Header Ads
Header Ads
Breaking News

ಮಜಿ ಸರ್ಕಾರಿ ಶಾಲೆಯಲ್ಲಿ ಸೌರ ವಿದ್ಯುತ್

ಬಂಟ್ವಾಳ: ಶಾಲಾ ಆವರಣದಲ್ಲಿ ತರಕಾರಿ ಕೈ ತೋಟ, ಪಕ್ಕದ ಗದ್ದೆಯಲ್ಲಿ ಭತ್ತದ ಕೃಷಿ, ಶಾಲೆಯ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಯ್ದು ಕೊಂಡು ಕಳೆದ ಎರಡು ವರ್ಷಗಳಿಂದ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು, ಸಾಧನೆ ಮಾಡಿದ್ದ ಬಂಟ್ವಾಳ ತಾಲೂಕಿನ ವೀರಕಂಬದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಬಾರಿ ಶಾಲೆಯಲ್ಲಿ ಸೌರ ವಿದ್ಯುತನ್ನು ಅಳವಡಿಸುವ ಮೂಲಕ ಸೋಲಾರ್ ಅನುಷ್ಠಾನಗೊಳಿಸಿದ ತಾಲೂಕಿನ ಮೊದಲ ಸರಕಾರಿ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.


ಸೂರ್ಯನ ಬೆಳಿಕಿನಿಂದ ನೈಸರ್ಗಿಕವಾಗಿ ವಿದ್ಯುತ್ ಪಡೆಯುವ ಸೌರವಿದ್ಯುತ್ ಉಪಕರಣವನ್ನು ದಾನಿಗಳ ನೆರವಿನಿಂದ ಪಡೆದುಕೊಂಡು ಶಾಲೆಯ ಛಾವಣಿಯಲ್ಲಿ ಅಳವಡಿಸಿದೆ. ಪದೇಪದೇ ಕೈಕೊಡವ ವಿದ್ಯುತ್ ಹಾಗೂ ಮಾಸಂತ್ಯಕ್ಕೆ ದುಬಾರಿ ಬಿಲ್ ಪಾವತಿಸುವ ಜಂಜಾಟದಿಂದ ಮುಕ್ತಿ ಸಿಕ್ಕಿದೆ.
ಎಲ್‌ಎನ್‌ಟಿ ಎನ್ನುವ ಖಾಸಗಿ ಸಂಸ್ಥೆಯೊಂದು ಮಜಿ-ವೀರಕಂಬ ಶಾಲೆಯ ಬೇಡಿಕೆಗೆ ಸ್ಪಂದಿಸಿ ಸೌರವಿದ್ಯುತ್‌ನ ಕೊಡುಗೆಯನ್ನು ನೀಡಿದೆ. ೭೫೦ ವ್ಯಾಟ್‌ನ ಪ್ಯಾನಲ್, ೨ಕೆವಿ ಯೂಪಿಎಸ್, ೧೫೦ ಸಾಮರ್ಥ್ಯದ ಬ್ಯಾಟರಿಯ ಸುಮಾರು ೧.೧೦ರೂ. ಲಕ್ಷ ವೆಚ್ಚದ ಸೋಲಾರ್ ಸಿಸ್ಟಮನ್ನು ಅಳವಡಿಸಲಾಗಿದೆ. ನೀರಿನ ಪಂಪ್ ಒಂದನ್ನು ಹೊರತು ಪಡಿಸಿದರೆ ಶಾಲೆಯ ತರಗತಿ ಕೋಣೆಯಲ್ಲಿರುವ ೧೨ ಫ್ಯಾನ್, ೧೨ ಬಲ್ಬ್, ಮಿಕ್ಸಿ, ಗ್ರೈಂಡರ್, ಹಾಗೂ ಕಂಪ್ಯಟೂರ್ ಸೋಲಾರ್ ಮೂಲಕ ಚಾಲನೆಗೊಳ್ಳುತ್ತದೆ. ಇದರಿಂದಾಗಿ ವಿದ್ಯುತ್ ಉಳಿತಾಯವಾಗುತ್ತಿದ್ದು ಶಾಲೆಗೆ ಪ್ರಯೋಜನಕಾರಿಯಾಗಿದೆ.
ಶಾಲೆಯ ಆವರಣ ಗೋಡೆಯಲ್ಲಿ ಬಿಡಿಸಿರುವ ಬಣ್ಣದ ಚಿತ್ರಗಳು ಸಾರ್ವಜನಿಕರ ಗಮನವನ್ನು ಶಾಲೆಯತ್ತ ಸೆಳೆಯುತ್ತದೆ. ಸ್ವಚ್ಛ ಭಾರತ ಕಲ್ಪನೆ, ಕಂಬಳ, ಕ್ರಿಕೆಟ್ ಆಟ, ನೀರಿನ ಸದ್ಬಳಕೆ, ಯಕ್ಷಗಾನ ಮೊದಲಾದ ಚಿತ್ತಾರಗಳು ವಿವಿಧ ಸಂದೇಶಗಳನ್ನು ನೀಡುವುದರ ಜೊತೆಗೆ ಶಾಲೆಯ ಆಕರ್ಷಣೆಯನ್ನು ಹೆಚ್ಚಿಸಿದೆ. ಜೊತೆಗೆ ಏಳು ಬಣ್ಣದ ಬಾವುಟಗಳು ಶಾಲೆಯ ಸೌಂದರ್ಯವನ್ನು ಹಿಮ್ಮಡಿಗೊಳಿಸಿದೆ. ಹಳೆವಿದ್ಯಾರ್ಥಿಗಳ ಸಂಘ ಈ ಕೊಡುಗೆಯನ್ನು ನೀಡಿದೆ.
ಶಾಲೆಯ ಹಿಂಭಾಗದಲ್ಲಿ ಕೈ ತೋಟವಿದ್ದು ತೊಂಡೆ, ಬೆಂಡೆ, ಬದನೆ ಮೊದಲಾದ ಹಲವು ಬಗೆಯ ತರಕಾರಿಗಳನ್ನು ಬೆಳೆಸಲಾಗಿದೆ. ಜೊತೆಗೆ ೫೦ ತೆಂಗಿನ ಗಿಡಗಳನ್ನು ನೆಟ್ಟು ಪ್ರತಿಯೊಂದು ಗಿಡಗಳಿಗೆ ಶಾಲಾ ವಿದ್ಯಾರ್ಥಿಗಳ ಹೆಸರಿನ ನಾಮಫಲಕವನ್ನು ತೂಗು ಹಾಕಲಾಗಿದೆ. ಅಡಿಕೆ ಮರದಲ್ಲಿರುವ ಹೆಸರಿನ ವಿದ್ಯಾರ್ಥಿ ಆಯಾಯಾ ಗಿಡದ ಪೋಷಣೆ ಮಾಡುವ ಜವಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಇದೀಗ ಅಡಿಕೆ ಗಿಡಗಳು ಫಲನೀಡುವ ಹಂತಕ್ಕೆ ಬೆಳೆದಿದ್ದು ವಿದ್ಯಾರ್ಥಿಗಳಿಗೆ ತಾವು ಬೆಳೆದ ಗಿಡ ಎನ್ನುವ ಹೆಮ್ಮೆ ಮೂಡಿಸಿದೆ. ಶಾಲೆಯ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು ಅರ್ಹವಾಗಿಯೇ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ ಈ ಶಾಲೆಗೆ ಲಭಿಸಿದೆ.
ವರದಿ: ಸಂದೀಪ್ ಬಂಟ್ವಾಳ