Header Ads
Header Ads
Breaking News

ಮನೆಗೆ ಸಿಡಿಲು ಬಡಿದು ಯುವಕನ ಮೃತ್ಯು-ಇಬ್ಬರಿಗೆ ಗಾಯ ಪುತ್ತೂರಿನ ಪುಣ್ಚಪ್ಪಾಡಿ ಎಂಬಲ್ಲಿ ನಡೆದ ಘಟನೆ

ಪುತ್ತೂರು : ಮನೆಯೊಂದಕ್ಕೆ ಸಿಡಿಲು ಬಡಿದು ಅಂಗವಿಕಲ ಯುವಕನೊಬ್ಬ ಮೃತಪಟ್ಟು ,ಇಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಪುತ್ತೂರು ತಾಲ್ಲೂಕಿನ ಸವಣೂರು ವ್ಯಾಪ್ತಿಯಲ್ಲಿ ಬರುವ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಸಮೀಪದ ನೆಕ್ಕಿ ನಿವಾಸಿ ಕೇಪು ಮುಗೇರ ಅವರ ಪುತ್ರ ಧನಂಜಯ ಮುಗೇರ ಮೃತಪಟ್ಟ ಯುವಕ. ಮೃತ ಧನಂಜಯ ಅವರ ಸಹೋದರಿ ಗೀತಾ ಮತ್ತು ದೊಡ್ಡಪ್ಪ ಕುಂಡಮುಗೇರ ಅವರು ಗಂಭೀರ ಗಾಯಗೊಂಡಿದ್ದು, ಅವರಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಸೋಮವಾರ ಸಂಜೆ ಬಾರೀ ಗುಡುಗು -ಮಿಂಚಿನೊಂದಿಗೆ ಮಳೆ ಆರಂಭಗೊಂಡಿತ್ತು. ಈ ವೇಳೆ ಕೇಪು ಮುಗೇರ ಅವರ ಮನೆಗೆ ಸಿಡಿಲು ಬಡಿದಿದೆ. ಸಿಡಿಲು ಬಡಿದ ಪರಿಣಾಮವಾಗಿ ಮನೆಯೊಳಗಿದ್ದ ಅಂಗವಿಕಲರಾದ ಧನಂಜಯ ,ಆತನ ಸಹೋದರಿ ಗೀತಾ ಮತ್ತು ದೊಡ್ಡಪ್ಪ ಕುಂಡಮುಗೇರ ಅವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಧನಂಜಯ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ವರದಿ: ಅನೀಶ್ ಪುತ್ತೂರು