Breaking News

ಮಂಗಳೂರು ಜೈಲ್‌ನಲ್ಲೂ ಇದೆ ಐಶಾರಾಮಿ ಸವಲತ್ತು, ವೈರಲ್ ಆಗುತ್ತಿರುವ ಪೊಟೋಗಳು

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್‌ನಲ್ಲಿ ಆಯ್ದ ಖೈದಿಗಳಿಗೆ ವಿಶೇಷ ಸೌಲಭ್ಯ ಒದಗಿಸುತ್ತಿರುವ ವಿಷಯ ಚರ್ಚೆಗೆ ಬಂದ ಹಿಂದೆಯೇ ರಾಜ್ಯಾದ್ಯಂತ ಜೈಲ್‌ಗಳ ಅವಲೋಕನ ನಡೆಯುತ್ತಿದೆ. ಮಂಗಳೂರು ಜೈಲ್ ಕೂಡ ಪರಪ್ಪನ ಅಗ್ರಹಾರದ ಜೈಲ್‌ಗಿಂತ ಭಿನ್ನ ಅಲ್ಲ ಎಂದು ತೋರಿಸುವ ಚಿತ್ರಗಳು ಈಗ ವೈರಲ್ ಆಗುತ್ತಿವೆ.
ಕಳೆದ ರಮಝಾನ್ ಸಮಯದಲ್ಲಿ ಖೈದಿಗಳು ಜೈಲ್‌ನಲ್ಲಿ ಪಾರ್ಟಿ ಮಾಡಿ ತಿನ್ನುತ್ತಿರುವುದು ಮತ್ತು ಜೈಲ್‌ನೊಳಗೆ ಖೈದಿಗಳ ಬಂಧು ಮಿತ್ರರು ಆಹಾರ ಪೊಟ್ಟಣ ಒಯ್ಯುತ್ತಿರುವುದು ಕಳೆದೆರಡು ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಓಡಾಡುತ್ತಿವೆ. ಕಾಲಿಯಾ ರಫೀಕ್ ಕೊಲೆ ಪ್ರಕರಣ ಆರೋಪಿಗಳು ಸೇರಿದಂತೆ ಐದಾರು ಮಂದಿ ಪಾರ್ಟಿಯಲ್ಲಿದ್ದಾರೆ. ಪಾರ್ಟಿ ಮಾಡುತ್ತಿರುವ ಚಿತ್ರವನ್ನೂ ಖೈದಿಗಳೇ ಮೊಬೈಲ್ ಮೂಲಕ ತೆಗೆದು ಹೊರಗಿರುವ ತಮ್ಮವರಿಗೆ ವಾಟ್ಸ್ ಆಪ್ ಮೂಲಕ ರವಾನಿಸಿದ್ದಾರೆ. ಅದೀಗ ವೈರಲ್ ಆಗುತ್ತಿದೆ. ಇದರ ಹಿಂದೆಯೇ ಬರ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ರಾಮಕೃಷ್ಣ ನೇತ್ರತ್ವದ ತಂಡ ನಿನ್ನೆ ಜೈಲ್‌ನಲ್ಲಿ ಪರಿಶೀಲನೆ ನಡೆಸಿದೆ. ಆದರೆ ಅವರಿಗೇನೂ ದಕ್ಕಿಲ್ಲ.
ಜೈಲ್‌ನಲ್ಲಿ ಹೊರಗಿನಿಂದ ಆಹಾರ ಪದಾರ್ಥ ಸರಬರಾಜು ಮಾಡುವಂತಿಲ್ಲ. ಒಂದು ವೇಳೆ ಪೂರೈಕೆ ಮಾಡಬೇಕಿದ್ದರೆ ನ್ಯಾಯಾಧೀಶರ ಅನುಮತಿ ಪಡೆಯಬೇಕು ವೈದ್ಯರಿಂದ ಪರೀಕ್ಷಿಸಲ್ಪಟ್ಟಿರಬೇಕು. ಆದರೆ ಈ ಯಾವ ನಿಯಮವೂ ಪಾಲಿಸದೆ ಮಂಗಳೂರು ಜೈಲ್‌ನಲ್ಲಿ ಆಹಾರ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಕನಿಷ್ಟ ಸ್ಕ್ಯಾನ್ ಮಾಡಿ ಕೂಡ ನೋಡಲಾಗುತ್ತಿಲ್ಲ. ಇದರಿಂದಾಗಿ ಆಹಾರ ಪೊಟ್ಟಣದ ಜೊತೆಯಲ್ಲಿ ಗಾಂಜಾ, ಮೊಬೈಲ್, ಮಾರಕಾಯುಧಗಳು ಸರಬರಾಜು ಆಗುತ್ತಿವೆ. ಇಂತಹ ನಿರ್ಲಕ್ಷ್ಯದ ಕಾರಣದಿಂದಾಗಿ ಜೈಲ್‌ನಲ್ಲಿ ಕೊಲೆ ಘಟನೆಗಳು ಸಂಭವಿಸಿವೆ, ಪೊಲೀಸರ ಮೇಲೇಯೇ ದಾಳಿ ನಡೆಸಿದ್ದೂ ಕೂಡ ನಮ್ಮೆದುರಿಗೆ ಇರುವ ಸತ್ಯವಾಗಿದೆ.
ಮಂಗಳೂರು ಜೈಲ್‌ನಲ್ಲಿ ಪಾತಕಿಗಳು, ಪಾತಕಿಗಳ ಸಹಚರರು ಇದ್ದಾರೆ. ಇಂತಹ ಪರಸ್ಪರ ವಿರೋಧಿ ಬಣದವರು ಕತ್ತಿ ಮಸೆಯುತ್ತಲೇ ಇರುತ್ತಾರೆ. ಇಂತಹ ಸ್ಥಿತಿಯಲ್ಲಿ ಆಹಾರ ಪೊಟ್ಟಣ ಮತ್ತಿತರ ಸೊತ್ತುಗಳು ಸರಬರಾಜು ಆಗುತ್ತಿವೆ ಎನ್ನುವುದು ಅಪಾಯಕಾರಿ ವಿಷಯವಾಗಿದೆ. ಮಂಗಳೂರು ಜೈಲ್‌ನಲ್ಲಿ ೪೧೨ ಖೈದಿಗಳಿದ್ದಾರೆ. ಇವರ ಉಸ್ತುವಾರಿಗೆ ಕನಿಷ್ಠವೆಂದರೂ ೭೦ ಸಿಬ್ಬಂದಿ ಇರಬೇಕು. ಆದರೆ ಈಗ ಇರುವುದು ೨೪ ಮಾತ್ರ, ಇನ್ನೂ ೫೦ ಸಿಬ್ಬಂದಿ ಕೊರತೆ ಇದೆ. ಹಳೆ ಕಟ್ಟಡದಲ್ಲಿ ಖೈದಿಗಳನ್ನಿಡುವುದು ಅಪಾಯಕಾರಿ. ಇಲ್ಲಿ ಡಬಲ್ ಮರ್ಡರ್ ಕೂಡ ನಡೆದಿದೆ ಎಂಬುದನ್ನು ನಿರ್ಲಕ್ಷಿಸಲು ಸಾಧ್ಯವೆ.

Related posts

Leave a Reply