
ದಕ್ಷಿಣ ಭಾರತದ ಹೆಸರಾಂತ ನಾಗಸನ್ನಿಧಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ಡಿಸೆಂಬರ್ 19ರಂದು ರಾತ್ರಿ ಪಂಚಮಿ ರಥೋತ್ಸವ ಮರುದಿನ ಡಿಸೆಂಬರ್ 20ರಂದು ಪ್ರಾತಃ ಕಾಲ ಚಂಪಾ ಷಷ್ಠಿ ಮಹಾರಥೋತ್ಸವ….ಬ್ರಹ್ಮರಥೋತ್ಸವ ನಡೆಯಲಿದೆ.ಕ್ಷೇತ್ರದಲ್ಲಿ ಡಿಸೆಂಬರ್ 12ರಂದು ಕೊಪ್ಪರಿಗೆ ಏರಿ ಉತ್ಸವಗಳು ಆರಂಭವಾಗಿದ್ದು, ಬಂಡಿ ಉತ್ಸವ, ಲಕ್ಷ ದೀಪೋತ್ಸವ ಶೇಷ ವಾಹನೋತ್ಸವ ಅಶ್ವ ವಾಹನೋತ್ಸವ ಪೂರ್ವ ಪದ್ದತಿಯಂತೆ ಸಾಂಗವಾಗಿ ನೇರವೇರಿದೆ. ಭಕ್ತರು ವೀಕ್ಷಣೆಗಾಗಿ ಕಾಯುತ್ತಿರುವ ಬ್ರಹ್ಮರಥೋತ್ಸವಕ್ಕೆ ಕ್ಷೇತ್ರದ ಆಡಳಿತ ಮಂಡಳಿಯಿಂದ ಸಕಲ ಸಿದ್ದತೆಗಳು ನಡೆಯುತ್ತಿದ್ದು, ಕ್ಷೇತ್ರದ ಆಡಳಿತಾಧಿಕಾರಿಗಳಾದ ಪುತ್ತೂರು ಉಪವಿಭಾಗಾಧಿಕಾರಿಗಳು ಆಗಿರುವ ಡಾ. ಯತೀಶ್ ಉಳ್ಳಾಲ್ ಅವರು ಡಿಸೆಂಬರ್ 16 ರಂದು ಸಿದ್ದತೆಗಳು ಮತ್ತು ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾರ್ಗದರ್ಶನ ನೀಡಿದರು.
ವಿಶೇಷವಾದ ಹಣ್ಣುಕಾಯಿ ಅಂಗಡಿಗಳಲ್ಲಿ ಇರಿಸಲಾದ ಹಣ್ಣುಕಾಯಿಗಳ ಗುಣಮಟ್ಟವನ್ನು ಪರಿಶೀಲಿಸಿದರು. ರಥಬೀದಿಗಳಲ್ಲಿ ಕಂಡುಬಂದ ಟು ವೀಲರ್ ಗಾಡಿಗಳ ಬಗ್ಗೆ ಸೆಕ್ಯುರಿಟಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡರು.
ಗಾಡಿ ನಂಬರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಬಹುತೇಕ ಕ್ಷೇತ್ರದ ಸಿಬ್ಬಂದಿಗಳ ಗಾಡಿಗಳೇ ಇರುವುದಾಗಿ ತಿಳಿದುಕೊಂಡ ಆಡಳಿತಾಧಿಕಾರಿಗಳು ಅದರ ಮೇಲಿರಿಸಿದ ಹೆಲ್ಮೇಟ್ಗಳನ್ನು ತರಿಸಿಕೊಂಡು ಎಚ್ಚರಿಕೆ ಕ್ರಮ ಕೈಗೊಂಡರು.
ಬಳಿಕ ಕ್ಷೇತ್ರದ ಸಮಗ್ರ ವ್ಯವಸ್ಥೆಗಳ ಬಗ್ಗೆ ವಿ4 ನ್ಯೂಸ್ ಚ್ಯಾನೆಲ್ ನೊಂದಿಗೆ ಮಾತನಾಡಿದ ಆಡಳಿತಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಕೋವಿಡ್ ಇರುವ ಕಾರಣ ಆರೋಗ್ಯ ಸುರಕ್ಷತೆಗಾಗಿ ಭಕ್ತರು ಮನೆಯಲ್ಲಿಯೇ ಕುಳಿತು ನೇರ ಪ್ರಸಾರ ಅಥವಾ ಯಾವುದೇ ವಿದ್ಯುನ್ಮಾನಗಳ ಮೂಲಕ ಉತ್ಸವಗಳನ್ನು ವೀಕ್ಷಿಸುವಂತೆ ಮನವಿ ಮಾಡಿದರು. ಅದಾಗ್ಯೂ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪೂರ್ಣಪ್ರಮಾಣದ ಸಹಕಾರವನ್ನು ನೀಡಲಿದ್ದೇವೆ. ಡಿಸೆಂಬರ್ 17 ರಿಂದ 23ರ ವರೆಗೆ ರಥ ಬೀದಿಯಲ್ಲಿ ಯಾವುದೇ ಅಂತರ್ ಜಿಲ್ಲಾ ಅಂತರ್ ರಾಜ್ಯದ ಭಕ್ತರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿಗಳು ಈಗಾಗಲೇ ನೀಡಿರುವ ಆದೇಶವನ್ನು ಪಾಲನೆಮಾಡಲು ಬದ್ಧರಾಗಿದ್ದೇವೆ. ನಿತ್ಯ ಬರುವ ಭಕ್ತರಿಗಾಗಲಿ ಜಿಲ್ಲೆಯ ಭಕ್ತರಿಗಾಗಲಿ ಅವರ ಆಗಮನಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿದೆ. ಉರುಳು ಸೇವೆ ಮಾಡುವವರಿಗಾಗಿ ದ್ವಾರದಿಂದ, ಕಾಶಿ ಕಟ್ಟೆ, ಅಲ್ಲಿಂದ ದೇವಸ್ಥಾನದವರೆಗೆ ಹೋಮ್ ಗಾರ್ಡ್ಗಳನ್ನು ನಿಯೋಜಿಸಿ ಉತ್ತಮ ರೀತಿಯಾದ ವ್ಯವಸ್ಥೆಗಳನ್ನು ಮಾಡಲಾಗಿದೆ.ಅನ್ನ ಛತ್ರವಾಗಿ ತಾತ್ಕಾಲಿಕ ಅನ್ನಛತ್ರಗಳನ್ನು ತೆರೆಯಲಾಗಿದೆ. ಅಂಗಡಿಗುಡ್ಡೆಯಲ್ಲಿ ವರ್ಷಂಪ್ರತಿ ತೆರೆಯಲಾಗುತ್ತಿದ್ದ ಅನ್ನ ಛತ್ರವನ್ನು ಆದಿಸುಬ್ರಹಣ್ಯ ಕ್ಷೇತ್ರದ ವ್ಯಾಸಮಂದಿರದ ಬಳಿ ತೆರೆಯಲಾಗಿದೆ. ರಥಬೀದಿಗೆ ಸಮಾಂತರವಾಗಿರುವ ಇನ್ನೊಂದು ರಸ್ತೆಗೆ ಪೂರ್ತಿ ಚಪ್ಪರ ಹಾಕಿ ನೆರಳಿನಲ್ಲಿಯೇ ಭಕ್ತರಿಗೆ ನಿಲ್ದಾಣದಿಂದ ಬರಲು ಮತ್ತು ರಥಬೀದಿಯಲ್ಲೂ ಕೂಡಾ ಭಕ್ತರಿಗೆ ಕುಳಿತು ಉತ್ಸವವನ್ನು ವೀಕ್ಷಣೆ ಮಾಡಲು ವ್ಯವಸ್ಥೆಗಳನ್ನು ಮಾಡಲಾಗಿದೆ.ಒಳಾಂಗಣದಲ್ಲಿಯೂ ಕೋವಿಡ್ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ವಿಶಾಲವಾದ ಜಾಗದಲ್ಲಿ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಕಡ್ಡಾಯ ಮಾಡಲಾಗಿದೆ. ದೇವಾಲಯ ಪ್ರವೇಶ ಮಾಡುವಾಗ ಸ್ಯಾನಿಟೈಸರ್ ಸ್ಪ್ರೇ ಮಾಡಲಾಗುತ್ತದೆ.ರಥಬೀದಿಯಲ್ಲಿಯೇ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಕೌಂಟರ್ ತೆರೆಯಲಾಗುತ್ತದೆ. ಸುರಕ್ಷತೆ ದೃಷ್ಠಿಯಿಂದ ದೇವಸ್ಥಾನದ ಆಯಕಟ್ಟಿನ ಪ್ರವೇಶದ್ವಾರಗಳಲ್ಲಿ ಸ್ಯಾನಿಟೈಸರ್ಮತ್ತು ಮಾಸ್ಕ್ ವ್ಯವಸ್ಥೆ ಮಾಡಲಾಗುತ್ತದೆ ಎಲ್ಲಾ ಉತ್ಸವಗಳು ಸಂಪ್ರದಾಯದಂತೆ ಯಾವುದೇ ಬದಲಾವಣೆಗಳು ಇಲ್ಲದೆ ನಡೆಯಲಿದೆ ಎಂದ ಆಡಳಿತಾಧಿಕರಿಗಳು ಅಂತರ್ ಜಿಲ್ಲಾ ಭಕ್ತರು ಮನೆಯಲ್ಲೀಯೇ ಕುಳಿತು ಉತ್ಸವ ವೀಕ್ಷಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆದೇಶವನ್ನು ಮಾಡಲಾಗಿದೆ. ಆದೇಶ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು.