Header Ads
Breaking News

ಕೊಚ್ಚಿ-ಮಂಗಳೂರು ಗೈಲ್ ಗ್ಯಾಸ್ ಪೈಪ್‍ಲೈನ್-ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆ

ಮಂಗಳೂರು: ಬಹುನಿರೀಕ್ಷಿತ ಕೊಚ್ಚಿ-ಮಂಗಳೂರು ಮಧ್ಯೆ ಗೈಲ್ ಪೈಪ್ ಲೈನ್‍ನಲ್ಲಿ ನೈಸರ್ಗಿಕ ಅನಿಲ ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆಗೊಳಿಸಿದರು.


ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರಿನ ಎಂಸಿಎಫ್‍ನಲ್ಲಿ ಸೀಮಿತ ಅತಿಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಚ್ಚಿ-ಮಂಗಳೂರು ಗೈಲ್ ಗ್ಯಾಸ್ ಪೈಪ್‍ಲೈನ್ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಗ್ಯಾಸ್ ಪೈಪ್ ಲೈನ್‍ನಿಂದ ರೈತರಿಗೆ ಅನುಕೂಲವಾಗಲಿದೆ. ಕಡಿಮೆ ವೆಚ್ಚದಲ್ಲಿ ಇಂಧನ ಒದಗಿಸುತ್ತದೆ. ಎರಡು ರಾಜ್ಯಗಳ ಪ್ರಗತಿಯಲ್ಲಿ ಇದು ಮಹತ್ತರ ಪಾತ್ರ ವಹಿಸಲಿದೆ. ಮನೆಗಳಿಗೆ ಪರಿಸರ ಸ್ನೇಹಿ ಇಂಧನ ಪೂರೈಕೆಗೆ ಸಹಕಾರಿಯಾಗಲಿದೆ. ಸಾರಿಗೆ ವಲಯಕ್ಕೆ ಸಂಕುಚಿತ ರೂಪದ ನೈಸರ್ಗಿಕ ಅನಿಲ ಸಿಗಲಿದೆ. ಭವಿಷ್ಯದಲ್ಲಿ ಅನೇಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಆತ್ಮನಿರ್ಭರ ಭಾರತದ ಅನ್ವೇಷಣೆಯಲ್ಲಿ ಹೆಗ್ಗುರುತಿನ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇರಳದ ಮುಖ್ಯಮಂತ್ರಿ ಪಿಣರಯಿ ವಿಜಯನ್, ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು.
450 ಕಿ.ಮೀ. ಉದ್ದದ ಈ ಕೊಳವೆ ಮಾರ್ಗವನ್ನು ಜಿ.ಎ.ಐ.ಎಲ್. (ಇಂಡಿಯಾ) ಲಿ., ನಿರ್ಮಿಸಿದೆ. ಇದು ಪ್ರತಿನಿತ್ಯ 12 ದಶಲಕ್ಷ ಮೆಟ್ರಿಕ್ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್ ಅನಿಲ ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕೇರಳದ ಕೊಚ್ಚಿಯ ಧ್ರವೀಕೃತ ನೈಸರ್ಗಿಕ ಅನಿಲ (ಎನ್.ಎನ್.ಜಿ) ಮರುಹೊಂದಾಣಿಕೆ ಟರ್ಮಿನಲ್ ನಿಂದ ಎರ್ನಾಕುಲಂ, ತ್ರಿಸ್ಸೂರ್, ಪಾಲಕ್ಕಾಡ್, ಮಲ್ಲಪುರಂ, ಕೋಳಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ಮೂಲಕ ಹಾದೂ ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ನೈಸರ್ಗಿಕ ಅನಿಲವನ್ನು ಸಾಗಿಸುತ್ತದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 3000 ಕೋಟಿ ರೂ.ಗಳಾಗಿದ್ದು, ಅದರ ನಿರ್ಮಾಣವು 12 ಲಕ್ಷ ಮಾನವ-ದಿನಗಳ ಉದ್ಯೋಗವನ್ನು ಸೃಷ್ಟಿಸಿತ್ತು. ಕೊಳವೆ ಮಾರ್ಗ ಅಳವಡಿಕೆಯು ಎಂಜಿನಿಯರಿಂಗ್ ಸವಾಲಾಗಿತ್ತು, ಏಕೆಂದರೆ ಕೊಳವೆ ಮಾರ್ಗವು 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಲಮೂಲಗಳನ್ನು ದಾಟುವುದು ಅನಿವಾರ್ಯವಾಗಿತ್ತು. ಇದನ್ನು ಅಡ್ಡಡ್ಡ ಕೊರೆಯುವ ವಿಧಾನದ ವಿಶೇಷ ತಂತ್ರಜ್ಞಾನದ ಮೂಲಕ ಮಾಡಲಾಯಿತು.ಈ ಕೊಳವೆ ಮಾರ್ಗ ಪರಿಸರ ಸ್ನೇಹಿ ಮತ್ತು ಕೈಗೆಟಕುವ ದರದ ಇಂಧನವನ್ನು ಕೊಳವೆ ಮಾರ್ಗದ ನೈಸರ್ಗಿಕ ಅನಿಲ (ಪಿ.ಎನ್.ಜಿ.)ರೂಪದಲ್ಲಿ ಮನೆಗಳಿಗೆ ಪೂರೈಸಲಿದೆ ಮತ್ತು ಸಂಕುಚಿತ ನೈಸರ್ಗಿಕ ಅನಿಲ (ಸಿ.ಎನ್.ಜಿ.)ಯನ್ನು ಸಾರಿಗೆ ವಲಯಕ್ಕೆ ಸರಬರಾಜು ಮಾಡಲಿದೆ. ಇದು ನೈಸರ್ಗಿಕ ಅನಿಲವನ್ನು ಜಿಲ್ಲೆಯಾದ್ಯಂತದ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳಿಗೆ ಕೊಳವೆ ಮಾರ್ಗದಲ್ಲಿ ಪೂರೈಸಲಿದೆ. ಶುದ್ಧ ಇಂಧನದ ಬಳಕೆಯು ವಾಯು ಮಾಲಿನ್ಯವನ್ನು ನಿಗ್ರಹಿಸಿ, ವಾಯು ಗುಣಮಟ್ಟವನ್ನು ಸುಧಾರಿಸುತ್ತದೆ.

Related posts

Leave a Reply

Your email address will not be published. Required fields are marked *