Breaking News

ಮಂಗಳೂರಿನಿಂದ ಬೆಂಗಳೂರಿಗೆ ಹಣ ರವಾನೆ, ಏಳೂವರೆ ಕೋಟಿ ರೂಪಾಯಿ ಲಪಟಾಯಿಸಿದ ಸಿಬ್ಬಂದಿ


ಆಕ್ಸಿಸ್ ಬ್ಯಾಂಕ್‌ನ ನಗರದ ಶಾಖೆಯಿಂದ ಬೆಂಗಳೂರಿನ ಶಾಖೆಗೆ ಬೃಹತ್ ಪ್ರಮಾಣದ ನಗದು ಸಾಗಿಸುತ್ತಿದ್ದ ಹೊರಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಸುಮಾರು ೭.೫ ಕೋಟಿ ರೂಪಾಯಿಗಳೊಂದಿಗೆ ಪರಾರಿಯಾದ ಬಗ್ಗೆ ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಹಣದೊಂದಿಗೆ ಪರಾರಿಯಾದ ವ್ಯಕ್ತಿಗ ಳನ್ನು ಸಿಸ್‌ಕೋ ಪ್ರೊಸೇಗರ್ ಹೋಲ್ಡಿಂಗ್ ಸಂಸ್ಥೆಯ ಸಿಬ್ಬಂದಿ ಕರಿಬಸವ ಡ್ರೈವರ್, ಪರಶುರಾಮ ಕಸ್ಟೋಡಿಯನ್, ಪೂವಣ್ಣ ಗನ್ ಮ್ಯಾನ್ ಮತ್ತು ಬಸಪ್ಪ ಗನ್ ಮ್ಯಾನ್ ಎಂದು ಗುರುತಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ನ ಶಾಖೆಗಳಿಂದ ಹಣ ವಿಲೇವಾರಿ ಮಾಡುವ ಹೊರ ಗುತ್ತಿಗೆಯನ್ನು ಸಿಸ್‌ಕೋ ಪ್ರೊಸೇಗರ್ ಹೋಲ್ಡಿಂಗ್ ಎಂಬ ಸಂಸ್ಥೆ ಪಡೆದಿದ್ದು ಕಳೆದ ಮೇ. ೧೧ರಂದು ನಗರದ ಯೆಯ್ಯಾಡಿ ಬಳಿಯಿರುವ ಬ್ಯಾಂಕಿನ ಶಾಖೆಗೆ ತಮ್ಮ ಸಂಸ್ಥೆಯ ಬೊಲೆರೋ ವಾಹನದಲ್ಲಿ ಇದೀಗ ಹಣದೊಂದಿಗೆ ಪರಾರಿಯಾಗಿರುವ ಸಿಬ್ಬಂದಿ ಬಂದಿದ್ದರು. ಬ್ಯಾಂಕಿನ ಪ್ರಬಂಧಕರ ಆದೇಶದ ಮೇರೆಗೆ ಸುಮಾರು ೭.೫ ಕೋಟಿ ರೂ. ಹಣವನ್ನು ಬೆಂಗಳೂರಿನ ಕೋರಮಂಗಲದ ಶಾಖೆಗೆ ವರ್ಗಾಯಿಸಲು ತಿಳಿಸಲಾಗಿತ್ತು. ಬೆಂಗಳೂರಿಗೆ ಹೊರಟ ಸಿಬ್ಬಂದಿಯನ್ನೊಳಗೊಂಡ ವಾಹನ ಏಕಾ‌ಏಕಿ ನಾಪತ್ತೆಯಾಗಿತ್ತು. ಎಲ್ಲರ ಮೊಬೈಲ್ ಫೋನ್‌ಗಳು ಕೂಡಾ ಸ್ವಿಚ್ಡ್ ಆಫ್ ಆಗಿದೆ. ಈ ಬಗ್ಗೆ ಕೊಂಚಾಡಿಯಲ್ಲಿರುವ ಸಿಸ್ಕೋ ಸಂಸ್ಥೆಯ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಚಿನ್ ಎಂಬವರು ಕಂಕನಾಡಿ ಪೊಲೀಸರಿಗೆ ದೂರು ನೀಡಿದ್ದು ಈ ವಿಚಾರ ಬೆಳಕಿಗೆ ಬಂದಿದೆ.


ಈ ಕೃತ್ಯಕ್ಕೆ ಬಳಸಲಾದ ವಾಹನವನ್ನು ಈಗಾಗಲೇ ಪತ್ತೆಹಚ್ಚಲಾಗಿದ್ದು ಹುಣಸೂರಿನ ಅರಸುಕಳ ಎಂಬ ಸ್ಥಳದಲ್ಲಿ ಕೇವಲ ಖಾಲಿ ವಾಹನ ಮಾತ್ರ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಸಂಸ್ಥೆಯ ಮತ್ತೋರ್ವ ಸಿಬ್ಬಂದಿ ಭೀಮಯ್ಯ ಎಂಬಾತನ ಕೈವಾಡವಿರುವ ಬಗ್ಗೆ ಶಂಕಿಸಲಾಗಿದ್ದು ಈತನೂ ತಲೆಮೆರೆಸಿಕೊಂಡಿರುವ ಬಗ್ಗೆ ತಿಳಿದುಬಂದಿದೆ. ಈ ನಡುವೆ ಭೀಮಯ್ಯ ಮತ್ತೋರ್ವ ಆರೋಪಿ ಪೂವಣ್ಣ ಎಂಬವರ ಸೋದರ. ಇವರಿಬ್ಬರೂ ಮತ್ತೋರ್ವ ಆರೋಪಿ ಬಸಪ್ಪ ಎಂಬವರ ತೀರಾ ಹತ್ತಿರದ ಸಂಬಂಧಿ ಎಂದು ಹೇಳಲಾಗಿದೆ.

Related posts

Leave a Reply