಯಲು ಸಾಧ್ಯವಿದೆ. ಈ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿರುವುದಾಗಿ ಅವರು ತಿಳಿಸಿದರು. ಇಲ್ಲಿರುವ ತಂತ್ರಜ್ಞಾನ, ಮೂಲಸೌಕರ್ಯಗಳನ್ನು ಅಭಿವೃದ್ದಿ ಪಡಿಸಿ, ಹೆಚ್ಚಿನ ಪ್ರದೇಶದಲ್ಲಿ ನೀರು ಸಂಗ್ರಹಣೆ ಮಾಡಿ ಹೆಚ್ಚುವರಿ ಪಂಪುಗಳನ್ನು ಅಳವಡಿಸಿದರೆ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯವಿದೆ ಎಂದರು.ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ತುಂಬೆ ಡ್ಯಾಂನಿಂದ ಮುಳುಗಡೆಯಾಗುವ ಜಮೀನಿನ ಮಾಲಕರಿಗೆ ನೀಡಲು ಒಟ್ಟು17 ಕೋಟಿ ರುಪಾಯಿ ಹಣ ಬಿಡುಗಡೆಯಾಗಿದ್ದು ಮನಪಾ ಶೀಘ್ರ ವಿತರಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು. ಡ್ಯಾಂ ನಿರ್ಮಾಣದಿಂದ ಸ್ಥಳೀಯವಾಗಿ ಅಂತರ್ಜಲಮಟ್ಟ ಹೆಚ್ಚಾಗಿದೆ. ಇನ್ನೂ ಒಂದು ಮೀಟರ್ ಹೆಚ್ಚಿಸಿ ನೀರಿನ ಸಂಗ್ರಹಣೆ ಮಾಡಲು ಅವಕಾಶ ಇದೆ, ಮಂಗಳೂರಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ತುಂಬೆ ಡ್ಯಾಂನಿಂದ ಆಗುತ್ತಿದೆ ಎಂದರು. ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ ಮನಪಾ ಆಯುಕ್ತ ನಝೀರ್, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಹರಿನಾಥ್, ನವೀನ್ ಡಿಸೋಜಾ, ಪ್ರವೀಣ್‌ಚಂದ್ರ ಆಳ್ವ, ಲತಾ ಸಾಲ್ಯಾನ್, ರಾಧಕೃಷ್ಣ, ಅಪ್ಪಿ, ರೂಪಾಬಂಗೇರ ಮೊದಲಾದವರು ಹಾಜರಿದ್ದರು.

Related posts

Leave a Reply