Header Ads
Header Ads
Breaking News

ಮಂಜೇಶ್ವರಕ್ಕೆ ಬೇಕಿದೆ ಎರಡು ರೈಲ್ವೇ ಮೇಲ್ಸೇತುವೆ. ದಶಕದ ಹೋರಾಟದ ಬೇಡಿಕೆ ಈಡೇರಿಲ್ಲ.

ಮಂಜೇಶ್ವರ ತಾಲೂಕು ಕೇಂದ್ರವಾದ ಬಳಿಕ ಅತ್ಯಗತ್ಯವಾದ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ದಿಸೆಯಲ್ಲಿ ಮುನ್ನಡೆಯುವ ಕನಸು ಇನ್ನೂ ನನಸಾಗಿಲ್ಲ. ಎಡರಂಗ ಸರಕಾರ ಅಧಿಕಾರ ವಹಿಸಿದ ನಂತರ ನೆನೆಗುದಿಗೆ ಬಿದ್ದ ಹಲವು ಯೋಜನೆಗಳನ್ನು ಪೂರ್ಣಗೊಳಿಸಿ ಮಂಜೇಶ್ವರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎನ್ನುವ ಆಶಾಭಾವ ಇದೀಗ ಕುಂಠಿತಗೊಂಡಂತಾಗಿದೆ.2013ರಲ್ಲಿ ಮಂಜೇಶ್ವರವು ತಾಲೂಕು ಕೇಂದ್ರ ಎಂದು ಘೋಷಿಸಲ್ಪಟ್ಟ ನಂತರ ಇಲ್ಲಿನ ಜನಸಾಮಾನ್ಯರಲ್ಲಿ ಭೌತಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕನಸುಗಳು ಚಿಗುರಿದ್ದವು. ಆದರೆ ಐದು ವರ್ಷಗಳ ನಂತರವೂ ಮಂಜೇಶ್ವರ ತಾಲೂಕಿಗೆ ಸೂಕ್ತ ಕೇಂದ್ರ ಕಚೇರಿ ಇಲ್ಲ. ಉಪ್ಪಳ ಬಸ್ಸು ನಿಲ್ದಾಣದ ಮುಂಭಾಗದ ಬಾಡಿಗೆ ಕೊಠಡಿಯಲ್ಲಿ ತಹಶೀಲ್ದಾರರ ಕಚೇರಿ ಪ್ರಸ್ತುತ ಕಾರ್ಯಾಚರಿಸುತ್ತಿದೆ. ಶಿಕ್ಷಣ, ಆರೋಗ್ಯ ಸೇವೆ ವಿಸ್ತರಣೆ ಸಹಿತ ಮಹತ್ವಾಕಾಂಕ್ಷಿ ಯೋಜನೆಗಳು ಪ್ರಾಪ್ತಿಯಾಗದ ಗಡಿಭಾಗದ ಮಂಜೇಶ್ವರದಲ್ಲಿ ರೈಲ್ವೇ ಇಲಾಖೆಯ ಸೇವಾ ಸೌಲಭ್ಯಗಳನ್ನೂ ವಿಸ್ತರಿಸಲಾಗಿಲ್ಲ. ಆರು ತಿಂಗಳ ಹಿಂದೆಯಷ್ಟೇ ಮಂಜೇಶ್ವರದ ಹೊಸಂಗಡಿ, ಉದ್ಯಾವರದಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ರೈಲ್ವೇ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣವಾಗಬೇಕೆಂದು ಸಂಸದರ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು.ಸ್ಥಳೀಯ ಗ್ರಾ.ಪಂಗಳು ಸೇರಿದಂತೆ ಮಂಜೇಶ್ವರ ಬ್ಲಾ.ಪಂ, ಕಾಸರಗೋಡು ಜಿ.ಪಂ ಸಹಿತ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಹಣ ಮೀಸಲಿಡುವಂತೆ ನಿರ್ದೇಶಿಸಲಾಗಿತ್ತು. ಆದರೆ ಆರು ತಿಂಗಳು ಕಳೆದ ನಂತರವೂ ಸ್ಥಳೀಯಾಡಳಿತಗಳು ಹಣ ಮೀಸಲಿಟ್ಟಿಲ್ಲ ಮತ್ತು ಯೋಜನೆಯ ಪೂರ್ಣತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ. ರೈಲ್ವೇ ಅಧಿಕಾರಿ ವರ್ಗದ ಹಸ್ತಕ್ಷೇಪ, ರಾಜಕಾರಣಿಗಳ ಇಬ್ಬಗೆ ನೀತಿ ಮಂಜೇಶ್ವರದ ಅಭಿವೃದ್ಧಿಗೆ ಮುಳುವಾಗಿದೆ ಎನ್ನುತ್ತಿರುವ ಸಿಪಿಐ ನೇತಾರ ಬಿ ವಿ ರಾಜನ್ ಉಪ್ಪಳ, ಕುಂಬಳೆ ರೈಲು ನಿಲ್ದಾಣಗಳು ದಶಕಗಳಿಂದ ಸತತ ಅವಗಣನೆಯಲ್ಲಿವೆ, ಸಂಸದರು ಕಾಳಜಿ ವಹಿಸಿ ಉತ್ತರದ ಮಂಜೇಶ್ವರ ಕ್ಷೇತ್ರದ ರೈಲ್ವೇ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎನ್ನುತ್ತಾರೆ ರಾಜನ್.ಮಂಜೇಶ್ವರ ರೈಲು ನಿಲ್ದಾಣದ ಸಮೀಪವಿರುವ ಉದ್ಯಾವರ ಹಾಗೂ ಹೊಸಂಗಡಿ ರೈಲ್ವೇ ಕ್ರಾಸಿಂಗ್ ತ್ರಾಸದಾಯಕವಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಓವರ್ ಬ್ರಿಡ್ಜ್ ಅವಶ್ಯಕವಾಗಿದೆ. ಅದೇ ರೀತಿ. ಪ್ರಯಾಣಿಕರ ಸಹಾಯಕವಾಗುವ ನಿಟ್ಟಿನಲ್ಲಿ ರೈಲ್ವೇ ಅಂಡರ್‍ಪಾಸ್ ಕಾಲ್ನಡೆ ಹಾದಿಯ ನಿರ್ಮಾಣ ಸಾಧ್ಯವಾಗಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.

Related posts

Leave a Reply