Header Ads
Breaking News

ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ : ಅಧಿಕಾರಿಗಳ ಮುಂದೆ ವಿವಿಧ ಸಮಸ್ಯೆ ಬಿಚ್ಚಿಟ್ಟ ಗ್ರಾಮಸ್ಥರು

ಮಡಪ್ಪಾಡಿಯಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ನೇತೃತ್ವದ ಅಧಿಕಾರಿಗಳ ತಂಡದ ಜತೆ ಮಡಪ್ಪಾಡಿ ಗ್ರಾಮಸ್ಥರ ಮತ್ತು ಅಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಮುಂದಿಟ್ಟರು. ಪ್ರಮುಖವಾಗಿ ಹಳದಿ ಎಲೆ ರೋಗ ನೆಟ್‍ವರ್ಕ್ ಸಮಸ್ಯೆ ರಸ್ತೆಗಳ ಅಭಿವೃದ್ಧಿ ಕುರಿತು ಗ್ರಾಮಸ್ಥರು ಬೇಡಿಕೆ ಪಟ್ಟಿಯನ್ನೇ ಹೇಳಿದರು.

ಕೃಷಿಕ ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ ಗ್ರಾಮದ ಪ್ರಮುಖ ರಸ್ತೆಯ ಕುರಿತು ಪ್ರಸ್ತಾಪಿಸಿದರಲ್ಲದೆ ರಸ್ತೆ ಅಭಿವೃದ್ಧಿಗೆ 15ಕೋಟಿ ಒದಗಿಸಿಕೊಡುವಂತೆ ವಿನಂತಿಸಿದರು. ಅವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಇಲ್ಲಿಗೆ ಬರುವಾಗ ರಸ್ತೆಯ ಸ್ಥಿತಿ ತಿಳಿಯಿತು. ಈ ಕುರಿತು ಚರ್ಚಿಸಿ ಯಾವ ಅನುದಾನದಲ್ಲಿ ಸರಿಪಡಿಸಬಹುದೆಂದು ಹೇಳಿದರು.

ಮಡಪ್ಪಾಡಿಯ ಜಯರಾಮ ಹಾಡಿಕಲ್ಲು, ನಮ್ಮಲ್ಲಿ ನೆಟ್‍ವರ್ಕ್ ಸಮಸ್ಯೆ ಪ್ರಮುಖವಾದದ್ದು. ಇದಕ್ಕಾಗಿ ಲಿಂಕಿಂಗ್ ಟವರ್ ವ್ಯವಸ್ಥೆಯಾಗಬೇಕು. ಈಗಾಲೇ ನಮಗೆ ನಕ್ಸ್‍ಲ್ ಪ್ರದೇಶ ಎಂಬ ಹಣೆಪಟ್ಟಿ ಇದೆ. ಅದನ್ನು ಕೂಡ ಹೋಗಲಾಡಿಸಬೇಕು ಎಂದು ಪ್ರಸ್ತಾಪಿಸಿದರು.ಇಲ್ಲಿ ಕರೆಂಟ್ ಇದ್ದರೆ 24 ಗಂಟೆಯೂ ಬಿಎಸ್‍ಎನ್ನೆಲ್ ರೇಂಜ್ ಸಿಗಬಹುದು. ವಿದ್ಯುತ್ ಕೊಡಿಸಲು ಮೆಸ್ಕಾಂ ಎಂ.ಡಿ.ಜತೆ ಮಾತನಾಡುತ್ತೇನೆ. ಲಿಂಕಿಂಗ್ ಟವರ್ ಬಗ್ಗೆ ಸಂಬಂಧಿಸಿದವರಲ್ಲಿ ಮಾತನಾಡಿಸಲಾಗುವುದು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣೆ ಹೇಳಿದರು.

ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ, ಸಾಲಮನ್ನಾದಲ್ಲಿ ಆಗಿರುವ ಸಮಸ್ಯೆಯನ್ನು ನಿವಾರಿಸಿ ಎಲ್ಲರಿಗೂ ಹಣ ಬರುವಂತೆ ಕ್ರಮ ಆಗಬೇಕೆಂದು ಹೇಳಿದರು. ಐದು ಮಹಾಸಭೆಗಳಲ್ಲಿ ಮೂರು ಮಹಾಸಭೆಗೆ ಭಾಗವಹಿಸಿದವರಿಗೆ ಮಾತ್ರ ಮತದಾನದ ಹಕ್ಕು ಎಂಬ ಖಾಯಿದೆ ಜಾರಿಯಲ್ಲಿದ್ದು, ಆ ಕಾಯಿದೆಗೆ ತಿದ್ದುಪಡಿತಂದು ಸಹಕಾರಿ ಸಂಘದ ಸದಸ್ಯರಾದ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಂದೆ ಅಹವಾಲು ಸಲ್ಲಿಸಿದರು.

ಸಾಲಮನ್ನಾದ ದೂರುಗಳು ಸಾಕಷ್ಟು ಬಂದಿವೆ. ಈ ಕುರಿತು ಸಹಕಾರಿ ಇಲಾಖೆಯ ಅಧಿಕಾರಿಯವರಲ್ಲಿ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ಕುರಿತು ನ್ಯಾಯವಾದಿ ವಿನಯ ಮುಳುಗಾಡು ಹೇಳಿದ್ದರಲ್ಲದೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸುಳ್ಯದಿಂದ ಮಡಪ್ಪಾಡಿಗೆ ಸಂಜೆ ಶಾಲೆ ಬಿಡುವ ವೇಳೆಯಲ್ಲಿ ಹಾಗೂ ಸುಬ್ರಹ್ಮಣ್ಯಕ್ಕೆ ಬೆಳಗಿನ ಶಾಲಾ ಸಮಯ ಬಸ್‍ನ ವ್ಯವಸ್ಥೆ ಒದಗಿಸುವಂತೆ ಸಹಕಾರಿ ಸಂಘದ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ಹೇಳಿದರು. ಇದಕ್ಕೆ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಹೊಸ ಗನ್ ಲೈಸೆನ್ಸ್ ಪಡೆಯಲು ನಿಯಮ ಸರಳೀಕರಣಗೊಳಿಸಬೇಕು, ಪಂಚಾಯಿತಿ ಎದುರು ನಿರ್ಮಿಸಲಾಗಿರುವ ಕುಡಿಯುವ ನೀರಿನ ಘಟಕದ ಅಪೂರ್ಣತೆಯ ಬಗ್ಗೆ, ಅಕ್ರಮ-ಸಕ್ರಮ ಕಡತ ಪೋಡಿ ಸರ್ವೆ, ಮಡಪ್ಪಾಡಿ ಆರೋಗ್ಯ ಉಪಕೇಂದ್ರದಲ್ಲಿ ವಾರ ವಿಡೀ ವೈಧ್ಯರು ಇರುವಂತಾಗಾಬೇಕು ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಮುಂದೆ ಹೇಳಿಕೊಂಡರು.

ಈ ಸಂದರ್ಭ ವೇದಿಕೆಯಲ್ಲಿ ಡಿವೈಎಸ್ಪಿ ದಿನಕರ ಶೆಟ್ಟಿ, ಜಿಲ್ಲಾ ಆರೋಗ್ಯವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ತಾ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *