Header Ads
Breaking News

ಮತ್ತೆ ಬಣ್ಣ ಹಚ್ಚಲು ರೆಡಿಯಾದ ಯಕ್ಷಗಾನ ಕಲಾವಿದರು

ಉಡುಪಿ: ಮಂದಾರ್ತಿ ದುರ್ಗಾ ಪರಮೇಶ್ವರಿ ಅಮ್ಮ, ಕಲಾವಿದರ ಕೈ ಹಿಡಿದಿದ್ದಾಳೆ. ಭಕ್ತರಿಂದ ಬೆಳಕಿನ ಸೇವೆಯ ಹರಕೆ ಪಡೆಯುವ ಈ ಕ್ಷೇತ್ರದಲ್ಲಿ ಯಕ್ಷಗಾನ ಬಯಲಾಟ ಮತ್ತೆ ಆರಂಭಗೊಂಡಿದೆ. ಕೋವಿಡ್ ಕಂಟಕದಿಂದ ಕಂಗೆಟ್ಟಿದ್ದ ಕಲಾವಿದರು ಮತ್ತೆ ಬಣ್ಣ ಹಚ್ಚಿದ್ದಾರೆ. ಕರಾವಳಿಯಲ್ಲಿ ಮತ್ತೊಮ್ಮೆ ಚಂಡೆ, ಮದ್ದಳೆ, ಗೆಜ್ಜೆಯ ಸದ್ದು ಕೇಳಲಾರಂಭಿಸಿದೆ,

ಕೊರೋನಾ ಕಾಲದಲ್ಲಿ ನಿಜಕ್ಕೂ ಕರಾವಳಿಯ ಜನರು ಮಿಸ್ ಮಾಡಿದ್ದು ಏನ್ ಗೊತ್ತಾ? ಯಕ್ಷಗಾನ, ಹೌದು ಉಡುಪಿ-ಮಂಗಳೂರು ಭಾಗದ ಜನರಿಗೆ ದಿನವೂ ಯಕ್ಷಗಾನದ ಚಂಡೆಪೆಟ್ಟು ಕೇಳಿದಿದ್ದರೆ ನೆಮ್ಮದಿಯಿಲ್ಲ. ಕೊರೋನಾ ಬಂದ ನಂತರ ಕಳೆದ ಆರು ತಿಂಗಳಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಇರಲಿಲ್ಲ. ಕೊನೆಗೂ ಯಕ್ಷಗಾನದ ಚೌಕಿಮನೆಯಲ್ಲಿ ಬಣ್ಣಗಾರಿಕೆ ಕಳೆಕಟ್ಟಿದೆ. ಉಡುಪಿಯ ಮಂದಾರ್ತಿ ಕ್ಷೇತ್ರದಲ್ಲಿ ಯಕ್ಷಗಾನದ ಹರಕೆ ಅಥವಾ ಬೆಳಕಿನ ಸೇವೆ ಸಲ್ಲಿಸಲು ಭಕ್ತರಿಗೆ ಅವಕಾಶ ಸಿಕ್ಕಿದೆ. ಕೋವಿಡ್ ನಿಯಮಾವಳಿಗಳಿಗೆ ಧಕ್ಕೆಯಾಗದಂತೆ ಯಕ್ಷಗಾನದ ಹರಕೆ ಸಲ್ಲಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಸದ್ಯ ಪ್ರತೀದಿನ ಎರಡು ವೇದಿಕೆಗಳಲ್ಲಿ ಯಕ್ಷಗಾನದ ಪ್ರದರ್ಶನ ನಡೆಸಲಾಗುತ್ತೆ. ಅಂದರೆ ಇಬ್ಬರು ಸೇವಾರ್ಥಿಗಳಿಗೆ ತಮ್ಮ ಹರಕೆ ಸಲ್ಲಿಸಲು ಅವಕಾಶವಿದೆ. ಮಂದಾರ್ತಿ ಕ್ಷೇತ್ರದಲ್ಲಿ ಒಟ್ಟು ಐದು ಯಕ್ಷಗಾನ ಮೇಳಗಳು ಕಾರ್ಯಾಚರಿಸುತ್ತಿದ್ದು, ಸದ್ಯ ಸಂಚಾರೀ ಮೇಳಗಳಿಗೆ ವಿರಾಮ ನೀಡಿ, ಕ್ಷೇತ್ರದಲ್ಲಿ ಮಾತ್ರ ಪ್ರದರ್ಶನ ನೀಡಲು ಅವಕಾಶವಿದೆ.

 

ಭಕ್ತರು ತಮ್ಮ ಸಂಕಷ್ಟ ಕಾಲದಲ್ಲಿ ಮಂದಾರ್ತಿ ಅಮ್ಮನಿಗೆ ಯಕ್ಷಗಾನದ ಹರಕೆ ಹೊರುತ್ತಾರೆ, ಇವರ ಹರಕೆ ತೀರಿಸಲೆಂದೇ ಐದು ಯಕ್ಷಗಾನ ಮೇಳಗಳಿವೆ. ಮುನ್ನೂರಕ್ಕೂ ಅಧಿಕ ಕಲಾವಿದರಿದ್ದಾರೆ. ಪ್ರತೀದಿನ ಈ ಐದು ಮೇಳಗಳು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕಮಗಳೂರು, ಉತ್ತರ ಕನ್ನಡ ಮುಂತಾದ ಜಿಲ್ಲೆಗಳಿಗೆ ಸಂಚಾರ ಮಾಡಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡಿ ಹರಕೆ ಪೂರೈಸುತ್ತಾರೆ. ಈಗಾಗಲೇ ಬುಕ್ ಆಗಿರುವ ಹರಕೆ ತೀರಿಸಲು ಬರೋಬ್ಬರಿ 20 ವರ್ಷ ಬೇಕು.ಅಂದ್ರೆ ಭಕ್ತರು ಹೊಸತಾಗಿ ಹರಕೆ ಹೊತ್ತರೆ 2040 ರ ನಂತರವಷ್ಟೇ ಯಕ್ಷಗಾನ ಹರಕೆ ಪೂರೈಸಬಹುದು. ಕೊರೋನಾ ಬಂದ ಪರಿಣಾಮ ಮೂರು ತಿಂಗಳ ಹರಕೆ ಬಾಕಿಯಾಗಿದೆ. ಅಂದರೆ ಸುಮಾರು ೪೫೦ ಯಕ್ಷಗಾನ ಪ್ರದರ್ಶನ ರದ್ದಾಗಿದೆ. ಇದೀಗ ಕೋವಿಡ್ ನಿಯಮಾವಳಿಯೊಂದಿಗೆ ಪ್ರತೀದಿನ ಎರಡು ಯಕ್ಷಗಾನ ಹರಕೆಯ ರೂಪದಲ್ಲಿ ಪ್ರದರ್ಶನ ವಾಗುತ್ತಿದೆ. ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರದರ್ಶನ ನಡೆಸಲಾಗುತ್ತಿದೆ. ೪೦ ಕಲಾವಿದರೂ ಸೇರಿದಂತೆ ಕೇವಲ 100 ಮಂದಿಯ ಉಪಸ್ಥಿತಿಯಲ್ಲಿ ಸೀಮಿತ ಅವಧಿಯ ಯಕ್ಷಗಾನ ಪ್ರದರ್ಶನ ನಡೆಸಲು ಸರ್ಕಾರ ಅವಕಾಶ ಕೊಟ್ಟಿದೆ.

ಹರಕೆ ಮಾತ್ರವಲ್ಲದೆ, ಪ್ರದರ್ಶನಕ್ಕಾಗಿಯೂ ಯಕ್ಷಗಾನ ನಡೆಸುವ ಅನೇಕ ಮೇಳಗಳಿವೆ. ಮೂರು ಜಿಲ್ಲೆಗಳಲ್ಲಿ ಏನಿಲ್ಲಾ ಅಂದ್ರೂ ಮೂರ್ನಾಲ್ಕು ಸಾವಿರ ಕಲಾವಿದ್ದಾರೆ. ಕೋವಿಡ್ ನಿಯಮಾವಳಿಯೊಂದಿಗೆ ಸೀಮಿತ ಅವಧಿಯ ಯಕ್ಷಗಾನ ಪ್ರದರ್ಶನಕ್ಕೆ ಎಲ್ಲಾ ಮೇಳಗಳಿಗೂ ಅವಕಾಶ ಸಿಕ್ಕರೆ ಕಲಾವಿದರ ಮನೆಯಲ್ಲೂ ಸಾಲದ ಹಂಗಿಲ್ಲದ ಊಟ ಮಾಡಬಹುದು
ವರದಿ: ಪಲ್ಲವಿ ಸಂತೋಷ್ ಉಡುಪಿ

 

Related posts

Leave a Reply

Your email address will not be published. Required fields are marked *