
ಮಂಗಳೂರು : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಕಾರು ಮದ್ಯೆ ಭೀಕರ ಅಪಘಾತ ನಡೆದುಕಾರಿನಲ್ಲಿದ್ದ 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿಯಲ್ಲಿ ಮಾ .30 ರಂದು ನಡೆದಿದೆ.ರಘುನಾಥ್, ಶೇಖರ್ ಐಕಲಾ, ಮುಧಾರ, ರಾಜೇಶ್, ಸಂದೀಪ್ ಮತ್ತು ಗೋಪಾಲ್ ಗಾಯಾಳುಗಳು. ಗಾಯಾಳುಗಳೆಲ್ಲರು ವಾದ್ಯ, ವಾಲಗ ನುಡಿಸುವವರಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಐಕಳ ನಿವಾಸಿಗಳು ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್ಲಿನಲ್ಲಿ ನಡೆದ ಕೊರಗಜ್ಜನ ಕೋಲಕ್ಕೆ ತೆರಳಿ ಅಲ್ಲಿ ವಾಲಗ ಸೇವೆ ನಡೆಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.ಈಕೋ ಕಾರಿನಲ್ಲಿದ್ದವರು ಕಾರ್ಯಕ್ರಮ ಮುಗಿಸಿ ಕಿನ್ನಿಗೋಳಿಗೆ ಹಿಂತಿರುಗುತ್ತಿದ್ದ ವೇಳೆಯಲ್ಲಿ ಪಾಣೆಮಂಗಳೂರು ಬಳಿಗೆ ಬರುತ್ತಿದ್ದಂತೆಯೇ ಗ್ಯಾಸ್ ಟ್ಯಾಂಕರ್ ಡಿಕ್ಜಿ ಹೊಡೆದಿದೆ.
ಟ್ಯಾಂಕರ್ ಚಾಲಕ ಓವರ್ ಟೇಕ್ ಮಾಡುವ ವೇಳೆ ಎದುರಿನಿಂದ ಬರುತ್ತಿದ್ದ ಇಕೋ ಕಾರ್ ಗೆ ಮುಖಾಮುಖಿ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.
ಘಟನೆ ನಡೆಯುತ್ತಿದ್ದಂತೆಯೇ ಸಂಚಾರಿ ಠಾಣೆಯ ಎಸ್ ಐ ರಾಜೇಶ್ ಹಾಗೂ ಅವರ ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.