Header Ads
Header Ads
Breaking News

ಮಂಜೇಶ್ವರ: ಕಡಂಬಾರ್ ವಲಿಯುಲ್ಲಾಯಿ ಮಖಾಂ ಉರೂಸ್

ಕಡಂಬಾರು ವಲಿಯುಲ್ಲಾಯಿ ಹಾಜಿಯಾರ್ ಉಪ್ಪಾಪ ಮಖಾಂ ಉರೂಸ್ ಪ್ರಯುಕ್ತ ಶುಕ್ರವಾರದಂದು ಸಂಜೆ ಧಾರ್ಮಿಕ ಸೌಹಾರ್ಧ ಸಮ್ಮೇಳನ ನಡೆಯಿತು. ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಝೀಝ್ ಪಿ ಬರ್ವರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಧಾರ್ಮಿಕ ಸೌಹಾರ್ಧ ಸಮ್ಮೇಳನವನ್ನು ಅಂತರಾಷ್ಟ್ರೀಯ ಧಾರ್ಮಿಕ ಪಂಡಿತ ಸಿಂಸಾರುಲ್ ಹಕ್ ಹುದವಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಅನ್ಯ ಧರ್ಮದ ಮೃತ ಶರೀರವನ್ನು ಕೊಂಡೊಯ್ಯುತ್ತಿರುವಾಗ ಎದ್ದು ನಿಲ್ಲಲು ಆದೇಶಿಸಿದ ಮೊಹಮ್ಮದ್ ಪೈಗಂಬರ್ ರವರ ಚರ್ಯೆ ಇತರರಿಗೊಂದು ಮಾದರಿಯಾಗಿದೆ. ಇತರ ಧರ್ಮದವರನ್ನು ಗೌರವಿಸಲು ಕಲಿಸುತ್ತಿರುವ ಧರ್ಮವಾಗಿದೆ ಇಸ್ಲಾಂ ಧರ್ಮ. ಈ ನಿಟ್ಟಿನಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಕೆಲವೊಂದು ದುಷ್ಟ ಶಕ್ತಿಗಳ ಅಟ್ಟಹಾಸದಿಂದ ಸಹೋದರಂತಿದ್ದ ಹಿಂದೂ ಮುಸಲ್ಮಾನರ ಮಧ್ಯೆ ವಿಷ ಬೀಜವನ್ನು ಬಿತ್ತುವ ಶ್ರಮ ನಡೆದಿದೆ. ಯಾರೂ ಯಾರನ್ನು ಧ್ವೇಷಿಸದೆ ಸೌಹಾರ್ಧತೆಯಿಂದ ಪರಸ್ಪರ ಸಹೋದರರಂತೆ ಬಾಳಲು ಇಸ್ಲಾಂ ಕಲಿಸಿದೆ ಅದನ್ನು ನಾವು ಪಾಲಿಸಬೇಕಾಗಿದೆ ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಪಾತ್ರಿ ರಾಜ ಬೆಲ್ಚಾಡರವರು ಮಾತನಾಡಿ ಯಾವುದೇ ಧರ್ಮವಾದರೂ ಶಾಂತಿ ಹಾಗೂ ಸಮಧಾನವನ್ನು ಪಾಲಿಸುವಂತೆ ಆದೇಶಿಸುತ್ತದೆ. ಎಲ್ಲಾ ಧರ್ಮಗಳ ಭಕ್ತಿಯೂ ವಿಲೀನವಾಗುತ್ತಿರುವುದು ಒಂದೇ ಸ್ಥಳಕ್ಕೆ ಹಲವು ಧರ್ಮದವರು ಹಲವು ದೇವರುಗಳನ್ನು ಆರಾಧಿಸುತಿದ್ದರೆ ಅದೆಲ್ಲವೂ ಒಂದೇ ಶಕ್ತಿಯಾಗಿದೆ. ದುಷ್ಟ ಶಕ್ತಿಗಳ ಅಟ್ಟಹಾಸವನ್ನು ಎದುರಿಸಿ ನಾವು ಸಹೋದರತೆಯನ್ನು ಕಾಪಾಡಬೇಕಾಗಿದೆ ಎಂದು ಅವರು ಹೇಳಿದರು.

ಬಳಿಕ ಇನ್ಫಾಂಟ್ ಜೀಸಸ್ ಚರ್ಚ್ ನ ಧರ್ಮಗುರು ವಂದನೀಯ ಗುರು ಫಾದರ್ ಲುಕೋಸ್ ಮಾತನಾಡಿ  ಉರೂಸ್ ಸಮಾರಂಭ ಅಥವಾ ಮುಸಲ್ಮಾನರ ಇತರ ಯಾವುದೇ ಕಾರ್ಯಕ್ರಮ ನನಗೆ ಹೊಸತೇನಲ್ಲ. ನಾನು ಚಿಕ್ಕಂದಿನಿಂದಲೇ ಮುಸಲ್ಮಾನರ ಜೊತೆ ಜೊತೆಯಾಗಿ ಬೆಳೆದು ದೊಡ್ದವನಾದವನು ಆವಾಗ ನಮ್ಮ ಜೊತೆಯಾಗಿ ಇತರ ಧರ್ಮದವರು ಕೂಡಾ ಇದ್ದರು. ನಾವು ಯಾವಾಗಲೂ ಐಕ್ಯತೆಯಿಂದಲೇ ಇದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸದಿಂದ ಕ್ರಮ ಸಮಾಧಾನ ಕೆಟ್ಟು ಹೋಗಿದೆ. ಅದನ್ನು ಪುನರ್ ಸ್ಥಾಪಿಸಿ ನಾವೆಲ್ಲರೂ ಭಾರತೀಯರು ಎಂಬ ಭಾವಣೆಯಿಂದ ಜೀವಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭ ವೇದಿಕೆಯಲ್ಲಿ ಉರೂಸ್ ಕಮಿಟಿ ಕಾರ್ಯದರ್ಶಿ ತಾಜುದ್ದೀನ್, ಸೂರ್ಯನಾರಾಯಣ ಅಯ್ಯರ್, ಎಂ ಪಿ ಮೊಹಮ್ಮದ್ ಸಹದಿ, ಮಸೀದಿ ಖತೀಬರಾದ ಮಹ್ ಶೂಕ್, ಪಿ ಎಚ್ ಅಬ್ದುಲ್ ಹಮೀದ್, ಎ ಕೆ ಎಂ ಅಶ್ರಫ್, ಕಡಂಬಾರ್ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹೊಸಮನೆ, ಹರ್ಷಾದ್ ವರ್ಕಾಡಿ, ವಿಷ್ಣು ಮೂರ್ತಿ ಅಯ್ಯರ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು. ಬಳಿಕ ಬರ್ಧಾ ಮಜ್ಲಿಸ್ ನಡೆಯಿತು.

ಶನಿವಾರ ಅಸ್ತಮಿಸಿದ ಬಾನುವಾರ ರಾತ್ರಿ ಧಾರ್ಮಿಕ ಪ್ರಭಾಷಣೆ ಸಮಾರೋಪಗೊಳ್ಳಲಿದ್ದು, ಸಮಾರೋಪ ಸಮಾರಂಭವನ್ನು ಖಾಝಿ ಜಿಫ್ರಿ ಮುತ್ತು ಕೋಯ ತಂಘಲ್ ಉದ್ಘಾಟಿಸಲಿದ್ದಾರೆ. ಅನ್ವರ್ ಮುಹಿಯದ್ದೀನ್ ಹುದವಿ ಆಲುವ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಬಾನುವಾರ ಬೆಳಿಗ್ಗೆ 10 ಗಂಟೆಗೆ ಮೌಲೀದ್ ಪಾರಾಯಣ ಹಾಗೂ ಅನ್ನದಾನ ನಡೆಯಲಿದೆ.

Related posts

Leave a Reply