Header Ads
Header Ads
Breaking News

ಮಂಗಳೂರಿನಲ್ಲಿ ಪರ್ಪಲ್ ರನ್-2018 ಮ್ಯಾರಾಥಾನ್

ಅಲ್ಝೈಮರ್ ಅಂದರೆ ಮರೆವುರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರಿನ ಫೋರಂಫಿಝಾ ಮಾಲ್ ವತಿಯಿಂದ ಪರ್ಪಲ್ ರನ್ ಮ್ಯಾರಾಥಾನ್‌ನ್ನು ಆಯೋಜಿಸಲಾಗಿತ್ತು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮ್ಯಾರಾಥಾನ್‌ನಲ್ಲಿ ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡರು. ಮ್ಯಾರಾಥಾನ್ ಹಿನ್ನೆಲೆಯಲ್ಲಿ ಇಡೀ ಮಂಗಳೂರು ನಗರ ಪರ್ಪಲ್‌ಮಯವಾಗಿತ್ತು.

ಅಲ್ಝೈಮರ್ ಅಂದರೆ ಮರೆವುರೋಗ. 55 ವರ್ಷದ ನಂತರದ ಅವಧಿಯಲ್ಲಿ ಬಹಳವಾಗಿ ಕಾಡುವ ಮರೆವು ರೋಗದ ಬಗ್ಗೆ ಜಾಗೃತಿ ಅತ್ಯವಶ್ಯಕ ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದ ಹಲವೆಡೆ ತನ್ನ ಶಾಖೆಗಳನ್ನು ಹೊಂದಿರುವ ಫೋರಂಫಿಝಾ ಮಾಲ್ ಪ್ರತೀವರ್ಷ ಪರ್ಪಲ್ ರನ್ ಎನ್ನುವ ವಿಭಿನ್ನ ಮ್ಯಾರಾಥಾನ್‌ನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಬಾರಿಯ ಪರ್ಪಲ್ ರನ್ ಮ್ಯಾರಾಥಾನ್ ಕೂಡ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಯಿತು.

ಮಂಗಳೂರಿನ ಪಾಂಡೇಶ್ವರದಲ್ಲಿರುವ ಫೋರಂಫಿಝಾ ಮಾಲ್‌ನಿಂದ ಆರಂಭಗೊಂಡ ಮ್ಯಾರಾಥಾನ್‌ಗೆ ಮಂಗಳೂರು ಫೋರಂಫಿಝಾ ಮಾಲ್‌ನ ಸೆಂಟರ್ ಮ್ಯಾನೇಜರ್ ಫಯಾಝ್ ಚಾಲನೆ ನೀಡಿದರು. 21 ಕಿಮೀ, 10 ಕಿಮೀ, 5 ಕಿಮೀ ಮತ್ತು 3 ಕಿಮೀ ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಮ್ಯಾರಾಥಾನ್ ನಡೆಯಿತು. ಮಂಗಳೂರಿನ ಫೋರಂಮಾಲ್‌ನಿಂದ ಹೊರಟು ಎಬಿ ಶೆಟ್ಟಿ ವೃತ್ತ, ಹಂಪನಕಟ್ಟೆ, ಪಿವಿಎಸ್ ಸರ್ಕಲ್, ಬಂಟ್ಸ್‌ಹಾಸ್ಟೆಲ್, ಕದ್ರಿ ಶಿವಭಾಗ್, ಆಗ್ನೆಸ್, ಕಂಕನಾಡಿ ಫಳ್ನೀರ್, ವೆನ್ಲಾಕ್ ಮೂಲಕ ಸಾಗಿ ಮತ್ತೆ ಫೋರಂಫಿಝಾ ಮಾಲ್ ಮುಂಭಾಗದಲ್ಲಿ ಮ್ಯಾರಾಥಾನ್ ಸಂಪನ್ನಗೊಂಡಿತು. ಸುಮಾರು 3000ಕ್ಕೂ ಮಿಕ್ಕಿ ಜನರು ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡರು.

ಬಳಿಕ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯ ವಸತಿ ಸಚಿವ ಯು.ಟಿ. ಖಾದರ್, ಉದ್ಯಮಿ, ಫಿಝಾ ಗ್ರೂಪ್ ಮಾಲಕ ಬಿ.ಎಂ. ಫಾರೂಕ್, ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಎಂಆರ್. ಪೂವಮ್ಮ ಸಹಿತ ಗಣ್ಯರು ಮ್ಯಾರಾಥಾನ್ ವಿಜೇತರಿಗೆ ಪ್ರಶಸ್ತಿಗಳನ್ನು, ಪದಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಆರ್. ಪೂವಮ್ಮ, ನೀವು ಯಾವುದರಿಂದ ಹೆಚ್ಚು ಸಂತೋಷ ಪಡೆಯುತ್ತೀರಿ ಎನ್ನುವುದನ್ನು ಕಂಡುಕೊಳ್ಳಿ. ಅದರತ್ತ ಗಮನವಿಟ್ಟು ಸಾಧನೆ ಮಾಡಿ ಎಂದು ಕರೆ ನೀಡಿದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ ಖಾದರ್, ಅಲ್ಝೈಮರ್ ಎನ್ನುವ ಕಾಯಿಲೆ ಯಾವಾಗ ಯಾರಿಗೆ ಬೇಕಾದರೂ ಬರಬಹುದು. ಆದರೆ ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿ. ಉತ್ತಮ ಆಹಾರ ಕ್ರಮ, ದೈನಂದಿನ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯವನ್ನು ಎಲ್ಲರೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ವೇಳೆ ಮಾತನಾಡಿದ ಉದ್ಯಮಿ ಫಿಝಾ ಗ್ರೂಪ್ ಮಾಲಕ ಬಿ.ಎಂ. ಫಾರೂಕ್, ಅಲ್ಝೈಮರ್ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಭಾರತದಲ್ಲಿ ೪ ಮಿಲಿಯನ್‌ಗಿಂತಲೂ ಅಧಿಕ ಮಂದಿ ಈ ಖಾಯಿಲೆಯಿಂದ ಬಳಲುತ್ತಿದ್ದಾರೆ. ವಿಶ್ವಾದ್ಯಂತ 50 ಮಿಲಿಯನ್‌ಗಿಂತಲೂ ಅಧಿಕ ಮಂದಿ ಅಲ್ಝೈಮರ್‌ಗೆ ತುತ್ತಾಗಿದ್ದಾರೆ. ಉತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸಿದ ಫೋರಂ ಮಾಲ್‌ನ ಟೀಂಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಇದೇ ವೇಳೆಗೆ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡ ಮಂಗಳೂರು ಫೋರಂಫಿಝಾ ಮಾಲ್‌ನ ಸೆಂಟರ್ ಮ್ಯಾನೇಜರ್ ಫಯಾಝ್, ಅಲ್ಝೈಮರ್‍ಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಫೋರಂಫಿಝಾ ಮಾಲ್ ಹಮ್ಮಿಕೊಂಡ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದ್ದಾರೆ. ಇದಕ್ಕಾಗಿ ಮಂಗಳೂರು ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾರಂಭದಲ್ಲಿ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್‌ನ ಮುಖ್ಯಸ್ಥೆ ಪದ್ಮಾ ಶೇಟ್, ಆರ್‌ಜೆ ರಶ್ಮಿ, ಮಾರ್ಕೆಟಿಂಗ್ ಮ್ಯಾನೇಜರ್ ಸುನಿಲ್ ಕೆ.ಎಸ್., ಕನ್ಸಲ್ಟೆಂಟ್ ವೇಣು ಶರ್ಮ ಮತ್ತಿತರರು ಉಪಸ್ಥಿತರಿದ್ದರು.


ಮಂಗಳೂರು, ಬೆಂಗಳೂರು, ಮೈಸೂರು, ಉದಯಪುರ್, ಹೈದರಾಬಾದ್, ಚೈನ್ನೈ ಸೇರಿ 6 ನಗರಗಳಲ್ಲಿನ ಫೋರಂ ಮಾಲ್ಗಳು ಏಕಕಾಲದಲ್ಲಿ ಈ ಮಾರಥಾನ್ ನಡೆಸಲಾಯಿತು. ಫೋರಂ ಮಾಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ಪೂರ್ವಿಕಾ ಮೊಬೈಲ್ಸ್, ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಆಯಂಡ್ ಡೈಮಂಡ್ಸ್, ಸಂಗೀತಾ ಮೊಬೈಲ್ಸ್ ಹಾಗೂ ಎಂಎಸ್ ಸ್ಪೋಟ್ಸ್ವೇರ್ ಸಂಸ್ಥೆಗಳು ಸಹಭಾಗಿತ್ವ ನೀಡಿದ್ದವು. ಇದೇ ವೇಳೆ ಪ್ರಶಸ್ತಿ ವಿತರಣೆಗೂ ಮುನ್ನ ನಡೆದ ಝುಂಬಾ ನೃತ್ಯದಲ್ಲಿ ಯುವಜನತೆ ಸಂಭ್ರಮದಿಂದ ಪಾಲ್ಗೊಂಡು ಕುಣಿದರು.

 

Related posts

Leave a Reply