Breaking News

ಮಗನ ಹುಟ್ಟುಹಬ್ಬಕ್ಕೆ ಪುಸ್ತಕ ಬಿಡುಗಡೆ, ಉಡುಪಿಯಲ್ಲಿ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿದ ದಂಪತಿ

ಪತ್ರಕರ್ತನೋರ್ವ ತಾವೇ ಬರೆದ ಕಥೆಗಳನ್ನು ಪುಸ್ತಕದ ರೂಪದಲ್ಲಿ ಮಗನ ಹುಟ್ಟುಹಬ್ಬದಂದು ಹೊರತಂದ ವಿಭಿನ್ನ ಕಾರ್ಯಕ್ರಮವೊಂದು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆಯಿತು.
ಉಡುಪಿಯಲ್ಲಿ ವರದಿಗಾರರಾಗಿ ಪ್ರಸಕ್ತ ದಾವಣಗೆರೆಯಲ್ಲಿ ವರದಿಗಾರರಾಗಿರುವ ಬಾಲಕೃಷ್ಣ ಶಿಬಾರ್ಲ ಅವರು ಪ್ರೇಮ ವಿವಾಹವಾಗಿ ತಮ್ಮದೇ ಲೋಕವೊಂದನ್ನು ಸೃಷ್ಟಿಸಿಕೊಂಡು ಸಾಧನೆ ಹಾದಿಯಲ್ಲೇ ನಡೆಯುತ್ತಾ ಬಂದ ಶಿಬಾರ್ಲ ಹಳ್ಳಿ ಬದುಕನ್ನು ಹತ್ತಿರದಿಂದ ಕಂಡು ಇದೀಗ ಹಳ್ಳಿಯಲ್ಲಿರುವ ಮಕ್ಕಳ ಹಾಗೂ ಮಕ್ಕಳ ಪರಿಸರದ ಕುರಿತು ಕಥೆಯೊಂದನ್ನು ರಚಿಸಿದ್ದಾರೆ ಇದಕ್ಕೆ ಪತ್ನಿ ಶುಭಾ ಸಾಥ್ ನೀಡಿದ್ದಾರೆ. ಮಕ್ಕಳ ಪರಿಸರದ ಕಥೆಗಳನ್ನು ಬರಹಗಾರ ಶಿಬಾರ್ಲರ ಪತ್ನಿ ಶುಭಾ ಪ್ರೋತ್ಸಾಹದೊಂದಿಗೆ ಪತಿ ಶಿಬಾರ್ಲರ ಕಥೆಗೆ ಪೂರಕವಾಗಿ ಕೈ ಚಿತ್ರ ಬರಹಗಳೊಂದಿಗೆ ಉಡುಪಿಯ ಬೆಳಕು ಪ್ರಕಾಶನದ ಮೂಲಕ ಪುಸ್ತಕದ ರೂಪದಲ್ಲಿ ಮಗುವಿನ ಮೊದಲ ಹುಟ್ಟುಹಬ್ಬದಂದು ಬಿಡುಗಡೆಗೊಳಿಸಲಾಯಿತು.
ಬಾಲಕೃಷ್ಣ ಶಿಬಾರ್ಲ ಶುಭಾ ದಂಪತಿಯ ಮುದ್ದಿನ ಮಗ ಶಾಕ್ಯನ ಮೊದಲ ಹುಟ್ಟುಹಬ್ಬವನ್ನು ಚಾಕ್ಯ ಬಾಬಾ ಮಕ್ಕಳ ಕಥೆಗಳು ಪುಸ್ತಕ ಹೊರತರುವುದರೊಂದಿಗೆ ಕೇಕ್ ಕತ್ತರಿಸಿ ಆಚರಿಸಲಾಯಿತು. ಹಳ್ಳಿಯ ಮಕ್ಕಳ ಜೀವನದ ಕುರಿತು ಕಥೆಗಳನ್ನು ಬರೆದು ಅದನ್ನು ಪುಸ್ತಕದ ರೂಪದಲ್ಲಿ ಹೊರತರಲಾಗಿದೆ. ಶಿಬಾರ್ಲ ದಂಪತಿಗಳ ಪವಿತ್ರ ಪ್ರೀತಿಗೆ ಹುಟ್ಟಿದ ಮುದ್ದಿನ ಮಗನ ಮೊದಲ ಹುಟ್ಟುಹಬ್ಬದಂದೇ ಮಕ್ಕಳ ಕಥೆಗಳುಳ್ಳ ಪುಸ್ತಕವನ್ನು ಅಂಕಣಕಾರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಅನಾವರಣಗೊಳಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತೀ ಕಷ್ಟದ ಕೆಲಸ ಮಕ್ಕಳನ್ನು ಬೆಳೆಸುವುದು. ಮಕ್ಕಳನ್ನು ಬೆಳೆಸುವುದು ಹೇಗೆ ಎಂದು ಅನುಭವದಿಂದ ಕಲಿಯಬೇಕು. ಪುಸ್ತಕ, ಅಂತರ್ಜಾಲ, ಟಿವಿಯಲ್ಲಿ ಬರುವ ಕೌಟುಂಬಿಕ ಸಲಹೆಯಿಂದ ಮಕ್ಕಳನ್ನು ಬೆಳೆಸುವುದು ಹೇಗೆ ಎಂದು ಕಲಿಯಲು ಸಾಧ್ಯವಿಲ್ಲ. ಅದನ್ನು ಅಜ್ಜಿಯಿಂದ ಕಲಿಯಬಹುದು. ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿಗೆ ಮಕ್ಕಳನ್ನು ನೋಡಿಕೊಳ್ಳಲು ಸಮಯವಿಲ್ಲದ ಕಾರಣ ಮಗು ಅತ್ತರೆ ಕಥೆ ಹೇಳುವ ಬದಲು ಟಿವಿ ಪರದೆ ಮುಂದೆ ಕೂರಿಸುತ್ತಾರೆ, ಇಲ್ಲವಾದರೆ ಮೊಬೈಲ್ ನೀಡುವುದು ಕಾಣಬಹುದು, ಈ ಟಿವಿ ಮೊಬೈಲ್ ಜಗತ್ತಿನಲ್ಲಿ ಬಿದ್ದ ಮಕ್ಕಳ ಅವಸನ ಪ್ರಾರಂಭವಾಗುವುದರ ಜೊತೆಗೆ ಮಗುವಿನ ಬೌದ್ದಿಕ ಲೋಕದ ವಿಸ್ತಾರ ಕುಂಠಿತವಾಗುತ್ತದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಕೇಕ್ ಕತ್ತರಿಸಿ ಶಾಕ್ಯನ ಮೊದಲ ಹುಟ್ಟುಹಬ್ಬ ಆಚರಿಸಲಾಯಿತು. ಈ ಹುಟ್ಟುಹಬ್ಬ ಪುಸ್ತಕ ಅನಾವರಣದೊಂದಿಗೆ ಛಾಯಾಗ್ರಾಹಕ ಪ್ರವೀಣ್ ಕೊಡವೂರು ಅವರ ಬಲೆಯೊಳಗಿನ ಬದುಕು ಕಥಾನಕ ಹೇಳುವ ಛಾಯಾಚಿತ್ರ ಪ್ರದರ್ಶನ ನಡೆಯಿತು. ಈ ಛಾಯಾಚಿತ್ರ ಪ್ರದರ್ಶನ ದಿನೇಶ್ ಅಮಿನ್ ಮಟ್ಟು ಕ್ಯಾಮರಾ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಸಬಿತಾ ಗುಂಡ್ಮಿ, ಪ್ರಗತಿಪರ ಚಿಂತಕ ಪೌಲ್ ಡಿಸೋಜ ಉಪಸ್ಥಿತರಿದ್ದರು.

Related posts

Leave a Reply