Breaking News

ಮನೆಯಿಲ್ಲದ ಎಲ್ಲೂರಿನ ಸರಸ್ವತಿ ಪುತ್ರಿ ಪೂರ್ಣಿಮಾ, ಬಡ ಹುಡುಗಿಗೆ ವಿದ್ಯಾ ಪೋಷಕ್‌ನಿಂದ ಮನೆ ಕೊಡುಗೆ


ಆಕೆ ಸರಸ್ವತಿ ಪುತ್ರಿ, ಎಸ್‌ಎಸ್‌ಎಲ್ಸಿಯಲ್ಲಿ ಶೇ. ೯೪ ಅಂಕ ಪಡೆದ ಬಡ ಹುಡುಗಿ. ದೇವರು ಆಕೆಗೆ ವಿದ್ಯೆ ಕೊಟ್ಟರೇ ಹೊರತು ಸಂಪತ್ತು ಕೊಟ್ಟಿಲ್ಲ. ತಲೆ ಮೇಲೊಂದು ಸರಿಯಾದ ಸೂರಿಲ್ಲದ ಹುಡುಗಿಗೆ ಉಡುಪಿಯ ವಿದ್ಯಾಪೋಷಕ್ ಸಂಸ್ಥೆ ಸ್ಪಂದಿಸಿದೆ.
ಬಡವರ ಮನೆಗೆ ಭಾಗ್ಯ ಬರೋದು ಅಂತಾರಲ್ಲ, ಅಂತಾದ್ದೇ ಒಂದು ಮಾನವೀಯ ಕಳಕಳಿಯ ಸ್ಟೋರಿ. ಈ ಪ್ರತಿಭಾವಂತ ವಿದ್ಯಾರ್ಥಿನಿಯ ಹೆಸರು ಪೂರ್ಣಿಮಾ. ಹುಣ್ಣಿಮೆಯ ಚಂದ್ರನಂತೆ ಈಕೆಯ ಮುಖ ಅರಳುವುದಕ್ಕೊಂದು ಕಾರಣ ಇದೆ. ಬಡತನವನ್ನೇ ಹೊದ್ದು ಮಲಗಿದ್ದ ಈಕೆಯ ನೆರವಿಗೆ ಸಮಾಜ ಮುಂದಾಗಿದೆ. ಉಡುಪಿ ಜಿಲ್ಲೆ ಎಲ್ಲೂರಿನ ಪೂರ್ಣಿಮಾ ಎಸ್‌ಎಸ್‌ಎಲ್ಸಿಯಲ್ಲಿ ಶೇ. ೯೪ ಅಂಕ ಪಡೆದವಳು. ಆಕೆಯ ಅಮ್ಮ ಮೂಗಿ. ಆದರೆ ಇಂದು ಮಗಳ ಸಾಧನೆಯ ಬಗ್ಗೆ ಊರೆಲ್ಲಾ ಜನ ಮಾತನಾಡುತ್ತಿದ್ದಾರೆ.
ತಲೆಯ ಮೇಲೊಂದು ಸೂರಿಲ್ಲದ ಈ ಬಡ ಹುಡುಗಿಯ ಕಷ್ಟ ನೋಡಿ ವಿದ್ಯಾ ಪೋಷಕ್ ಸಂಸ್ಥೆ ಒಂದು ಸುಂದರ ಮನೆ ಕಟ್ಟಿಸಿಕೊಟ್ಟಿದೆ. ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಅಡುಗೆ ಅನಿಲದ ವ್ಯವಸ್ಥೆಯನ್ನೂ ಮಾಡಿದೆ. ವಿದ್ಯಾಪೋಷಕ್ನ ಈ ಯೋಜನೆಗೆ ಉಡುಪಿಯ ಉದ್ಯಮಿಗಳಾದ ಗುರುರಾಜ ಅಮೀನ್ ದಂಪತಿಗಳು ನೆರವಿನ ಹಸ್ತ ನೀಡಿದ್ದಾರೆ. ವಿದ್ಯಾ ಪೋಷಕ್ ಸಂಸ್ಥೆ ವಿದ್ಯಾರ್ಥಿಗಳ ನೆರವಿಗೆ ಧಾವಿಸುವ ಅಪರೂಪದ ಸಂಘಟನೆ. ಸಮಾಜದ ಪ್ರಮುಖರು ಈ ಸಂಘಟನೆಯಲ್ಲಿ ಸಾಮಾನ್ಯ ಸ್ವಯಂ ಸೇವಕರಾಗಿ ದುಡಿಯುತ್ತಾರೆ. ಈವರೆಗೆ ಎಂಟು ಬಡ ವಿದ್ಯಾರ್ಥಿಗಳಿಗೆ ಮನೆ ಕಟ್ಟಿಸಿಕೊಡಲಾಗಿದೆ. ಕಳೆದ ವರ್ಷ ೧,೧೦೦ ಮಕ್ಕಳಿಗೆ ಅಂದಾಜು ೮೦ ಲಕ್ಷ ರುಪಾಯಿಯಷ್ಟು ವಿದ್ಯಾರ್ಥಿ ವೇತನ ನೀಡಿ ವಿಶೇಷ ಸಾಧನೆ ಮಾಡಿದೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊರತೆಯಾಗದಂತೆ ನೋಡಿಕೊಳ್ಳುವುದು ಇವರ ಕಾಳಜಿ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾನಿಗಳನ್ನು ಹುಡುಕಿ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚ ಭರಿಸೋದು ಇವರ ಯೋಜನೆ.

Related posts

Leave a Reply