Header Ads
Header Ads
Breaking News

ಮಂಗಳೂರು ನದಿ ಉತ್ಸವಕ್ಕೆ ಅದ್ದೂರಿ ಚಾಲನೆ

ಕರಾವಳಿಯ ಕಡಲ ತೀರದ ಮುಖೇನ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಫಿಂಗ್, ಬೀಚ್, ಆಂಗ್ಲಿಂಗ್ ಫೆಸ್ಟಿವಲ್ ಆಯೋಜಿಸುತ್ತ ಬಂದ ಕಡಲ ತಡಿಯಲ್ಲಿ ಇದೀಗ ರಿವರ್ ಫೆಸ್ಟಿವಲ್ ಸಡಗರ. ಫಲ್ಗುಣಿ ನದಿ ತೀರದಲ್ಲಿ ಎರಡು ದಿನಗಳ ಕಾಲ ನಡೆಯುವ ನದಿ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿತು.

ಕೇರಳದಲ್ಲಿ ಹಿನ್ನೀರು ಸಹಿತ ನದಿ, ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಬಳಸು ತ್ತಿರುವ ಶೈಲಿಯನ್ನೇ ಬಳಕೆ ಮಾಡುವ ಮಹಾನ್ ಕಲ್ಪನೆಯೊಂದಿಗೆ ಮಂಗಳೂರು ವ್ಯಾಪ್ತಿಯಲ್ಲಿ ಸ್ವಚ್ಛಂದವಾಗಿ ಹರಡಿರುವ ಫಲ್ಗುಣಿ ನದಿಯನ್ನೇ ಬಳಸಿಕೊಂಡು ಇದೇ ಮೊದಲ ಬಾರಿಗೆ ಎರಡು ದಿನಗಳ ನದಿ ಉತ್ಸವ ಆಯೋಜಿಸಿದೆ. ಆ ಮೂಲಕ ಕರಾವಳಿಯ ನದಿಗಳ ಮೂಲಕವೇ ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆಯಲು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಮುಂದಾಳತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಕೂಳೂರು-ಬಂಗ್ರಕೂಳೂರು – ಸುಲ್ತಾನ್‌ಬತ್ತೇರಿ ವ್ಯಾಪ್ತಿಯ ಸರಿ ಸುಮಾರು ೨೦ರಿಂದ ೨೩ ಕಿ.ಮೀ. ವ್ಯಾಪ್ತಿ ಯಲ್ಲಿ ನದಿ ಉತ್ಸವವು ಇಂದು ಮತ್ತು ನಾಳೆ ದಿನಪೂರ್ತಿ ನಡೆಯಲಿದೆ.

ನದಿ ಉತ್ಸವದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಡಳಿತ, ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಮೀನುಗಾರ ಸಮುದಾಯದ ನೆರವಿ ನೊಂದಿಗೆ ವಿವಿಧ ಸಮಾಜಮುಖೀ ಸಂಘಟನೆಯ ಪ್ರಮುಖರ ಸಹಕಾರ ದೊಂದಿಗೆ ನಡೆಯುತ್ತಿದೆ. ಪ್ರವಾಸಿಗರ ಮನ ಸೆಳೆಯುವ ನೆಲೆಯಲ್ಲಿ ಫಲ್ಗುಣಿಯ ತಟವು ಇದೀಗ ಕೈಬೀಸಿ ಕರೆಯುತ್ತಿದೆ.

ನದಿ ಉತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿದ್ದು. ಜಿಲ್ಲಾ ಉಸ್ತುವಾರಿ ಸಚಿವ  ಯು.ಟಿ. ಖಾದರ್ ಅವರು ಚಾಲನೆ ನೀಡಿದರು. ಇದೇ ವೇಳೆ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಡಿಸಿ ಕುಮಾರ್, ಮಂಗಳೂರು ಮೇಯರ್ ಭಾಸ್ಕರ್ ಮೊಯಲಿ, ಪೊಲೀಸ್ ಆಯುಕ್ತರಾದ ಟಿ.ಆರ್ ಸಹಿತ ಇತರ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉದ್ಘಾಟನೆ ಬಳಿಕ ಸುಮಾರು ೨ ಕಿ.ಮೀ. ಫಲ್ಗುಣಿ ನದಿಯಲ್ಲಿ ಬೋಟ್‌ನಲ್ಲಿ ಆಗಮಿಸುವ ಅತಿಥಿಗಳು ಬಂಗ್ರಕೂಳೂರುವಿನಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ದೋಣಿಯಲ್ಲಿ ಸಂಗೀತದೊಂದಿಗೆ ಬಂಗ್ರ ಕೂಳೂರು ಜಟ್ಟಿವರೆಗೆ ಆಗಮಿಸಿ ಅಲ್ಲಿ ಪಂಚವಾದ್ಯ ನಗಾರಿ, ವಾದ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

 

ನದಿಯ ಮುಖೇನ ನಡೆಸುವ ಎಲ್ಲ ಪ್ರವಾಸೋದ್ಯಮ ಚಟುವಟಿಕೆಯನ್ನು ಈ ಬಾರಿಯ ನದಿ ಉತ್ಸವದಲ್ಲಿ ಕೈಗೊಳ್ಳಲಾಗಿದೆ. ಮುಖ್ಯವಾಗಿ ರೋಯಿಂಗ್, ಕಯಾಕ್, ಸ್ಟಾಂಡ್ ಅಪ್ ಪೆಡಲಿಂಗ್, ವಿಂಡ್ ಸರ್ಫಿಂಗ್, ಜೆಟ್ಸೆಕೀ, ಸ್ಪೀಡ್ ಬೋಟ್ ಒಳಗೊಂಡ ವಿವಿಧ ಜಲಕ್ರೀಡೆ ನಡೆಯಲಿದೆ. ಸಾಹಸ ಮಯ ಕ್ರೀಡೆ ವೀಕ್ಷಣೆಗೆ ಮತ್ತು ಅದರಲ್ಲಿ ಸ್ವತಃ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ನದಿಯಲ್ಲೇ ತೇಲುವ ಆಹಾರ ಮಳಿಗೆಗಳು, ವಿಭಿನ್ನ ಸ್ಥಳೀಯ ಆಹಾರೋತ್ಪನ್ನಗಳ ಫ್ಲೀ ಮಾರ್ಕೆಟ್ ಲಭ್ಯವಿರಲಿವೆ. ಬೋಟುಗಳ ಮುಖೇನವೇ ನದಿಯಲ್ಲಿ ಎಲ್ಲ ಸಂಭ್ರಮಕ್ಕೂ ಅವಕಾಶ ಕಲ್ಪಿಸಲಾಗಿದೆ.

ಬಂಗ್ರ ಕೂಳೂರು ಬಳಿ ನಾಲ್ಕು ದೋಣಿಗಳನ್ನು ಲಂಗರು ಹಾಕಿ ಅದರ ಮೇಲೆ ವಿಶಾಲವಾದ ಹಲಗೆಯನ್ನು ಹಾಸಿ ಜಟ್ಟಿ ನಿರ್ಮಿಸಲಾಗಿದೆ. ನದಿ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸುಲ್ತಾನ್ ಬತ್ತೇರಿ ಮತ್ತು ಕೂಳೂರು ಸೇತುವೆ ಬಳಿಯ ಜಟ್ಟಿಯ ಮೂಲಕ ದೋಣಿಗೆ ಹತ್ತಿಸಿ ಬಂಗ್ರ ಕೂಳೂರು ಜಟ್ಟಿಗೆ ತಲುಪಿಸಲಾಗುತ್ತದೆ. ಬಂಗ್ರ ಕೂಳೂರಿನ ಜಟ್ಟಿ ಮೇಲಿನ ವಿಶಾಲವಾದ ಪ್ರದೇಶದಲ್ಲಿ ವಿವಿಧ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ.ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ದ.ಕ. ಜಿಲ್ಲೆಯಲ್ಲಿ ಆಯೋಜಿಸಲಾ ಗುತ್ತಿದೆ. ಕೇರಳದಲ್ಲಿ ನದಿ ಮತ್ತು ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ನಮ್ಮಲ್ಲೂ ನದಿಗಳಲ್ಲಿ ಉತ್ಸವ ಆಚರಿಸುವ ಮೂಲಕ ಪ್ರವಾಸೋದ್ಯಮಕ್ಕೆ ತೆರೆದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಮುಂದೆ ನೇತ್ರಾವತಿಯಲ್ಲಿಯೂ ನದಿ ಉತ್ಸವ ಆಚರಣೆಯ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.

ಕೂಳೂರುವಿನಿಂದ ಬಂಗ್ರಕೂಳೂರು ವರೆಗೆ ಸುಮಾರು ಎರಡೂವರೆ ಕಿ.ಮೀ. ನದಿ ಬದಿಯಲ್ಲಿ ನಡೆದು ಕೊಂಡು ಹೋಗಿ ಸೌಂದರ್ಯ ಆಸ್ವಾದಿಸಲೂ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನದಿ ಬದಿಯನ್ನು ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

 

Related posts

Leave a Reply