Breaking News

ಮಂಗಳೂರು ಪಾಲಿಕೆ ತಿಂಗಳ ಸಾಮಾನ್ಯ ಸಭೆ,  ಮಳವೂರು ನೀರು ಕಲ್ಮಶ ಪರಿಶೀಲನೆಗೆ ಸಮಿತಿ


ಮಳವೂರು ಅಣೆಕಟ್ಟೆಯ ಬಳಿ ಫಲ್ಗುಣಿ ನದಿಯ ನೀರು ಕಲುಷಿತವಾಗಿರುವುದು ಮತ್ತು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಜಲ ಚರಗಳು ಸಾವಿಗೀಡಾಗಿರುವ ಕುರಿತು ಪರಿಶೀಲನೆ ನಡೆಸಲು ಸದನ ಸಮಿತಿ ರಚಿಸುವ ನಿರ್ಣಯವನ್ನು ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತಿನ ತಿಂಗಳ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ಈ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್ನ ದೀಪಕ್ ಪೂಜಾರಿ, ಮಹಾಬಲ ಮಾರ್ಲ, ಸಿಪಿ‌ಎಂನ ದಯಾನಂದ ಶೆಟ್ಟಿ, ಬಿಜೆಪಿಯ ಸುಧೀರ್ ಶೆಟ್ಟಿ ಕಣ್ಣೂರು, ಕೆಲವು ಕೈಗಾರಿಕೆಗಳು ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ನದಿಗೆ ಹರಿಸುತ್ತಿರುವುದೇ ಘಟನೆಗೆ ಕಾರಣ. ಕೈಗಾರಿಕಾ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಹರಿಸುತ್ತಿರುವ ಉದ್ದಿಮೆಗಳನ್ನು ಗುರುತಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಚರ್ಚೆಯ ಬಳಿಕ ಉತ್ತರ ನೀಡಿದ ಮೇಯರ್, ಸದನ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ನದಿ ನೀರು ಮಲಿನವಾಗಿರುವುಕ್ಕೆ ಕಾರಣವಾಗಿರುವ ಅಂಶಗಳ ಕುರಿತು ಪರಿಶೀಲನೆ ನಡೆಸಲಿದೆ. ಮಾಲಿನ್ಯಕ್ಕೆ ನಿಖರ ಕಾರಣ ಏನು ಎಂಬುದನ್ನು ಪತ್ತೆ ಮಾಡಲಿದೆ. ಸಮಿತಿಯ ವರದಿಯನ್ನು ಆಧರಿಸಿ, ಮಾಲಿನ್ಯಕ್ಕೆ ಕಾರಣವಾಗಿರುವವರ ವಿರುದ್ಧ ಕ್ರಮ ಜರುಗಿಸುವ ನಿರ್ಧಾರವನ್ನು ಪರಿಷತ್ತು ಕೈಗೊಳ್ಳುತ್ತದೆ ಎಂಬ ನಿರ್ಣಯವನ್ನು ಮಂಡಿಸಿದರು. ಅದಕ್ಕೆ ಪರಿಷತ್ತು ಸರ್ವಾನುಮತದ ಒಪ್ಪಿಗೆ ನೀಡಿತು.
ಸುರತ್ಕಲ್ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆಯಲ್ಲಿ ದ್ರವ ತ್ಯಾಜ್ಯ ಸಂಸ್ಕರಣಾ ಘಟಕಗಳ ಬಾವಿಗಳಲ್ಲಿ ಅಳವಡಿಸಿರುವ ಐದು ಪಂಪ್ಗಳು ಕೆಟ್ಟು ಹೋಗಿರುವ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಗಣೇಶ್ ಹೊಸಬೆಟ್ಟು, ಪಂಪ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಪ್ಯಾನೆಲ್ಗಳು ಶೋಚನೀಯ ಸ್ಥಿತಿಯಲ್ಲಿವೆ. ಗುತ್ತಿಗೆದಾ ರರು ಕಳಪೆ ಕಾಮಗಾರಿ ಮಾಡಿರುವುದೇ ಇದಕ್ಕೆ ಕಾರಣ ಎಂದರು. ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ನಗರದ ಒಳಚರಂಡಿ ವ್ಯವಸ್ಥೆ ಕಾಮಗಾರಿಗಾಗಿ ಎಡಿಬಿ ಯೋಜನೆಯಡಿ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಈಗ ಕೊಳಚೆ ನೀರು ಬಸಿದು, ತಗ್ಗು ಪ್ರದೇಶಗಳಲ್ಲಿನ ಬಾವಿ ನೀರಿಗೆ ಸೇರುತ್ತಿದೆ. ಇದರಿಂದ ನಗರದ ಜಲಮೂಲಗಳು ಮಲಿನವಾಗುತ್ತಿವೆ. ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದರು.
ಲೋಕಾಯುಕ್ತ ತನಿಖೆಗೆ ಆದೇಶಿಸು ವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ಕಾಂಗ್ರೆಸ್ ಸದಸ್ಯರು ಅದನ್ನು ವಿರೋಧಿಸಿ ದರು. ಇದರಿಂದ ಕೆಲಕಾಲ ಸಭೆಯಲ್ಲಿ ವಾಕ್ಸಮರ ನಡೆಯಿತು.
ನಗರದ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಹೊಂದಿರದ ಬಹು ಮಹಡಿ ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರ ವಿತರಣೆ ಮಾಡಬಾರದು. ನಗರದ ಕೆಲವು ಕಡೆಗಳಲ್ಲಿ ಬಹು ಮಹಡಿ ಕಟ್ಟಡಗಳು, ಹೋಟೆಲ್ಗಳು ಮತ್ತು ಶಿಕ್ಷಣ ಸಂಸ್ಥೆಗಳು ತ್ಯಾಜ್ಯ ನೀರನ್ನು ನೇರವಾಗಿ ಚರಂಡಿಗಳಿಗೆ ಹರಿಸುತ್ತಿವೆ ಎಂದು ದೂರಿದ ಕೆಲವು ಸದಸ್ಯರು, ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

Related posts

Leave a Reply