Header Ads
Header Ads
Breaking News

ಮಂಜೇಶ್ವರದಲ್ಲಿ ಮರಳಿನ ಅಭಾವ ಹಿನ್ನೆಲೆ : ಅರ್ಧದಲ್ಲೇ ಮೊಟಕುಗೊಂಡ ಕಾಮಗಾರಿ

ಮಂಜೇಶ್ವರ: ಮರಳು ಸರಬರಾಜಿನ ಬಗ್ಗೆ ಕಟ್ಟು ನಿಟ್ಟಿನ ಕಾನೂನು ಇರುವ ಕಾರಣ ಮಂಜೇಶ್ವರ, ಮಂಗಲ್ಪಾಡಿ, ವರ್ಕಾಡಿ, ಮೀಂಜ ಸೇರಿದಂತೆ ಹಲವು ಸರಕಾರದ ಯೋಜನೆಗಳ ಹಾಗೂ ಖಾಸಗಿ ಮನೆಗಳ ವಿವಿಧ ಕಟ್ಟಡ ಕಾಮಗಾರಿ ಕುಂಠಿತಗೊಂಡಿದೆ. ವಸತಿ ಯೋಜನೆಯ ಫಲಾನುಭವಿಗಳು ಮನೆ ಪೂರ್ಣಗೊಳಿಸಲಾಗದೆ ಪರದಾಡುತ್ತಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿನ ಕೆಲವು ದಿನಗಳಿಂದ ಕರ್ನಾಟಕದಿಂದ ಆಗಮಿಸುತ್ತಿರುವ ಮರಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಾತ್ರವಲ್ಲದೆ ಸ್ಥಳೀಯ ಹೊಳೆಗಳಿಂದ ತೆಗೆಯಲಾಗುತ್ತಿರುವ ಮರಳುಗಳನ್ನು ಅನ್ಯ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿರುವುದು ಸ್ಥಳೀಯರಿಗೆ ಮರಳು ಸಿಗದೇ ಇರಲು ಕಾರಣವಾಗಿದೆ. ಸ್ಥಳೀಯ ಹೊಳೆ ಹಾಗೂ ಸಮುದ್ರ ಬಳಿಗಳಿಂದ ಸಿಗುವ ಮರಳಿನ ದರ ಕೂಡಾ ಭಾರೀ ದುಬಾರಿಯಾಗಿರುವುದು ಇನ್ನೊಂದು ಕಾರಣವಾಗಿದೆ

5ರಿಂದ6ಸಾವಿರ ರೂ ಗೆ ಪೂರೈಕೆಯಾಗುತ್ತಿದ್ದ ಮರಳಿಗೆ ಈಗ 12 ಸಾವಿರದಿಂದ 15ಸಾವಿರ ರೂ.ವರೆಗೂ ದರವಿದೆ. ಆದರೂ ಸಹ ಬೇಡಿಕೆಯಂತೆ ಮರಳು ಸಿಗುತ್ತಿಲ್ಲ. ಮರಳು ಸರಬರಾಜು ಬಗ್ಗೆ ತೀರಾ ಕಟ್ಟುನಿಟ್ಟಿನ ಕಾನೂನು ಮಾಡಿರುವುದು ಕೂಡಾ ಮರಳಿನ ಅಭಾವಕ್ಕೆ ಮತ್ತೊಂದು ಕಾರಣವಾಗಿದೆ. ಮರಳಿನ ಬೆಲೆ ಸಹ ಅತ್ಯಧಿಕವಾಗಿದ್ದು ಕಾಮಗಾರಿ ನಡೆಸುವುದು ಸವಾಲಾಗಿದೆ.

ಗ್ರಾಮೀಣರಿಗೆ ಮರಳು ಖರೀದಿ ಕಷ್ಟವಾಗುತ್ತಿದೆ. ಶೌಚಾಲಯ, ಆಶ್ರಯ ಮನೆ ಇತ್ಯಾದಿಗೆ ಸರಕಾರ ನೀಡುವ ಅನುದಾನ ಅತ್ಯಲ್ಪ. ಈಗಿನ ಮರಳಿನ ದರ ಲೆಕ್ಕಹಾಕಿದರೆ ಸರಕಾರ ಕಾಮಗಾರಿಗೆ ನೀಡುವ ಹಣ ಮರಳು ಖರೀದಿಗೆ ಸರಿಯಾಗುತ್ತದೆ. ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಗೆ ಆರ್ ಎಂ ಎಸ್ ಫಂಡ್ ಲಭಿಸಿದ ಹಣದಿಂದ ಕಂಪ್ಯೂಟರ್ ಹಾಗೂ ವಿಜ್ಞಾನ ಪ್ರಯೋಗಾಲಯ ಮತ್ತು ಆರ್ಟ್ಸ್ ಆಂಡ್ ಕಲ್ಚರಲ್ ಕಟ್ಟಡದ ಕಾಮಗಾರಿ ಆರಂಭಗೊಂಡಿದ್ದರೂ ಮರಳಿನ ಅಭಾವದಿಂದ ಸ್ಥಗಿತಗೊಂಡಿದೆ. ಅದೇ ರೀತಿ ಈ ಪ್ರದೇಶದ ಹಲವೆಡೆ ಮನೆಗಳ ಕಾಮಗಾರಿ ಅರ್ಧದಲ್ಲೇ ನಿಂತು ಹೋಗಿದೆ. ಕಾನೂನಿನಲ್ಲಿ ಸಡಿಲಿಕೆ ಮಾಡಿ ಸ್ಥಳೀಯ ಹೊಳೆಗಳಿಂದ ಹಾಗೂ ಸಮುದ್ರ ಬಳಿಗಳಿಂದ ತೆಗೆಯಲಾಗುತ್ತಿರುವ ಮರಳನ್ನು ಸ್ಥಳೀಯರಿಗೆ ಸಿಗುವ ರೀತಿಯಲ್ಲಿ ಸಂಬಂಧಪಟ್ಟವರು ಗಮನಹರಿಸುವಂತೆ ಊರವರು ಆಗ್ರಹಿಸಿದ್ದಾರೆ.

Related posts

Leave a Reply