Breaking News

ಮಂಡೆಕಾಪು ವ್ಯಾಪಾರಿ ರಾಮಕೃಷ್ಣ ಮೂಲ್ಯರ ಕೊಲೆ ಪ್ರಕರಣ, ಕುಂಬಳೆ ಪೋಳೀಶರಿಂದ ನಾಲ್ವರು ಆರೋಪಿಗಳ ಬಂಧನ


ಹಾಡಹಗಲೇ ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಕಡಿದು ಕೊಲೆಗೈದ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಕುಂಬಳೆ ಸಿ.ಐ. ವಿ. ವಿ. ಮನೋಜ್, ಕಾಸರಗೋಡು ಡಿವೈ‌ಎಸ್ಪಿ ಸುಕುಮಾರನ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಮಂಡೆಕಾಪು ಎಂಬಲ್ಲಿನ ವ್ಯಾಪಾರಿ ರಾಮಕೃಷ್ಣ ಮೂಲ್ಯರನ್ನು ಕೊಲೆಗೈದ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಎಡನೀರು ಚೂರಿಮೂಲೆ ನಿವಾಸಿ ಮೂಸ ಎಂಬವರ ಪುತ್ರ ಉಮ್ಮರ್ ಫಾರೂಕ್, ಪೊವ್ವಲ್ ಸ್ಟೋರ್ ಕ್ವಾರ್ಟರ್ಸ್‌ನ ಅಬ್ದುಲ್ ಹಮೀದ್ ಎಂಬವರ ಪುತ್ರ ನೌಶಾದ್ ಶೇಕ್, ಬೋವಿಕ್ಕಾನ ಎಂಟನೇ ಮೈಲು ಕಿಂಗ್ ಕ್ವಾರ್ಟರ್ಸ್‌ನ ಇಬ್ರಾಹಿಂ ಎಂಬವರ ಪುತ್ರ ಅಬ್ದುಲ್ ಹಾರಿಸ್ ಯಾನೆ ಅಚ್ಚು, ಚೆಂಗಳ ರಹ್ಮತ್ ನಗರದ ಕುಂಞಿ ಮಾಹಿನ್ ಎಂಬವರ ಪುತ್ರ ಅಶ್ರಫ್ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಕೊಲೆ ಕೃತ್ಯದ ಬಳಿಕ ಹುಬ್ಬಳ್ಳಿ, ಗೋವಾ, ಚಿಕ್ಕಮಗಳೂರು, ಹೈದರಾಬಾದ್ ಮೊದಲಾದೆಡೆಗೆ ಪಲಾಯನಗೈದು ತಲೆಮರೆಸಿಕೊಂಡ ಆರೋಪಿಗಳನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮಕೃಷ್ಣ ಮೂಲ್ಯರನ್ನು ಕಡಿದು ಕೊಲೆಗೈಯ್ಯಲು ಆರೋಪಿಗಳು ಬಳಸಿದ ಮಾರಕಾಯುಧಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಮೇ. ೪ರಂದು ಮಧ್ಯಾಹ್ನ ೨.೩೦ರ ವೇಳೆ ಮಂಡೆಕಾಪುನಲ್ಲಿರುವ ಜಿ. ಕೆ. ಜನರಲ್ ಸ್ಟೋರ್‍ಗೆ ನುಗ್ಗಿದ ಆರೋಪಿಗಳು ವ್ಯಾಪಾರಿ ರಾಮಕೃಷ್ಣ ಮೂಲ್ಯರನ್ನು ಕಡಿದು ಕೊಲೆಗೈದಿದ್ದರು. ಆರೋಪಿಗಳನ್ನು ಇದೀಗ ಕಾಸರಗೋಡು ಎ. ಆರ್. ಕ್ಯಾಂಪ್‌ಗೆ ತಲುಪಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಾಯವೊದಗಿಸಿದ ವ್ಯಕ್ತಿಗಳ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆಯೆಂದು ಪೋಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸೆರೆ ಹಿಡಿದ ಪೊಲೀಸ್ ತಂಡದಲ್ಲಿ ಸ್ಪೆಶಲ್ ಸ್ಕ್ವಾಡ್ ಸದಸ್ಯರಾದ ಎಸ್.ಐ. ಫಿಲಿಪ್, ಸಿ. ಕೆ. ಬಾಲಕೃಷ್ಣನ್, ಲಕ್ಷ್ಮೀ ನಾರಾಯಣನ್ ಮೊದಲಾದವರಿದ್ದರು.
ಕಳೆದ ಮಾರ್ಚ್‌ನಲ್ಲಿ ಮುಗು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಕಾಣಿಕೆ ಡಬ್ಬಿಯಿಂದ ೪,೪೫೩ ರೂ. ಕಳವುಹೋಗಿತ್ತು. ಈ ಪ್ರಕರಣದಲ್ಲಿ ರಾಮಕೃಷ್ಣ ಕೊಲೆ ಪ್ರಕರಣದ ಒಂದನೇ ಆರೋಪಿ ಉಮ್ಮರ್ ಫಾರೂಕ್‌ನ ಸಹಚರರಾದ ರಹೀಂ ಪಾಷಾ, ರಸಾಕ್ ಎಂಬಿವರನ್ನು ಮಾರ್ಚ್ ೮ರಂದು ಬಂಧಿಸಲಾಗಿತ್ತು. ಈ ಪ್ರಕರಣ ಬದಿಯಡ್ಕ ಠಾಣೆ ವ್ಯಾಪ್ತಿಯಲ್ಲಿ ನಡೆದುದರಿಂದ ಪ್ರಕರಣವನ್ನು ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ದ್ವೇಷವೇ ರಾಮಕೃಷ್ಣರ ಕೊಲೆಗೆ ಕಾರಣವಾಗಿದೆಯೆಂದು ಆರೋಪಿಗಳನ್ನು ತನಿಖೆಗೊಳಪಡಿಸಿದಾಗ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Related posts

Leave a Reply