Header Ads
Header Ads
Breaking News

ಮತ್ಸ್ಯಾಶ್ರಯ ಯೋಜನೆಯಡಿ ಮನೆ ಪಡೆದುಕೊಂಡು ಮಾರಾಟ ಮಾಡಿ ಸರಕಾರಕ್ಕೆ ವಂಚನೆ : ಜಯರಾಮ ಗೌಡ ಆಗ್ರಹ

ಮತ್ಸ್ಯಾಶ್ರಯ ಯೋಜನೆಯಡಿ ಮನೆ ಪಡೆದುಕೊಂಡು, ಒಂದು ವರ್ಷದೊಳಗೆ ಆ ಮನೆಯನ್ನು ಮಾರಾಟ ಮಾಡಿ ಸರಕಾರಕ್ಕೆ ವಂಚನೆ ಎಸಗಿದ್ದಾರೆ. ಈ ಕುರಿತು ಸಂಬಂಧ ಪಟ್ಟ ಇಲಾಖೆ ತಕ್ಷಣ ಕ್ರಮಕೈಗೊಂಡು ಮನೆಯನ್ನು ಮುಟ್ಟುಗೋಲು ಹಾಕಬೇಕು ಎಂದು ಕೆದಂಬಾಡಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಜಯರಾಮ ಗೌಡ ಮುಂಡಾಳ ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2006-07ನೇ ಸಾಲಿಗೆ ಕೆದಂಬಾಡಿ ಗ್ರಾಮಕ್ಕೆ ಮತ್ಸ್ಯಾಶ್ರಯ ಯೋಜನೆಯಡಿ ಗ್ರಾಮದ ನಿವಾಸಿಗಳಾದ ಲಿಂಗು, ಕೆ.ಕುಂಞ ಹಾಗೂ ವಿಜಯ ಕುಮಾರ್ ರೈ ಎಂಬವರಿಗೆ ಮನೆ ಮಂಜೂರುಗೊಂಡಿದ್ದು, ಮನೆಯೂ ನಿರ್ಮಿಸಲಾಗಿತ್ತು. ಈ ಪೈಕಿ ಪ್ರಸ್ತುತ ಕೆದಂಬಾಡಿ ಗ್ರಾಪಂ ಸದಸ್ಯರಾಗಿರುವ ವಿಜಯ ಕುಮಾರ್ ರೈ ಎಂಬವರು ಈ ಮೊದಲೇ ಮನೆ ಹೊಂದಿದ್ದಾರೆ. ಇದಕ್ಕೆ ಪಂಚಾಯಿತಿಯಲ್ಲಿ ದಾಖಲೆ ಇದೆ. ಆದರೂ20 ರೂ. ಛಾಪಾ ಕಾಗದಲ್ಲಿ ಅಫಿದವಿತ್ ಮಾಡಿ ತನಗೆ ಸ್ವಂತ ಮನೆಯಿಲ್ಲ ಹಾಗೂ ಸರಕಾರದಿಂದ ಯಾವುದೇ ಯೋಜನೆಯಲ್ಲಿ ವಸತಿಗೆ ಸಹಾಯಧನ ಪಡೆದಿರುವುದಿಲ್ಲ. ಅರ್ಜಿಯಲ್ಲಿ ನೀಡಿರುವ ಮಾಹಿತಿ ನಿಜವೆಂದು ದೃಢೀಕರಿಸುತ್ತೇನೆ. ಇದು ತಪ್ಪಾಗಿದ್ದಲ್ಲಿ ನನಗೆ ನೀಡಿದ ವಸತಿ ಸೌಲಭ್ಯವನ್ನು ನಿವೇಶನ ಸಹಿತ ಮುಟ್ಟುಗೋಲು ಹಾಕಿಕೊಳ್ಳಲು ನನ್ನ ಒಪ್ಪಿಗೆ ಇದೆ. ಅಲ್ಲದೆ ಮನೆಯನ್ನು ಮಾರಾಟ ಮಾಡುವುದಿಲ್ಲ ಎಂದು ಮುದ್ರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಇದು ತಪ್ಪು ಮಾಹಿತಿಯಾಗಿದೆ ಎಂದರು.

ಈ ಕುರಿತು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದೀಗ ವಿಜಯ ಕುಮಾರ್ ರೈ ಅವರ ಪಂಚಾಯಿತಿ ಸದಸ್ಯತನವನ್ನು ರದ್ದುಗೊಳಿಸುವುದಲ್ಲದೆ, ಮಾರಾಟ ಮಾಡಿದ ಮನೆಯನ್ನು ಮುಟ್ಟುಗೋಲು ಹಾಕುವಂತೆ ಲೋಕಾಯುಕ್ತ, ಪ್ರಧಾನಿ, ಮುಖ್ಯಮಂತ್ರಿ, ಮೀನುಗಾರಿಕಾ ಇಲಾಖೆಗೆ ಮನವಿ ಸಲ್ಲಿಸಲ್ಲಾಗಿದೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಸ್ಪಂದನೆ ನೀಡುತ್ತಿಲ್ಲ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿನೋದ್ ಕುಮಾರ್ ಕಲ್ಲಾಪು ಉಪಸ್ಥಿತರಿದ್ದರು.

Related posts

Leave a Reply