

ಗೆಜ್ಜೆಗಿರಿ ಕ್ಷೇತ್ರದ ಬಗ್ಗೆ ಹಾಗೂ ತನ್ನ ವಿರುದ್ಧ ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಗೆಜ್ಜೆಗಿರಿ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಧರ್ ಪೂಜಾರಿ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ನನ್ನ ಹಿರಿಯರು ನಂಬಿಕೊಂಡು ಬಂದಿರುವ ಕ್ಷೇತ್ರದ ಧೂಮಾವತಿ ದೈವ, ಕುಪ್ಪೆ ಪಂಜುರ್ಲಿ ಮಾತ್ರವಲ್ಲದೆ ಸರೋಳಿ ಸೈಮಂಜ ಕಟ್ಟೆ, ಸಾಯನ ಬೈದ್ಯರ ಮೂಲ ಸ್ಥಾನದ ಬಗ್ಗೆ ಸಾರ್ವಜನಿಕರಲ್ಲಿ ಅಪಪ್ರಚಾರ ಮತ್ತು ತಪ್ಪು ತಿಳುವಳಿಕೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಜ್ಯ ಈಗಾಗಲೇ ಕೋರ್ಟ್ನಲ್ಲಿದ್ದು, ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಅದರಲ್ಲಿ ನನಗೆ ಸಂಬಂಧಪಟ್ಟ ಸ್ವತ್ತಿನಲ್ಲಿ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ ಪ್ರತಿವಾದಿಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಆದೇಶ ನನ್ನ ವಿರುದ್ಧವಾಗಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಧೂಮಾವತಿ ಕರಸೇವಾ ಸಮಿತಿ ಅಧ್ಯಕ್ಷ ಉದಯ ಕೊಲಾಡಿ, ಕಾರ್ಯದರ್ಶಿ ದಯಾನಂದ ಕರ್ಕೇರಾ, ಕ್ಷೇತ್ರಾಡಳಿತ ಮಂಡಳಿ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಕಡೆಂಜಗುತ್ತು, ನೇಮೋತ್ಸವ ಸಮಿತಿ ಹಿಂದಿನ ಕಾರ್ಯದರ್ಶಿ ರವಿ ಸೂರಿಂಜೆ ಉಪಸ್ಥಿತರಿದ್ದರು.