Header Ads
Breaking News

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಮಿಕರು : ಕಾರ್ಮಿಕರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು

ರೈಲು ಸಂಚಾರ ಇನ್ನೂ ಆರಂಭಗೊಳ್ಳದಿದ್ದರೂ ಉತ್ತರ ಭಾರತ ಮೂಲದ ನೂರಾರು ವಲಸೆ ಕಾರ್ಮಿಕರು ಶುಕ್ರವಾರ ಬೆಳಗ್ಗೆ ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಲಾಕ್‍ಡೌನ್‍ನಿಂದ ಊರಿಗೆ ಹೋಗಲಾಗದೆ ದೇರಬೈಲ್, ಸುರತ್ಕಲ್, ಕೆಪಿಟಿ, ನಂತೂರು, ಕೂಳೂರು ಕಡೆಯಲ್ಲಿ ಬಾಕಿಯುಳಿದಿದ್ದ ಸುಮಾರು 700ಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ರೈಲು ಸೌಲಭ್ಯ ಇದೆ ಎಂಬ ತಪ್ಪು ಮಾಹಿತಿಯನ್ನುಆಧರಿಸಿ ಕಾಲ್ನಡಿಗೆಯಲ್ಲೇ ಇಂದು ಬೆಳಗ್ಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಉತ್ತರ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ತಾನ, ಅಸ್ಸಾಂ ಮತ್ತಿತರ ರಾಜ್ಯದ ವಲಸೆ ಕಾರ್ಮಿಕರು ಗುಂಪಾಗಿ ಬಂದು ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಅವರನ್ನು ರೈಲ್ವೆ ಮತ್ತು ಪಾಂಡೇಶ್ವರ ಠಾಣೆಯ ಪೊಲೀಸರು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಈ ವೇಳೆ ಕಾರ್ಮಿಕರು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಈ ವೇಳೆ ಓರ್ವನನ್ನು ಪೊಲೀಸರು ಬಂಧಿಸಲು ಮುಂದಾದಾಗ ಕಾರ್ಮಿಕರೆಲ್ಲ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬಳಿಕ ಬಂಧನ ಯತ್ನವನ್ನು ಪೊಲೀಸರು ಕೈಬಿಟ್ಟರು.

ಇದೀಗ ಸ್ಥಳದಲ್ಲೇ ಕುಳಿತು ಧರಣಿ ಆರಂಭಿಸಿರುವ ಕಾರ್ಮಿಕರು, ವಿ ವಾಂಟ್ ಟು ಗೊ ಹೋಮ್ ಪೊಸ್ಟರ್ ಹಿಡಿದು ಕುಳಿತಿರುವ ಕಾರ್ಮಿಕರು, ತಮ್ಮ ಊರುಗಳಿಗೆ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಮಂಗಳೂರು ಉಪವಿಭಾಗದ ಸಹಾಯಕ ಅಯುಕ್ತ ಮದನ್ ಮೋಹನ್ ಹಾಗೂ ರೈಲ್ವೆ ಅಧಿಕಾರಿಗಳು, ”ನಿಮಗೆ ಮನೆ ಬಾಡಿಗೆ ವಿಚಾರವಾಗಿ ತಕರಾರು ಇದ್ದರೆ ಸ್ಥಳೀಯ ಠಾಣೆಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು. ರೇಶನ್ ವ್ಯವಸ್ಥೆ ಕೂಡ ಮಾಡಲಾಗುವುದು. ಇಷ್ಟರವರೆಗೆ ತಾಳ್ಮೆ ವಹಿಸಿದ್ದೀರಿ. ಇನ್ನೂ ಕೆಲ ದಿನ ತಾಳ್ಮೆ ವಹಿಸಿ. ರಾಜ್ಯ ಸರಕಾರ ಇತರ ರಾಜ್ಯ ಸರಕಾರಗಳ ಜತೆ ಮಾತುಕತೆ ನಡೆಸಿ ನಿಮಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಿದೆ” ಎಂದು ಕಾರ್ಮಿಕರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ ಪಟ್ಟು ಬಿಡದ ವಲಸೆ ಕಾರ್ಮಿಕರು ಧರಣಿ ಕುಳಿತಿದ್ದಾರೆ.

ವಲಸೆ ಕಾರ್ಮಿಕರನ್ನು ಪಕ್ಷವೊಂದರ ವತಿಯಿಂದ ರೈಲ್ವೆ ಮೂಲಕ ಉಚಿತವಾಗಿ ಕಳುಹಿಸಿಕೊಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸಂದೇಶವನ್ನು ನಂಬಿ ಇವರು ರೈಲ್ವೆ ನಿಲ್ದಾಣದಕ್ಕೆ ಆಗಮಿಸಿದ್ದಾರೆನ್ನಲಾಗಿದೆ.

Related posts

Leave a Reply

Your email address will not be published. Required fields are marked *