Header Ads
Header Ads
Breaking News

ಮಂಚಿಯ ಕೋಡಿಪಡ್ಪು-ಕೆದಿಲ ಸಂಪರ್ಕ ರಸ್ತೆಯ ದುರಾವಸ್ಥೆ ಕೆರೆಯಂತಾದ ರಸ್ತೆ, ನಡೆದಾಡಲು ಹರಸಾಹಸ:ಬಂಟ್ವಾಳ

ಬಂಟ್ವಾಳ: ಈ ಊರಿನ ಜನ ತಮ್ಮೂರಿಗೆ ಹೋಗಬೇಕಾದರೆ ನಿತ್ಯ ಕೆರೆದಡ ಆಡಬೇಕು. ರಸ್ತೆಯೇ ಕೆರೆಯಂತಿರುವ ಈ ಸ್ಥಳದಲ್ಲಿ ನಡೆದಾಡಬೇಕಾದರೆ ಭಯಪಡಬೇಕು.ಮಳೆಗಾಲದಲ್ಲಂತೂ ಈ ಊರಿನ ಮಂದಿ ಈ ರಸ್ತೆಯಲ್ಲಿ ಸಾಗಬೇಕಾದರೆ ಹರಸಾಹಸವನ್ನೇ ಮಾಡಬೇಕು. ನಾಗರೀಕ ಸಮಾಜದ ಮಧ್ಯೆಯೇ ಇದ್ದರೂ ಇಲ್ಲಿನ ಜನತೆಗೆ ದ್ವೀಪದಲ್ಲಿ ಬದುಕಿದ ಅನುಭವ…ಇದು ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಡಿಪಡ್ಪು -ಕೆದಿಲ ಶಾಲೆಗೆ ಸಂಪರ್ಕಿಸುವ ರಸ್ತೆಯ ದುರಾವಸ್ಥೆ. ಇಲ್ಲಿಂದ ಕೋಡಿಪಡ್ಪು, ಕೊಪ್ಪಳ, ಬಪ್ಪಲ್‌ಕೋಡಿ, ಕೊರುಂಗ ದಾರಿಯಾಗಿ ಕೆದಿಲ ಶಾಲೆಗೆ ತಲುಪುತ್ತದೆ. ಆದರೆ ಮಳೆಗಾಲದಲ್ಲಿ ಈ ರಸ್ತೆಯೇ ಕೆರೆಯಂತಾಗಿ ಮೊಣಕಾಲಿನವರೆಗೆ ನೀರು ಹಾಗೂ ಕೆಸರು ತುಂಬಿಕೊಂಡು ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಜನರು ವಸ್ತ್ರಗಳನ್ನು ಎತ್ತಿಕೊಂಡು ಎಲ್ಲಿ ಬೀಳುತ್ತೇವೋ ಎನ್ನುವ ಆತಂಕದಲ್ಲೇ ಹೆಜ್ಜೆಯೂರಬೇಕಾಗುತ್ತದೆ. ಶಾಲೆಗೆ ಹೋಗುವ ಮಕ್ಕಳಂತೂ ಒಂದು ಕೈಯಲ್ಲಿ ಛತ್ರಿ ಹಿಡಿದು ಎಗರಿಕೊಂಡು ಹೋಗುವುದನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ.ಈ ತೊಂದರೆ ತಪ್ಪಿಸಲು ಮುರಕಲ್ಲುಗಳನ್ನು ಇಡಲಾಗಿದೆ. ಒಂದೊಂದು ಕಲ್ಲನ್ನು ದಾಟಿ ಮುಂದೆ ಹೋದಾಗಲೂ ಪ್ರಾಣ ಕೈಯಲ್ಲಿಡಿದುಕೊಳ್ಳಬೇಕಾಗುತ್ತದೆ. ಆದರೂ ಈ ಕಾಲುದಾರಿಯಲ್ಲಿ ಸಂಚರಿಸುವ ಜನರ ಪಾಡು ಕೇಳಿಸಿಕೊಳ್ಳುವವರೇ ಇಲ್ಲದಂತಾಗಿದೆ.ಈ ರಸ್ತೆಯನ್ನು ದಾಟಿದ ಬಳಿಕ ಸುಮಾರು ಮೂವತ್ತು ಮನೆಗಳು ಸಿಗುತ್ತದೆ. ಇಲ್ಲಿನ ಜನರಿಗೆ ಇದೊಂದೆ ಸಂಪರ್ಕ ರಸ್ತೆಯಾಗಿದ್ದು ಪತ್ರಿನಿತ್ಯದ ಓಡಾಟಕ್ಕೆ ಈ ರಸ್ತೆಯೇ ಅನಿವಾರ್ಯ. ತುರ್ತು ಸಂದರ್ಭದಲ್ಲಂತೂ ಇಲ್ಲಿನ ಜನರನ್ನು ಬೇರೆಡೆಗೆ ಕರೆದೊಯ್ಯಬೇಕಾದರೆ ಪ್ರಾಣವನ್ನೇ ಒತ್ತೆ ಇಡಬೇಕು. ಮಳೆಗೆ ಮನೆಗಳೆಲ್ಲ ದುರಸ್ತಿ ಹಂತಕ್ಕೆ ಬಂದಿದ್ದು ಈ ರಸ್ತೆಯ ಮೂಲಕ ಯಾವುದೇ ವಸ್ತುಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದು ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಜಮೀನಲ್ಲ. ಬದಲಿಗೆ ಸರಕಾರಿ ಜಮೀನು. ಈ ರಸ್ತೆಯನ್ನು ಅಭಿವೃದ್ದಿ ಪಡಿಸಲು ಯಾವುದೇ ಕಾನೂನಿನ ತೊಡಕಿಲ್ಲ. ಆದರೂ ಇಲ್ಲಿ ಸರಿಯಾದ ರಸ್ತೆ ಮಾಡಿಕೊಡಲು ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿಯಿಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದಿಸಿಲ್ಲ ಎನ್ನುವುದು ಇಲ್ಲಿನ ಜನರ ಆರೋಪ.

Related posts

Leave a Reply