Header Ads
Breaking News

ಕುದ್ರೋಳಿಯಲ್ಲಿ ಮಂಗಳವಾರ ಶಾರದಾ ಮಾತೆಯ ವೈಭವ ಶೋಭಾಯಾತ್ರೆ

“ಮಂಗಳೂರು ದಸರಾ’ ಎಂದೇ ಪ್ರಖ್ಯಾತಿ ಪಡೆದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದ ದಸರಾ ಸಂಭ್ರಮ ಕಳೆಗಟ್ಟಿದೆ. ನಗರವಿಡೀ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು ಮಾತ್ರವಲ್ಲ ಹುಲಿವೇಷಗಳ ಕುಣಿತ ನೋಡುಗೆ ಕಣ್ಮನ ಸೆಳೆಯುತ್ತಿದೆ.

ಹೌದು ಕರ್ನಾಟಕದ ಆಕರ್ಷಕ ಬಂದರು ನಗರಿ ಮಂಗಳೂರು ದಸರಾ ಉತ್ಸವ/ದಸರಾ ಹಬ್ಬ. ಮೈಸೂರು ದಸರಾ ಹಬ್ಬಕ್ಕೆ ಅತ್ಯಂತ ಶ್ರೀಮಂತವಾದ ಐತಿಹಾಸಿಕ ಹಿನ್ನಿಲೆಯಿದ್ದರೆ ಮಂಗಳೂರು ದಸರೆಯು ತನ್ನದೆ ಆದ ಹತ್ತು ದಿನಗಳ ಕಾಲ ವಿಶಿಷ್ಟ ಆಚರಣೆಯಿಂದಾಗಿ ಜನರನ್ನು ಆಕರ್ಷಿಸುತ್ತದೆ. ಅದ್ಭುತ ಮಂಗಳೂರು ದಸರಾ ಉತ್ಸವದಲ್ಲಿ ಕರಾವಳಿಯ ಸೊಬಗು, ಸಂಪ್ರದಾಯ, ಆಚರಣೆಗಳು ಹಾಸು ಹೊಕ್ಕಾಗಿದ್ದುದರಿಂದಲೆ ಇದೊಂದು ಅನನ್ಯ ದಸರಾ ಉತ್ಸವವಾಗಿ ಜನರ ಗಮನ ಸೆಳೆಯುತ್ತಿದೆ.

ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ. ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವರಾತ್ರಿಯ 9ದಿನಗಳಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ ದೇವಿಯ ರನ್ನು ವಿಗ್ರಹ ರೂಪದಲ್ಲಿ ಆರಾಧಿಸಲಾಗುತ್ತದೆ. ಜತೆಗೆ, ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.ಹತ್ತು ದಿನಗಳ ಕಾಲ ಮಂಗಳೂರಿನ ಹಾದಿ ಬೀದಿಗಳು ಮದುವಣಗಿತ್ತಿಯಂತೆ ಸಿಂಗರಿಸಿಕೊಳ್ಳುತ್ತವೆ. ಈ ಉತ್ಸವದ ಅತಿ ಪ್ರಮುಖ ವಿಶೇಷತೆಯೆಂದರೆ ಹುಲಿ ವೇಷ/ಹುಲಿ ಕುಣಿತ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುತ್ತಿರುವ “ಮಂಗಳೂರು ದಸರಾ’ ರವಿವಾರ ಉದ್ಘಾಟನೆಗೊಂಡಿತು. ವೈಭವದ ದಸರಾ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ಆರಂಭವಾಗಲಿದೆ.

ದಸರಾ ಮಹೋತ್ಸವವನ್ನು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಉದ್ಘಾಟಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಶ್ರೀದೇವರು ಎಲ್ಲರಿಗೂ ಸನ್ಮಂಗಲವನ್ನು ಉಂಟುಮಾಡಲಿ ಎಂದು ಅವರು ಪ್ರಾರ್ಥಿಸಿದರು.

ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅತ್ಯಂತ ಯೋಜನಾ ಬದ್ಧವಾದ, ಮುಂದಿನ ಜನಾಂಗಕ್ಕೆ ದಾರಿ ಹಾಗೂ ಬೆಳಕಾಗಬಲ್ಲ ಮತ್ತು ಭಾವುಕನೊಬ್ಬ ಪ್ರೀತಿ ಹೆಮ್ಮೆಯಿಂದ ಆರಾಧನೆ ಮಾಡಬಹುದಾದ ಶ್ರೇಷ್ಠ ದೇವಾಲಯವೇ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಎಂದು ಶ್ಲಾಘಿಸಿದರು.

“ಮಂಗಳೂರು ದಸರಾ’ ಮೆರವಣಿಗೆ ಅ. 8ರಂದು ಸಂಜೆ 4ಕ್ಕೆ ಶ್ರೀ ಕ್ಷೇತ್ರ ಕುದ್ರೋಳಿಯಿಂದ ಆರಂಭವಾಗಲಿದೆ. ಈ ಬಾರಿಯ ವಿಶೇಷವೆಂಬಂತೆ ನವದುರ್ಗೆಯರ ಸಹಿತ ಶಾರದಾ ಮಾತೆಯ ಶೋಭಾಯಾತ್ರೆ ಮೊದಲು ಸಾಗಲಿದ್ದು, ವಿವಿಧ ಸ್ತಬ್ಧಚಿತ್ರಗಳು ಹಿಂಬಾಲಿಸಲಿವೆ.

೭೫ಕ್ಕೂ ಅಧಿಕ ಅತ್ಯಾಕರ್ಷಕ ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ವೇಷಭೂಷಣಗಳು, ವಾದ್ಯಮೇಳ ತಂಡಗಳು ಭಾಗವಹಿಸಲಿವೆ. ಕುದ್ರೋಳಿಯಿಂದ ಹೊರಡುವ ಮೆರವಣಿಗೆ ಕಂಬ್ತಾ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿ.ವಿ.ಎಸ್. ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್ ಅಳಕೆ ಮೂಲಕ ಮರಳಿ ಬರಲಿದೆ. ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಎಲ್ಲಿ ನೋಡಿದರಲ್ಲಿ ಜಗಮಗಿಸುವ ಪ್ರಕಾಶ, ನೆರೆದ ಜನಸ್ತೋಮ, ಹರ್ಷೋದ್ಗಾರ, ಸಂಭ್ರಮ, ಆನಂದ ಮುಗಿಲು ಮುಟ್ಟಿದಂತಿರುತ್ತದೆ. ಅಂತಹ ಆಕರ್ಷಣೆ ಮಂಗಳೂರು ದಸರಾ ಹಬ್ಬಕ್ಕೂ ಸಹ ಇರುವುದು ವಿಶೇಷ.

Related posts

Leave a Reply

Your email address will not be published. Required fields are marked *