Header Ads
Header Ads
Breaking News

ಮಂಜೇಶ್ವರ : ಮರವನ್ನು ಸ್ಪರ್ಶಿಸಲು ಮುಂದಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಇಲ್ಲೊಂದು ಮರವಿದೆ. ಆದ್ರೆ ಈ ಮರದ ಕೆಳಗಡೆ ನೆರಳಿನಲ್ಲಿ ವಿಶ್ರಾಂತಿ ಪಡೆಯೋಣ ಅಂತಾ ಈ ಮರವನ್ನೇನಾದರೂ ಸ್ಪರ್ಶಿಸಿದರೆ ಕಥೆ ಅಷ್ಟೇ. ನೇರವಾಗಿ ಕೈಲಾಸವನ್ನು ಸೇರೋದು ಗ್ಯಾರಂಟಿ. ಹೌದಾ? ಅದು ಹೇಗೆ? ಆ ಮರದಲ್ಲಿ ಅಂಥಾದ್ದೇನಿದೆ ಅಂತಾ ಕೇಳ್ತಾ ಇದ್ದೀರಾ? ನಿಮ್ಮ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಹೌದು, ಇದು ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯ20ನೇ ವಾರ್ಡಿನ ಬಿ ಎಸ್ ನಗರದ ಮಸೀದಿಯ ಸಮೀಪದಲ್ಲಿರುವ ಆಲದ ಮರ. ಮೇಲ್ಬಾಗದಿಂದ ಆಲದ ರೆಂಬೆಯೊಂದು ವಿದ್ಯುತ್ ತಂತಿಗೆ ತಾಗಿಕೊಂಡಿದ್ದು, ಜೋರಾಗಿ ಗಾಳಿ ಬೀಸಿದರೆ ಆ ರೆಂಬೆ ಬೀಳುವ ಸ್ಥಿತಿಯಲ್ಲಿದೆ. ಇನ್ನು ಮಳೆಗಾಲದಲ್ಲಿ ನೀರು ಈ ಮರಕ್ಕೆ ಬಿದ್ದರೆ ಮರದಿಂದ ಶಾಕ್ ಹೊಡೆಯುತ್ತದೆ ಅಂತ ಊರವರು ಹೇಳುತಿದ್ದಾರೆ.

ಈ ಬಗ್ಗೆ ಸ್ಥಳೀಯರು ಹಲವಾರು ಸಲ ವಿದ್ಯುತ್ ಇಲಾಖಾ ಸಿಬ್ಬಂದಿಗಳ ಗಮನಕ್ಕೆ ತಂದರೂ ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಮುತುವರ್ಜಿ ವಹಿಸುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಮಾತ್ರವಲ್ಲದೆ ಕೆಲವು ವರ್ಷಗಳ ಹಿಂದೆ ಇದೇ ರೀತಿ ವರ್ಕಾಡಿಯಲ್ಲಿ ಜೋತು ಬಿದ್ದ ತಂತಿ ಮೇಲೆ ನಡೆದಾಗ ಆರು ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿರುವುದು ಇನ್ನೂ ಕೂಡಾ ಊರವರು ಮರೆತಿಲ್ಲ.

ಸುಮಾರು 200ಕ್ಕಿಂತಲೂ ಮಿಕ್ಕ ಕುಟುಂಬಗಳು ಪ್ರತಿದಿನ ಇದೇ ದಾರಿಯಾಗಿ ಸಾಗುತಿದ್ದಾರೆ. ಬೆಳಗ್ಗಿನ ಸಮಯದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಸೇರಿದಂತೆ ನೂರಾರು ಮಂದಿ ಈ ದಾರಿಯಾಗಿ ಸಾಗುತ್ತಿರುವಾಗ ವಿದ್ಯುತ್ ತಂತಿಯ ಮೇಲೆ ಆಲದ ರೆಂಬೆ ಯಾವಾಗ ಮುರಿದು ಬೀಳುತ್ತದೋ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ದುರಂತ ಸಂಭವಿಸುವುದಕ್ಕಿಂತ ಮೊದಲು ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ದುರಂತ ಸಂಭವಿಸಿದ ಮೇಲೆ ಎಚ್ಚೆತ್ತುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿರುವ ಮಂಜೇಶ್ವರ ವಿದ್ಯುತ್ ಇಲಾಖಾ ಸೆಕ್ಷನ್ ಅಧಿಕಾರಿಗಳು ಉದಾಸೀನತೆಯನ್ನು ಬಿಟ್ಟು, ಅಪಾಯದಂಚಿನಲ್ಲಿರುವ ವಿದ್ಯುತ್ ತಂತಿಗೊಂದು ಪರಿಹಾರವನ್ನು ಒದಗಿಸಿದರೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುವುದನ್ನು ತಪ್ಪಿಸಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

Related posts

Leave a Reply